Belagavi News In Kannada | News Belgaum

ಅಥಣಿಯಲ್ಲಿ ಇದ್ದು ಇಲ್ಲದಂತಾದ ಕಾರ್ಮಿಕ ಇಲಾಖೆ

 

ಅಥಣಿ:ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊರೊನಾ ಕಾರಣದಿಂದಾಗಿ ದುಡಿಯುವ ವರ್ಗಗಳು ಕೆಲಸವಿಲ್ಲದೆ ಪರದಾಡಿದ್ದು ನಿತ್ಯದ ದುಡಿಮೆಯನ್ನು ನಂಬಿ ಬದುಕುವ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಲು ಕಾರ್ಮಿಕ ಇಲಾಖೆಯಿಂದ ಹತ್ತು ಹಲವು ಸಹಾಯಧನ ನೀಡಲಾಗುತ್ತಿದೆ.ಅಷ್ಟೇ ಅಲ್ಲದೆ ಕಾರ್ಮಿಕರಿಗಾಗಿ ಸುರಕ್ಷತಾ ಕಿಟ್,ಆಹಾರದ ಪಡಿತರ ಕಿಟ್ ವಿತರಣೆಗೆ ಬಂದಿದ್ದು ಅಥಣಿ ತಾಲೂಕಿನ ಕಾರ್ಮಿಕ ಇಲಾಖೆಯಲ್ಲಿ ಅವ್ಯವಸ್ಥೆ ತಾಂಡವ ಆಡುತ್ತಿದೆ.

 

ಒಂದು ಕಡೆ ನಕಲಿ ಕಾರ್ಡ ದಾರರು ಮತ್ತು ಅಸಲಿ ಕಾರ್ಮಿಕರ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು ಅಥಣಿ ತಾಲೂಕಿನಲ್ಲಿ ಇರುವ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.ಸರ್ಕಾರದ ಯೋಜನೆಯ ಫಲಾನುಭವಿ ಆಗಲು ಕಾರ್ಮಿಕ ಕಾರ್ಡ ಅಗತ್ಯವಿದ್ದು ಕಾರ್ಡುಗಳ ನೊಂದಣಿಗೆ ಸಿಎಸ್ಇ ಕೇಂದ್ರಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯಲಾಗುತ್ತಿದ್ದು ಕಡಿವಾಣ ಇಲ್ಲದಂತಾಗಿದೆ.

 

ಒಂದು ಕಾರ್ಡ್ ಮಾಡಲು ಮೂರು ನೂರ ಐವತ್ತು ರೂಪಾಯಿಯಷ್ಟು ಹಣ ಪಡೆಯಲು ಅವಕಾಶ ಇದ್ದರೂ ಕೂಡ ಸಾವಿರ, ಹನ್ನೆರಡನೂರು ಹೀಗೆ ಮನಸಿಗೆ ಬಂದಂತೆ ಹಣ ವಸೂಲಿ ಮಾಡಲಾಗುತ್ತಿದೆ.ಅಷ್ಟೇ ಅಲ್ಲದೆ ತಾಲೂಕಿನ ಹಲವು ಕಡೆ ಬಾಲಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದ್ದರೂ ಕೂಡ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ.

 

ಅಥಣಿ ತಾಲೂಕಿನ ಹಲವು ಕಡೆ ಇಟ್ಟಿಗೆ ಬಟ್ಟಿ,ಗ್ಯಾರೇಜ್,ಹೋಟೆಲ್,ಬೇಕರಿ ಸೇರಿದಂತೆ ಅಪಾಯಕಾರಿ ಸ್ಥಳಗಳಲ್ಲಿ ಬಾಲಕಾರ್ಮಿಕರನ್ನು ದುಡಿಸಲಾಗುತ್ತಿದ್ದು ಇಲ್ಲಿಯವರೆಗೆ ಒಂದೂ ಪ್ರಕರಣ ದಾಖಲಾಗದೆ ಇರುವದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.ಇನ್ನೂ ಕಾರ್ಮಿಕರ ಪಿಂಚಣಿ, ಮಕ್ಕಳ ವಿದ್ಯಾಬ್ಯಾಸದ ಸ್ಕಾಲರ್ ಷಿಪ್,ಕಾರ್ಮಿಕರ ಮಕ್ಕಳ ಮದುವೆ ಸಹಾಯಧನ,ಅಪಘಾತ ಸಮಯದಲ್ಲಿ ಜೀವವಿಮೆ ಮತ್ತು ಪರಿಹಾರ ಸೇರಿದಂತೆ ಹಲವು ಯೋಜನೆಗಳಿಗಾಗಿ ಫಲಾನುಭವಿಗಳು ನಿತ್ಯ ಕಚೇರಿಗೆ ಅಲೆದಾಡಿದರೂ ಕೂಡ ಕಾರ್ಮಿಕ ಇಲಾಖೆಯ ಕಚೇರಿ ಬಾಗಿಲು ಹಾಕಿದ್ದನ್ನು ಕಂಡು ಅಧಿಕಾರಿಯ ವಿರುದ್ದ ಹಿಡಿಶಾಪ ಹಾಕುವಂತಾಗಿದೆ.

 

ಕಾರ್ಮಿಕ ಇಲಾಖೆಗೆ ಅಥಣಿ,ನಿಪ್ಪಾಣಿ ಚಿಕ್ಕೋಡಿ ಹೀಗೆ ಹಲವು ಕಡೆ ಒಬ್ಬರೆ ಅಧಿಕಾರಿಗಳು ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದು ತಾಲೂಕಿನ ಜನರ ಕುಂದುಕೊರತೆಗೆ ಸ್ಪಂದಿಸುವವರೇ ಇಲ್ಲದಂತಾಗಿದೆ.ಇನ್ನೊಂದು ಕಡೆ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದು ಗುತ್ತಿಗೆ ಆಧಾರದಲ್ಲಿ ಕಚೇರಿ ಸ್ವಚ್ಚತೆಗೆ ಮತ್ತು ಅಧಿಕಾರಿಗಳ ಸಹಾಯಕ್ಕೆ ನೇಮಕವಾದವರೆ ಸದ್ಯ ಅಧಿಕಾರಿಗಳಂತೆ ಕೆಲಸ ನೀರ್ವಹಿಸುತ್ತಿದ್ದಾರೆ. ಕಾರ್ಮಿಕ ಕಾರ್ಡ ಮಾನ್ಯತೆಯನ್ನು ಕೂಡ ಗುತ್ತಿಗೆ ಕಾರ್ಮಿಕರೆ ಮಾಡುತ್ತಿದ್ದು ಹಲವು ಅನರ್ಹರು ಯಾವುದೆ ಪರಿಶೀಲನೆ ಮತ್ತು ಮಾನದಂಡಗಳಿಲ್ಲದೆ ಕಾರ್ಮಿಕ ಕಾರ್ಡ ಹೊಂದಿದ್ದಾರೆ

 

ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.ಒಟ್ಟಾರೆ ಆಗಿ ಅಥಣಿ ಹಳೆ ತಹಶಿಲ್ದಾರ ಕಚೇರಿಯ ಆವರಣದಲ್ಲಿ ಹಳೆಯ ಪಾಳು ಬಿದ್ದ ಕೋಣೆಯಲ್ಲಿ ಸದ್ಯ ಕಾರ್ಮಿಕ ಇಲಾಖೆ ಎಂದು ಬೋರ್ಡು ನೇತು ಬಿದ್ದಿದ್ದು ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವವರೆ ಇಲ್ಲದಂತಾಗಿದ್ದಾರೆ. ಅಥಣಿ ತಾಲೂಕಿನ ಮತ್ತು ಮತಕ್ಷೇತ್ರದ ಕಾರ್ಮಿಕರಿಗೆ ಸರ್ಕಾರದ ಯೋಜನೆ ತಲುಪಿಸಲು ಸದ್ಯ ಏಜೆಂಟರ್ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾರ್ಮಿಕ ಇಲಾಖೆಯಿಂದ ಹಂಚಿಕೆಗೆ ಬಂದಿದ್ದ ಸಾವಿರಾರು ಕಿಟ್ ಉಳ್ಳವರ ಪಾಲಾಗಿದ್ದು ನಿಜವಾದ ಕಾರ್ಮಿಕರು ಕಂಗಾಲಗಿದ್ದು ಸದ್ಯ ಕಾರ್ಮಿಕ ಇಲಾಖೆಯ ಕಚೇರಿ ಮಾಲೀಕರಿಲ್ಲದ ಮನೆಯಂತಾಗಿದ್ದು ಖಾಯಂ ಅಧಿಕಾರಿಯ ನೇಮಕಾತಿ ಮಾಡಿ ಕಾರ್ಮಿಕರ ಕಣ್ಣೀರು ಒರೆಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ.