Belagavi News In Kannada | News Belgaum

ಹಾರೂಗೇರಿ ಪೋಲಿಸರಿಂದ ಅಂತರ್ ಜಿಲ್ಲಾ ಕಳ್ಳರ ಭರ್ಜರಿ ಬೇಟೆ

 

ಹಾರೂಗೇರಿ : ಕಳ್ಳರ ಕೈಚಳಕದಿಂದ ಹಲವಾರು ಜಿಲ್ಲೆಗಳ ದೇವಸ್ಥಾನಗಳಲ್ಲಿ ಅಪಾರ ಪ್ರಮಾಣದ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಹಾಗೂ ಅವರ ಹತ್ತಿರವಿದ್ದ ಒಂದು ಕಾರು, ಮೋಟಾರ್ ಸೈಕಲ್, 2 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಂಡ ಹಾರೂಗೇರಿ ಪೋಲಿಸರು ಸುಮಾರು 20 ಲಕ್ಷ ರೂಪಾಯಿಗಳ ಬೆಲೆಯ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚಿಗೆ ಸಪ್ಟೆಂಬರ್‌ 21 ರಂದು ರಾತ್ರಿ ಸಮಯದಲ್ಲಿ ಕಳ್ಳರು ಸಮೀಪದ ಖಣದಾಳ ಗ್ರಾಮದ ಹುಲಕಾಂತೇಶ್ವರ ದೇವಸ್ಥಾನಕ್ಕೆ ಹಾಕಿದ್ದ ಕೀಲಿ ಮುರಿದು ಗರ್ಭಗುಡಿಯ ಬಾಗಿಲದ ಕೊಂಡೆ ಮುರಿದು ಒಳಗೆ ಹೋಗಿ ತಿಜೋರಿ ತೆಗೆದು ಅದರಲ್ಲಿಟ್ಪಿದ್ದ ಬೆಳ್ಳಿಯ ವಿಗ್ರಹ, ನಾಗರಹೆಡೆ, ಕುದುರೆ, ಬೆತ್ತ, ಪಾದುಕೆಗಳು, ಗುಂಡಗಡಿಗೆಗಳು, ಬಂಗಾರದ ಕಣ್ಣಬಟ್ಟುಗಳು ,ದೇವರ ಮೂರ್ತಿಗಳು ಹೀಗೆ ಹಲವಾರು ರೀತಿಯ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದರು.

ಇವರನ್ನು ಪತ್ತೆ ಹಚ್ಚಲು ಹಾರೂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಗಲು-ರಾತ್ರಿಯೆನ್ನದೆ ಸುಮಾರು ಆರು ಜಿಲ್ಲೆಗಳನ್ನು ಸುತ್ತಾಡಿ ಕೊನೆಗೂ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣವನ್ನು ಪತ್ತೆ ಹಚ್ಚಲು ಬೆಳಗಾವಿ ಜಿಲ್ಲೆ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಹಾಗೂ ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ ಮತ್ತು ಅಥಣಿ ಡಿಎಸ್ಪಿ ಎಸ್ ವಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಹಾರೂಗೇರಿ ಸಿಪಿಐ ಕೆ ಎಸ್ ಹಟ್ಟಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ , ಈ ಪ್ರಕರಣದ ಸಮಸ್ತ ಮುಂದಾಳತ್ವವನ್ನು ತನಿಖಾ ವಿಭಾಗದ ಪಿಎಸ್ಐ ಆರ್ ಆರ್ ಕಂಗನೊಳ್ಳಿ ಹಾಗೂ

ಕಾನೂನು ಸುವ್ಯವಸ್ಥೆಯ ಪಿಎಸ್ಐ ರಾಘವೇಂದ್ರ ಖೋತ ವಹಿಸಿಕೊಂಡು , ಸಿಬ್ಬಂದಿಗಳಾದ ರಾಜು ಕಟೇಕರಿ, ಪುರುಷೋತ್ತಮ ನಾಯಕ್, ಅಶೋಕ್ ಶಾಂಡಗೆ, ಬಸವರಾಜ್ ಹೊಸಟ್ಟಿ, ಪ್ರಕಾಶ್ ಸಪ್ತಸಾಗರ, ಕುಮಾರ್ ಪವಾರ , ಹನುಮಂತ ಅಂಬಿ, ಬಿ ಬಿ ಶಿರಗೂರ ಇವರೆಲ್ಲರ ಅವಿರತ ಶ್ರಮದಿಂದಾಗಿ ಹಾಗೂ ಚಾಣಾಕ್ಷ ಆಡಳಿತದಿಂದಾಗಿ ಕೊಪ್ಪಳ ಜಿಲ್ಲಿಯ ಆರೋಪಿಗಳಾದ ತುಳುಗೇರ ಗ್ರಾಮದ ಶರಣಪ್ಪ ಮಿಟ್ಲುಕೋಡು, ಮಡಿಕೇರಿ ಗ್ರಾಮದ ಸಂಗಪ್ಪ ಹರಿಜನ ಇವರನ್ನು ಬಂಧಿಸಿ, ಇವರು ಕಳ್ಳತನ ಮಾಡಿದ ಬೆಳಗಾವಿ ಜಿಲ್ಲೆಯ ಖಣದಾಳ ಗ್ರಾಮದ ಹುಲಕಾಂತೇಶ್ವರ ದೇವಸ್ಥಾನ, ಗೊಡಚಿಯ ಕಾಳಿಕಾದೇವಿ ದೇವಸ್ಥಾನ, ಬಾಗಲಕೋಟೆ, ಕೊಪ್ಪಳ, ಗದಗ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹತ್ತು-ಹನ್ನೆರಡು ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಒಟ್ಟು 25 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು ಹಾರೂಗೇರಿ ಪೊಲೀಸ್ ಠಾಣೆಯ ಗತ್ತು ತೋರಿಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.