Belagavi News In Kannada | News Belgaum

ಹಂಸಲೇಖ ಬಹಿರಂಗ ಕ್ಷಮೆ ಕೇಳಲಿ ಅಥಣಿಯಲ್ಲಿ ಬ್ರಾಹ್ಮಣ ಸಮಾಜದ ಆಗ್ರಹ

 

ಅಥಣಿ.ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ವಿಶ್ವಮಾನ್ಯರು ಇಂತಹ ಸ್ವಾಮೀಜಿಗಳ ಕುರಿತು ಹಂಸಲೇಖ ವಿವಾದಾತ್ಮಕ ಹೇಳಿಕೆ ನೀಡಿ ತನ್ನ ಮಹತ್ವವನ್ನೇ ಕಳೆದುಕೊಂಡು ಟೀಕೆಗೊಳಪಡಬೇಕಾಯಿತು ಎಂದು ಆರ್.ಎಸ್.ಎಸ್. ಕರ್ನಾಟಕ ಉತ್ತರ ಪ್ರಾಂತ ಸಹ ಸಂಘಚಾಲಕ ಅರವಿಂದರಾವ ದೇಶಪಾಂಡೆ ಹೇಳಿದರು.
ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಸಂಘಟನೆಯ ಅಥಣಿ ತಾಲೂಕಾ ಘಟಕದ ನೇತೃತ್ವದಲ್ಲಿ ಹಂಸಲೇಖ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಪೇಜಾವರ ಸ್ವಾಮೀಜಿ ಅನೇಕ ದಶಕಗಳವರೆಗೆ ಹಿಂದೂ ಸಮಾಜದ ಏಳಿಗೆಗಾಗಿ, ಅಸ್ಪೃಶ್ಯತೆಯ ಮತ್ತು ಮತಾಂತರ ವಿರುದ್ಧ ಹೋರಾಡಿದರು ಎಂದ ಅವರು ಪೇಜಾವರ ಸ್ವಾಮೀಜಿ ಕೇವಲ ಬ್ರಾಹ್ಮಣ ಸಮಾಜದ ಏಳಿಗೆಗಾಗಿ ಶ್ರಮಿಸದೆ ಇಡೀ ಹಿಂದೂ ಸಮಾಜದ ಏಳಿಗೆಗಾಗಿ ಶ್ರಮಿಸಿದ ಯತಿವರೇಣ್ಯರು ಎಂದು ಹೇಳಿದರು.
ವಿಶ್ವೇಶತರ್ಥ ಸ್ವಾಮೀಜಿಗಳ ನಿರಂತರ ಶ್ರಮದ ಪರಿಣಾಮ ಇಂದು ಅಯೋಧ್ಯೆಯ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದರು. ತಮಿಳುನಾಡು, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಡೆಯುತ್ತಿದ್ದ ಮತಾಂತರವನ್ನು ತಡೆಯುವಲ್ಲಿಯೂ ಸಹ ಸ್ವಾಮೀಜಿಗಳು ಶ್ರಮಿಸಿದ್ದಾರೆ ಎಂದ ಅವರು ಇಂತಹ ಒಬ್ಬ ಯತಿ ಶ್ರೇಷ್ಠರಿಗೆ ಹಂಸಲೇಖ ಅಸಹ್ಯವಾಗಿ ಮಾತನಾಡಿದ್ದಾರೆ ಕೇವಲ ನಾಡು ಮಾತ್ರ ಅಲ್ಲ ಇಡೀ ದೇಶವೇ ಅವರನ್ನು ಅಸಹ್ಯ ಭಾವದಿಂದ ನೋಡುತ್ತಿದೆ ಎಂದರು.
ವೀರಶೈವ ಸಮಾಜದ ಮಲ್ಲಿಕಾರ್ಜುನ ಕನಶೆಟ್ಟಿ ಮಾತನಾಡಿ, ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಟೀಕಿಸಲು ಹಂಸಲೇಖ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು. ತಮ್ಮ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸಿದ ಪೇಜಾವರ ಶ್ರೀಗಳೆಲ್ಲಿ ಯಾವುದೇ ಕೊಡುಗೆ ನೀಡದ ಹಂಸಲೇಖ ಎಲ್ಲಿ ಎಂದ ಅವರು ಹಂಸಲೇಖ ಬರೀ ಕ್ಷಮೆ ಕೇಳಿದರೆ ಸಾಕಾಗದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದರು.
ಪ್ರತಿಭಟನಾ ಸಭೆಯಲ್ಲಿ ರಾಹುಲ ಗಾಂಧಿ ಬ್ರಿಗೇಡ್‌ನ ಕಾರ್ಯದರ್ಶಿ ಸದಾಶಿವ ಮಾಂಗ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ ಹಾಳುಮಾಡುವಂತಹ ಹೇಳಿಕೆಗಳನ್ನು ನೀಡುವವರ ಮೇಲೆ ಸರಕಾರ ಕಾನೂನು ಕ್ರಮ ಜರಗಿಸಬೇಕು ಮತ್ತು ಯಾರು ಯಾರನ್ನು ಟೀಕಿಸುತ್ತಿದ್ದೇವೆ ಎನ್ನುವುದನ್ನು ಅರಿತು ಟೀಕಿಸಬೇಕು ಎಂದರು.
ಬ್ರಾಹ್ಮಣ ಸಮಾಜದಿಂದ ಹಂಸಲೇಖ ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಉಪ ತಹಶೀಲ್ದಾರ ಎಸ್.ಕೆ.ಹೊಸಕೇರಿ ಇವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಶ್ರೀ ರಾಘವೇಂದ್ರ ಮಠದ ಆವರಣದಲ್ಲಿ ಪೇಜಾವರ ಶ್ರೀಗಳ ಅಭಿಮಾನಿಗಳು ಸಮಾವೇಶಗೊಂಡು ದ್ವಿಚಕ್ರ ವಾಹನಗಳ ರ‍್ಯಾಲಿ ಮೂಲಕ ಬಸವೇಶ್ವರ ವೃತ್, ಶಿವಯೋಗಿ ವೃತ್, ಅಂಬೇಡ್ಕರ ವೃತ್‌ದ ಮೂಲಕ ತಹಶೀಲ್ದಾರ ಕಛೇರಿ ತಲುಪಿದರು.
ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮಾಜದ ಆನಂದ ಟೊಣಪಿ, ಅನೀಲ ದೇಶಪಾಂಡೆ (ಹಿಡಕಲ್), ಎನ್.ಕೆ.ಪಾಟೀಲ, ಎಸ್.ವಿ.ಜೋಶಿ, ಗುರುರಾಜ ಗುಡಿ, ಶ್ರೀರಾಮ ಕಟ್ಟಿ, ರಾಜು ಪಾಟೀಲ, ಗಂಗಾ ಮತ ಸಮಾಜದ ಹಣಮಂತ ಕಾಲವೆ, ರಜಪೂತ ಸಮಾಜದ ಕಿರಣ ರಜಪೂತ, ಬಾಬುಸಿಂಗ ರಜಪೂತ, ವಾಸವಿ ಸಮಾಜದ ಗುರು ಗುಂಡಾ, ಗುಜರಾತಿ ಸಮಾಜದ ನಿಖಿಲ ಭಾಟೆ, ಜಂಗಮ ಸಮಾಜದ ಪುಟ್ಟು ಹಿರೇಮಠ, ಪಂಚಮಸಾಲಿ ಸಮಾಜದ ರಾಜು ಗುಡೋಡಗಿ, ರಾಜು ಢಾಲೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಬ್ರಾಹ್ಮಣ ಸಮಾಜದ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.