Belagavi News In Kannada | News Belgaum

ಅಥಣಿಯಲ್ಲಿ ಕವಟಗಿಮಠ ಪರ ಪ್ರಚಾರ,ಪತ್ರಿಕಾ ಗೋಷ್ಠಿ

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪುನರಾಯ್ಕೆ ಬಯಸಿದ ಮಹಾಂತೇಶ ಕವಟಗಿಮಠ  ಅವರನ್ನು  ಬೆಂಬಲಿಸುವ ಮೂಲಕ ಭಾರತೀಯ ಜನತಾ ಪಕ್ಷವನ್ನು  ಮತ್ತಷ್ಟು ಬಲಪಡಿಸಬೇಕು ಎಂದು  ರಾಜ್ಯ ಬಿಜೆಪಿ ವಕ್ತಾರ ಹಾಗೂ ನ್ಯಾಯವಾದಿ  ಎಂ. ಬಿ ಜಿರಳೆ ಹೇಳಿದರು.

 

 ಅವರು ಅಥಣಿ ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಮಹಾಂತೇಶ ಕವಟಗಿಮಠ ಅವರು ಕಳೆದ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ  ಜನಸೇವೆ ಮಾಡುವ ಮೂಲಕ  ಜನಮೆಚ್ಚುಗೆ ಗಳಿಸಿದ್ದಾರೆ. ತಮ್ಮ ಕ್ಷೇತ್ರದ  ಎಲ್ಲ ಗ್ರಾಪಂ ಸದಸ್ಯರಿಗೆ ಸ್ಪಂದಿಸಿ, ಗ್ರಾಪಂ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ಅವರಿಗೆ ಮತದಾರರು ತಮ್ಮ ಮೊದಲ ಪ್ರಾಶಸ್ತ್ಯ ಮತವನ್ನು ನೀಡುವ ಮೂಲಕ ಮತ್ತೆ ಅವರನ್ನ ಪುನರಾಯ್ಕೆ ಮಾಡಬೇಕು. ಕೇಂದ್ರದಲ್ಲಿ  ನರೇಂದ್ರ ಮೋದಿ ಸರ್ಕಾರ ಮತ್ತು  ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರಕಾರಕ್ಕೆ  ಮತ್ತಷ್ಟು ಬಲವನ್ನು ತುಂಬುವ ದೃಷ್ಟಿಯಿಂದ  ಮತದಾರರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು  ವಿನಂತಿಸಿದರು.
 ಭಾರತೀಯ ಜನತಾ ಪಕ್ಷದ ಸರಕಾರ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು  ತಡೆಯುವುದರ ಜೊತೆಗೆ  ಗ್ರಾಮೀಣ ಮಟ್ಟದ ಸಮಸ್ಯೆಗಳಿಗೆ  ಗ್ರಾಪಂ ಆಡಳಿತ ಸದಸ್ಯರೇ ಪರಿಹಾರ ರೂಪಿಸುವ ನಿಟ್ಟಿನಲ್ಲಿ  ಸಂಕಲ್ಪ ಹೊಂದಿ  ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕೊರೋನಾ ಸಂದರ್ಭದಲ್ಲಿ  ಕೇಂದ್ರ ಸರ್ಕಾರ  ಮತ್ತು ರಾಜ್ಯ ಸರ್ಕಾರ  ಜನದನ್ ಬ್ಯಾಂಕಿನ ಖಾತೆದಾರರಿಗೆ ಸಹಾಯಧನ ನೀಡುವ ಮೂಲಕ  ಸ್ಪಂದನೆ ಮಾಡಲಾಗಿದೆ. ಜನಪರ ಕಾರ್ಯ ಮಾಡುತ್ತಿರುವ  ಭಾರತೀಯ ಜನತಾ ಪಕ್ಷವನ್ನು  ಮತದಾರರು ಬೆಂಬಲಿಸಬೇಕು ಎಂದು ಹೇಳಿದರು.
 ಮಾಜಿ ಸಚಿವ ರಮೇಶ್ ಜಾರಕಿಹೊಳಿ  ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಮುಜುಗರ ಉಂಟು ಮಾಡಿಲ್ಲ. ಅವರು ಪಕ್ಷೇತರ ಅಭ್ಯರ್ಥಿಯ ಪರವಾಗಿ ಎಲ್ಲಿಯೂ ಪ್ರಚಾರ ನಡೆಸಿಲ್ಲ. ಅವರು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರವಾಗಿ  ಕೆಲಸ ಮಾಡುತ್ತಿದ್ದಾರೆ ಎಂಬುದು ಊಹಾಪೋಹ ಅಷ್ಟೇ ಇದೆ. ಮತದಾರರು ಇಂತಹವುಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.
ಈ ವೇಳೆ ಚಿಕ್ಕೋಡಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ, ಅಥಣಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಅಜಿತ್ ಪವಾರ್, ಉಪಾಧ್ಯಕ್ಷ  ಪುಟ್ಟು ಹಿರೇಮಠ, ಮುಖಂಡರಾದ ವಿಕಾಸ್  ತಾಂಬಟ, ಸುರೇಶ್ ಕೋಳಿ, ಶ್ರೀನಿವಾಸ ಪಟ್ಟಣ, ರಾಜು ಗಾಡಿವಡ್ಡರ, ಇನ್ನಿತರರು ಉಪಸ್ಥಿತರಿದ್ದರು.