Belagavi News In Kannada | News Belgaum

ಕೊಗನೊಳ್ಳಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಭೇಟಿ

ಬೆಳಗಾವಿ, ನ.28  : ಕೋವಿಡ್ ರೂಪಾಂತರಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ರಾಜ್ಯದ ಗಡಿಭಾಗದಲ್ಲಿರುವ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಗೆ ಭಾನುವಾರ (ನ.28) ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸರಕಾರದ ಮಾರ್ಗಸೂಚಿ ಪ್ರಕಾರ ನೆರೆಯ ಮಹಾರಾಷ್ಟ್ರ ರಾಜ್ಯದ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಪೂರ್ವ ಅವಧಿಯ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಅಥವಾ ಎರಡು ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ. ಆದ್ದರಿಂದ ನೆಗೆಟಿವ್ ವರದಿ ಹೊಂದಿದವರನ್ನು ಮಾತ್ರ ರಾಜ್ಯದೊಳಗೆ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗಡಿಭಾಗದಲ್ಲಿರುವ ಚೆಕ್ ಪೋಸ್ಟ್ ಮೂಲಕ ಸಾಗುವ ಪ್ರತಿಯೊಂದು ವಾಹನವನ್ನು ತಡೆದು ಪ್ರಯಾಣಿಕರು ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಹೊಂದಿರುವುದನ್ನು ಅಥವಾ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರ್ತವ್ಯ ನಿರತ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಕೆಲವು ವಾಹನಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಇಲ್ಲದಿರುವುದರಿಂದ ವಾಪಸ್ ಕಳುಹಿಸಿದರು.
ಕೊಗನೊಳ್ಳಿ ಚೆಕ್ ಪೋಸ್ಟ್ ಪ್ರಮುಖ ಚೆಕ್ ಪೋಸ್ಟ್ ಆಗಿರುವುದರಿಂದ ಅಂತರರಾಜ್ಯ ಸಂಚರಿಸುವ ವಾಹನಗಳ ಮೇಲೆ ನಿರಂತರ ನಿಗಾ ವಹಿಸಬೇಕು.
ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಸರಕಾರ ಪ್ರಕಟಿಸುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನವನ್ನು ನೀಡಿದರು.
ನಿಪ್ಪಾಣಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೊಗನೊಳ್ಳಿ, ಕೋಡಣಿ, ಬೋರಗಾಂವ ಹಾಗೂ ಮಾಂಗೂರ ಸೇರಿದಂತೆ ಒಟ್ಟು ಐದು ಕೂಡ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಅಂತರರಾಜ್ಯ ಸಂಚರಿಸುವ ವಾಹನಗಳನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತಿದೆ. ಪ್ರಯಾಣಿಕರು ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಹೊಂದಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶವನ್ನು ನೀಡಲಾಗುತ್ತಿದೆ. ಇಲ್ಲದಿದ್ದರೆ ವಾಹನಗಳನ್ನು ವಾಪಸ್ ಕಳಿಸಲಾಗುತ್ತಿದೆ ಎಂದು ನಿಪ್ಪಾಣಿ ತಹಶಿಲ್ದಾರ ಮೋಹನ‌ ಭಸ್ಮೆ ಅವರು ಮಾಹಿತಿಯನ್ನು ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದಾದ ಬಳಿಕ ಕಾಗವಾಡ ಚೆಕ್ ಪೋಸ್ಟ್ ಗೆ ಕೂಡ ಭೇ ನೀಡಿದ ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಅವರು, ಅಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಪರಿಶೀಲಿಸಿದರು.