Belagavi News In Kannada | News Belgaum

ವಿದ್ಯಾರ್ಥಿಗಳು ತಮ್ಮ ಕಾಲ ಮೇಲೆ ನಿಲ್ಲುವುದಕ್ಕಾಗಿ ಶಿಕ್ಷಣವನ್ನು ಪಡೆಯಬೇಕು, : ಅಮರೇಶ್ ಬಿರಾದಾರ

ಶೇಡಬಾಳ: ವಿದ್ಯಾರ್ಥಿಗಳು ತಮ್ಮ ಕಾಲ ಮೇಲೆ ನಿಲ್ಲುವುದಕ್ಕಾಗಿ ಶಿಕ್ಷಣವನ್ನು ಪಡೆಯಬೇಕು, ಅದರಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಇದಕ್ಕೆ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗೂ ಸಾಂಸ್ಕøತಿಕ ವೇದಿಕೆಯಾದ ಕಾಲೇಜು ಒಕ್ಕೂಟ ಸಹಕಾರಿಯಾಗಿದೆ ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಶರಣರಾದ ಶ್ರೀ ಅಮರೇಶ್ ಬಿರಾದಾರ ಹೇಳಿದರು.
ಕಾಗವಾಡ ಶಿವಾನಂದ ಮಹಾವಿದ್ಯಾಲಯದ 2021-22 ನೇ ಸಾಲಿನ ಕಾಲೇಜು ಒಕ್ಕೂಟ ಹಾಗೂ ಕರ್ನಾಟಕ ಸಾಂಸ್ಕøತಿಕ ಸಂಘದ ಉದ್ಘಾಟನೆಯ ಸಾನಿಧ್ಯವನ್ನು ವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವ್ಯಕ್ತಿ ಅಳಿದು ಹೋದರೂ ಆತನ ಕಾರ್ಯ ಆತನನ್ನು ಜೀವಂತವಾಗಿಡುತ್ತದೆ.

 

ಅಂತಹ ಕಾರ್ಯವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಅಂದಾಗ ಮಾತ್ರ ವಿದ್ಯಾರ್ಥಿ ಕಲಿತ ಶಿಕ್ಷಣಕ್ಕೆ ಬೆಲೆ ಬರುವುದಕ್ಕೆ ಸಾಧ್ಯ. ಅಂತರ್ಮುಖತೆಯಿಂದ, ಬುದ್ಧಿಶಕ್ತಿ ಬೆಳೆಯಬೇಕು ಇದರ ಜೊತೆಗೆ ತಾರ್ಕಿಕ ಚಿಂತನೆಗಳು ಬೆಳೆಯಬೇಕು ಇವು ಕೇವಲ ಪಠ್ಯದಿಂದ ಸಾಧ್ಯವಿಲ್ಲ ಇವೆಲ್ಲವೂ ಪಠ್ಯೇತರ ಚಟುವಟಿಕೆಗಳಿಂದಲೇ ಸಾಧ್ಯವಾಗುವಂತಹದ್ದಾಗಿದ್ದು ವಿದ್ಯಾರ್ಥಿಗಳು ಹೆಚ್ಚೆಚ್ಚು ರೀತಿಯಲ್ಲಿ ಇದರಲ್ಲಿ ಭಾಗವಹಿಸುವಂತಾಗಬೇಕು ಎಂದರು.

 

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಚಿಕ್ಕೋಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ರೋಹಿಣಿ. ಜೆ ಅವರು ಸತತ ಅಭ್ಯಾಸ, ಸತತ ಪ್ರಯತ್ನದಿಂದಲೇ ವ್ಯಕ್ತಿ ಸಾಧನೆಯ ಶಿಖರವನ್ನು ಮುಟ್ಟುವುದಕ್ಕೆ ಸಾಧ್ಯ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಮನುಷ್ಯನಲ್ಲಿ ಸುಖ-ದು:ಖ ಎರಡೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಬರಬೇಕು.

 

ಇದು ಮನುಷ್ಯನನ್ನು ಸಾಧನೆಯ ಪಥದೆಡೆಗೆ ಒಯ್ಯುತ್ತದೆ. ಗುರಿಯನ್ನು ತಲುಪಬೇಕಾದರೆ ಮನೋಸ್ಥೈರ್ಯ ಮುಖ್ಯವಾಗುತ್ತದೆ. ಅತೀಯಾದ ಆತ್ಮವಿಶ್ವಾಸವೂ ಒಮ್ಮೋಮ್ಮೆ ಕೈ ಕೊಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ನಿರಂತರ ಪ್ರಯತ್ನದಿಂದಲೇ ಗುರಿಯನ್ನು ಮುಟ್ಟುವುದಕ್ಕೆ ಶ್ರಮವಹಿಸಬೇಕು ಎಂದರು.

ಸಮಾರಂಭದಲ್ಲಿ ಉಪಸ್ಥಿತಿಯನ್ನು ನೀಡಿದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಪ್ರೊ. ಬಿ. ಎ. ಪಾಟೀಲರವರು ಆತ್ಮವಿಶ್ವಾಸದಿಂದ ಬದುಕಿನ ಗುರಿಯ ಕಡೆಗೆ ವಿದ್ಯಾರ್ಥಿಗಳು ಗಮನಹರಿಸಬೇಕು ಅಂದಾಗ ಮಾತ್ರ ಸಾರ್ಥಕ ಗುರಿಯನ್ನು ಮುಟ್ಟುವುದಕ್ಕೆ ಸಾಧ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿ.ಎಸ್.ತುಗಶೆಟ್ಟಿ ಮಾತನಾಡಿ ವಿದ್ಯಾಥಿಗಳು ತಮ್ಮಲ್ಲಿ ಅಡಗಿದ ಸುಪ್ತವಾದ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ಮಹಾವಿದ್ಯಾಲಯದ ಕಾಲೇಜು ಒಕ್ಕೂಟ ಪ್ರಮುಖವಾದ ವೇದಿಕೆಯಾಗಿದ್ದು ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಒಕ್ಕೂಟಿನ ಸಂಯೋಜಕರಾದ ಪ್ರೊ. ಜೆ.ಕೆ.ಪಾಟೀಲ ಅವರು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ನೆರೆದ ಶಿವಾನಂದ ಮಹಾವಿದ್ಯಾಲಯವು ಸಂಸ್ಕøತಿಯನ್ನು ಬಿಂಬಿಸುವ, ಮೌಲ್ಯಗಳನ್ನು ಪ್ರೇರೆಪಿಸುವ ಸಂಸ್ಥೆಯಾಗಿದ್ದು ವಿದ್ಯಾರ್ಥಿಗಳು ಇಲ್ಲಿ ಪ್ರವೇಶಾತಿಯನ್ನು ಪಡೆದಿದ್ದು ತಮ್ಮ ಸುಕೃತ ಎಂದು ಭಾವಿಸಿಕೊಂಡು ಜ್ಞಾನರ್ಜನೆಯನ್ನು ಪಡೆಯಬೇಕು ಮತ್ತು ತಮ್ಮ ಆಸಕ್ತಿಯನ್ನು ಉತ್ತಮ ರೀತಿಯಲ್ಲಿ ಸಾಕಾರಗೊಳಿಸಿಕೊಳ್ಳಲು ಕಾಲೇಜುನ ಒಕ್ಕೂಟ ಮುಖ್ಯ ವೇದಿಕೆಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಬಿ.ಎ ಪಾಟೀಲರವರನ್ನು ಸತ್ಕರಿಸಲಾಯಿತು.

ಉಪಪ್ರಾಚಾರ್ಯರಾದ ಡಾ.ಎಸ್ ಎ ಕರ್ಕಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮಹಾವಿದ್ಯಾಲಯದ ಆದರ್ಶ ವಿದ್ಯಾರ್ಥಿ ಮತ್ತು ಆದರ್ಶ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೀಣಾ ಭತಗೆ ಮತ್ತು ಸಂಗಡಿಗರು ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಡಾ. ಎ.ಎಂ.ಜಕ್ಕಣ್ಣವರ ಸ್ವಾಗತಿಸಿ ಪರಿಚಯಿಸಿದರು. ಪ್ರೊ.ಮಿಸ್ ವಾಣಿಶ್ರೀ ಪಾಟೀಲ ವಂದಿಸಿದರು. ಪ್ರೊ. (ಶ್ರೀಮತಿ) ಎಸ್.ಡಿ.ಮಗದುಮ್ಮ ನಿರೂಪಿಸಿದರು.