Belagavi News In Kannada | News Belgaum

ಅಥಣಿ ಹೆಸ್ಕಾಮ್ ನಲ್ಲಿ ಕೋಟಿ ರೂಪಾಯಿ ಹಗರಣ.ಅನುಮಾನ ಹುಟ್ಟಿಸಿದ ಮೇಲಾಧಿಕಾರಿಗಳ ಮೌನ ಭಾಗ-೧

ಅಥಣಿ: ತಾಲೂಕಿನ ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಜಲಾವೃತವಾದ ವಿದ್ಯುತ್ ತಂತಿ,ವಿದ್ಯುತ್ ಕಂಬಗಳು, ಟ್ರಾನ್ಸಫಾರ್ಮರ್ ಸೇರಿದಂತೆ ದುರಸ್ತಿ ಕಾರ್ಯಗಳಿಗೆ ಬೇಕಾಬಿಟ್ಟಿ ಖರ್ಚು ಹಾಕಲಾಗಿದ್ದು ಮಾಡದ ಕೆಲಸಕ್ಕೂ ಸರ್ಕಾರಿ ವೆಚ್ಚ ಬರೆದು ಹಣ ಕೊಳ್ಳೆ ಹೊಡೆಯಲು ಅಥಣಿ ಹೆಸ್ಕಾಮ್ ಅಧಿಕಾರಿಗಳು ಸಂಚು ರೂಪಿಸಿದ್ದ ಬಗ್ಗೆ ಸದ್ಯ ಮಾಹಿತಿ ಲಭ್ಯವಾಗಿದೆ.ಹುಬ್ಬಳ್ಳಿ ವಿದ್ಯುತ್ ಪ್ರಸರಣ ವಿಭಾಗದ ಎಮ್ ಡಿ ಅವರ ಗಮನಕ್ಕೂ ಈ ವಿಷಯ ಬಂದಿದ್ದು ಪ್ರಕರಣದ ತನಿಖೆಗಾಗಿ ವಿಶೇಷ ತಂಡ ಆಗಮಿಸಿ ತಿಂಗಳುಗಳೇ ಕಳೆದರೂ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸದೆ ಇರುವ ಬಗ್ಗೆ ಸದ್ಯ ಹಲವು ಅನುಮಾನಗಳು ಮೂಡಿವೆ. ಪರ್ಸೆಂಟೆಜ್ ಲೆಕ್ಕಾಚಾರದಲ್ಲಿ ತಪ್ಪಿತಸ್ಥ ಸೆಕ್ಷಣ್ ಆಫಿಸರ್ ಮತ್ತು ಎಇಗಳನ್ನು ಉಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಇನ್ನೂ ಅಥಣಿ ಪಟ್ಟಣದ ಹಲವೆಡೆ ಹಳೆಯ ವಿದ್ಯುತ್ ತಂತಿಗಳ ಬದಲಾವಣೆ,ಪದೆ ಪದೆ ದುರಸ್ತಿಗೆ ಬರುವ ಟಿಸಿಗಳ ಬದಲಾವಣೆ ಮಾಡದೆ ಖರ್ಚು ಹಾಕಲಾಗುತ್ತಿದ್ದು ನಷ್ಟ ಉಂಟುಮಾಡಿ ಅಧಿಕಾರಿಗಳು ಹಣ ಕೊಳ್ಳೆ ಹೊಡೆಯುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿಬಂದಿವೆ.ತಾಲೂಕಿನ ಹಲವು ಕಡೆ ವಿನಾಕಾರಣ ವಿದ್ಯುತ್ ಸ್ಥಗಿತ,ಅಪಾಯಕಾರಿ ಸ್ಥಳಗಳಲ್ಲಿ ಜೀವರಕ್ಷಣೆಗೆ ಆದ್ಯತೆ ಕೊಡದೆ ಮನಸಿಗೆ ಬಂದಂತೆ ವಿದ್ಯುತ್ ಸಂಪರ್ಕ ಕೊಡಲಾಗಿದ್ದು ಹೆಸ್ಕಾಮ್ ಅಧಿಕಾರಿಗಳಿಗೆ ಹಣ ಕೊಟ್ಟರೆ ಏನು ಬೇಕಾದರೂ ಮಾಡಿಕೊಳ್ಳಬಹುದಾಗಿದೆ ಎನ್ನಲಾಗುತ್ತಿದೆ. ಅಥಣಿ ಪಟ್ಟಣದ ಹಲ್ಯಾಳ ರಸ್ತೆ, ಅಂಬೇಡ್ಕರ್ ಸರ್ಕಲ್ ಸಿದ್ದೇಶ್ವರ ದೇವಸ್ಥಾನದ ರಸ್ತೆಗಳಲ್ಲಿ ತಾತ್ಕಾಲಿಕ ಗೂಡು ಅಂಗಡಿಗಳಿಗೆ ವಿದ್ಯುತ್ ಕನೆಕ್ಷಣ್ ಕೊಡುವ ಮೂಲಕ ಕಮರ್ಷಿಯಲ್ ಯೂಸೆಜ್ ದರ ವಿಧಿಸದೆ ಮನೆ ಬಳಕೆ ಎಂದು ಅನುಮತಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ, ಪಟ್ಟಣದ ಹಲವು ವಾರ್ಡಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಗೊಂಡು ಈಗಲೊ ಆಗಲೋ ಬೀಳುವ ಸ್ಥಿತಿಯಲ್ಲಿ ಇದ್ದರೂ ಕೂಡ ಕಂಬಗಳ ಬದಲಾವಣೆ ಮಾಡದೆ ಬೇಜವಾಬ್ದಾರಿ ತೋರಿಸಲಾಗುತ್ತಿದೆ. ಹಲವು ರಸ್ತೆಗಳ ಮೇನ್ ಲೈನ್ ಗಳಿಗೆ ಹೊಂದಿಕೊಂಡು ಖಾಸಗಿ ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆಗೆ ಸದ್ಯ ಅಥಣಿ ಹೆಸ್ಕಾಮ ಅಧಿಕಾರಿಗಳಿಂದ ಉತ್ತರ ಮಾತ್ರ ಸಿಗುತ್ತಿಲ್ಲ.
ಈ ಹಿಂದೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹಲವು ಬಾರಿ ಹೆಸ್ಕಾಮ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಕೂಡ ಎತ್ತು ಏರಿಗೆ ಕೋಣ ನೀರಿಗೆ ಎನ್ನುವಂತಾಗಿದ್ದು ಕೆಲಸ ಮಾಡಿ ಇಲ್ಲವಾದರೆ ವರ್ಗಾವಣೆ ತೆಗೆದುಕೊಳ್ಳಿ ಎಂದರೂ ಕೂಡ ಶಾಸಕರ ಮಾತಿಗೂ ಬೆಲೆ ಕೊಡದ ಹೆಸ್ಕಾಮ್ ಅಧಿಕಾರಿಗಳು ತಮ್ಮ ತಪ್ಪು ತಿದ್ದಿಕೊಳ್ಳದೆ ಇರುವದು ನೋಡಿದರೆ ಹೆಸ್ಕಾಮ್ ಅಧಿಕಾರಿಗಳು ತಮ್ಮ ದೌಲತ್ತಿನ ದರ್ಬಾರ್ ನಡೆಸುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೂ ಹಳೆಯ ವಿದ್ಯುತ್ ತಂತಿಗಳ ಗುಜರಿ, ಹೊಸ ವಸ್ತುಗಳ ಖರೀದಿ,ಹೊಸ ಲೈನ್ ಮತ್ತು ಡಿಜಿಟಲ್ ವಿದ್ಯುತ್ ಮೀಟರ್ ಅಳವಡಿಕೆಯಲ್ಲಿಯೂ ಭಾರಿ ಅಕ್ರಮ ಎಸಗಲಾಗುತ್ತಿದ್ದು ಒಬ್ಬೊಬ್ಬ ಅಧಿಕಾರಿಯೂ ಭ್ರಷ್ಟಾಚಾರದ ಹಣದಿಂದ ಕೋಟ್ಯಂತರ ರೂಪಾಯಿಗಳ ಆಸ್ತಿ ಮಾಡಿದ್ದು ಜನರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಅನ್ನುವದು ಒಂದು ಕಡೆಯಾದರೆ ರಾಜಕೀಯ ಮುಖಂಡರ ಕೃಪಾ ಕಟಾಕ್ಷದಿಂದ ತನಿಖೆಯಿಂದ ಪಾರಾಗಲು ಮತ್ತು ಕಾನೂನು ಕ್ರಮ ಜರುಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಹುಬ್ಬಳ್ಳಿ ಮತ್ತು ಬೆಂಗಳೂರಿನತ್ತ ಮುಖ ಮಾಡುತ್ತಿದ್ದು ಸ್ಥಳಿಯ ಸರ್ಕಾರಿ ಕಟ್ಟಡಗಳ ವಿದ್ಯುತ್ ಬಿಲ್ ಬಾಕಿ ವಸೂಲಿ ಹಾಗೆಯೆ ಉಳಿಯುತ್ತಿದ್ದು ಅಥಣಿ ಹೆಸ್ಕಾಮ್ ನಷ್ಟದತ್ತ ಸಾಗುವಂತಾಗಿದ್ದು ಪಾರದರ್ಶಕ ತನಿಖೆಯ ಬಗ್ಗೆ ಸದ್ಯ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳು ಮೂಡಿವೆ.