Belagavi News In Kannada | News Belgaum

ವಾಲ್ಮೀಕಿ ಸಮುದಾಯ ಬಲಾಢ್ಯವಾಗಲು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಆಂಧ್ರಪ್ರದೇಶ : ” ವಾಲ್ಮೀಕಿ ಸಮುದಾಯ ದೇಶದಲ್ಲಿ ಶೈಕ್ಷಣಿಕ, ಆರ್ಥಿಕ , ಸಾಮಾಜಿಕ ರಾಜಕೀಯವಾಗಿ ಬಲಾಢ್ಯವಾಗಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಾಗ ಮಾತ್ರ ನಾವು ಈ ವಿಷಯದಲ್ಲಿ ಯಶಸ್ವಿಯಾಗಲು ಸಾಧ್ಯ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಅಖಿಲ ಭಾರತ ಮಹರ್ಷಿ ವಾಲ್ಮೀಕಿ ಜನ ಜಾಗೃತಿಯಿಂದ ಭಾನುವಾರ ಆಂಧ್ರ ಪ್ರದೇಶ ರಾಜ್ಯದ ಅನಂತಪೂರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದರು.

ವಾಲ್ಮೀಕಿ ಸಮಾಜ ಈ ದೇಶದಲ್ಲಿ ಶ್ರಮಿಕ ಸಮುದಾಯವಾಗಿದೆ. ಆದರೆ ಈ ಸಮುದಾಯಕ್ಕೆ ಶೈಕ್ಷಣಿಕ ಮಹತ್ವ ಇಲ್ಲದೆ ಇರುವುದರಿಂದ ಬಲಾಢ್ಯ ಸಮುದಾಯವಾಗಿದ್ದರೂ ಕೂಡಾ ಆಯಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದೇವೆ. ಹಾಗಾಗಿ ನಾವು ಎಲ್ಲರೂ ದೇಶದಾದ್ಯಂತ ಒಗ್ಗಟ್ಟಿನಿಂದ ಹೋರಾಟ ಮಾಡಿ, ನಮಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ನಾವು ಚಿಂತನೆ ಮಾಡಬೇಕಾದ ಅಗತ್ಯ ಇದೆ ಎಂದರು.

ದೇಶದಲ್ಲಿ ವಾಲ್ಮೀಕಿ ಸಮುದಾಯ ನಮಗೆ ಸಿಗಬೇಕಾದ ಮೀಸಲಾತಿ ಪಡೆಯುವಲ್ಲಿ ನಾವು ಎಲ್ಲೋ ಒಂದು ಕಡೆ ಎಡವಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟ ಆರಂಭವಾಗಿದೆ. ತಮಿಳುನಾಡು, ಆಂಧ್ರಪ್ರದೇಶ, ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ನಮ್ಮ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಲ್ಲಿನ ಮೀಸಲಾತಿ ಹೋರಾಟ ಇಡೀ ದೇಶಕ್ಕೆ ಮಾದರಿಯಾಗಬೇಕು. ಈ ದಿಶೆಯಲ್ಲಿ ವಾಲ್ಮೀಕಿ ಸಮುದಾಯ ಸಾಗಬೇಕಾದ ಅವಶ್ಯಕತೆ ಇದೆ ಎಂದು ಕರೆ ನೀಡಿದರು.

ಕರ್ನಾಟಕದಿಂದ ಆಂಧ್ರದ ತೆಲಂಗಾಣದ ಅಮರಾವತಿ ವಾಲ್ಮೀಕಿ ಸಮಾವೇಶಕ್ಕೆ ಆಹ್ವಾನ ನೀಡಿರುವುದು ಹೆಚ್ಚು ಸಂತಸ ತಂದಿದೆ. ವಾಲ್ಮೀಕಿ ಸಮುದಾಯದ ಜನರು ಜಾಗೃತಗೊಳ್ಳಬೇಕು. ತಮ್ಮ ಹಕ್ಕುಗಳಿಗಾಗಿ ಇಲ್ಲಿಂದ ಹೋರಾಟ ಆರಂಭ ಮಾಡಿದ್ದೀರಿ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಇದು ದೇಶದ ಭವಿಷ್ಯತ್ತಿನಲ್ಲಿ ವಾಲ್ಮೀಕಿ ಸಮುದಾಯಕ್ಕೆ ಆಶ್ರಯವಾಗಲಿದೆ. ಈ ವೇದಿಕೆಯ ಮೂಲಕ ಆಂದ್ರಪ್ರದೇಶ ಎಸ್ಟಿ ಜನಾಂಗದ ಹೋರಾಟ ಇಡೀ ದೇಶಕ್ಕೆ ಮಾದರಿಯಾಗಲಿ ಎಂದು ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ಸಂಸದ ಡಾ.ರಂಗಯ್ಯ, ಮಾಜಿ ಸಚಿವ  ಶ್ರೀನಿವಾಸ ಕಾವಲು, ರಾಜನಹಳ್ಳಿ ವಾಲ್ಮೀಕಿ ಪೀಠಾಧಿಪತಿ ಪ್ರಸಾನಂದಪುರಿ  ಸ್ವಾಮಿಜೀ,  ದೆಹಲಿ ವಾಲ್ಮೀಕಿ ಸ್ವಾಮಿಜೀ, ಶ್ರೀನಿವಾಸ ಕಾವಲು ಅವರ ಪುತ್ರ ಭರತ್ ಸೇರಿದಂತೆ ಇತರರು ಇದ್ದರು./////