Belagavi News In Kannada | News Belgaum

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ : ಲಖನ್ ಜಾರಕಿಹೊಳಿ

ಬೆಳಗಾವಿ :  ಚುನಾವಣೆಯಲ್ಲಿ ಬಂದು ಹೋಗುವ ವ್ಯಕ್ತಿಗಳನ್ನು ನಂಬಬೇಡಿ. ಕೇವಲ ಭರವಸೆಗಳನ್ನು ನೀಡುತ್ತಾ ಹೋಗುತ್ತಿರುತ್ತಾರೆ. ಅಂತಹವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ವಿಧಾನ ಪರಿಷತ್‍ಗೆ ನನ್ನನ್ನು ಚುನಾಯಿಸಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿದ್ಧವಿರುವುದಾಗಿ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.

ಬುಧವಾರದಂದು ಖಾನಾಪೂರದ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು,   ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ ತರಲು ಸಂಕಲ್ಪ ಮಾಡಿರುವುದಾಗಿ ಅವರು ಹೇಳಿದರು.

ಈ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಬೇರೆ ಬೇರೆ ಪಕ್ಷಗಳು ಸ್ಪರ್ಧೆ ಮಾಡುವಂತೆ ಆಹ್ವಾನ್ ಬಂದಿತ್ತಾದರೂ ನಾನು ಪಕ್ಷಾತೀತವಾಗಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಸೇವೆ ಮಾಡಲು ಇಚ್ಛಿಸಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ.

ಡಿ.10 ರಂದು ನಡೆಯಲಿರುವ ಚುನಾವಣೆಯಲ್ಲಿ ಶೇಜ್ ನಂ. 5 ರ ನನ್ನ ಭಾವಚಿತ್ರದ ಮುಂದೆ 1 ಅಂತಾ ಬರೆದು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡುವಂತೆ ಅವರು ಕೋರಿದರು.
ನಾನು ಸದಾ ಜನರ ಮುಂದೆ ಇದ್ದುಕೊಂಡು ಜನಸೇವೆ ಮಾಡುತ್ತೇನೆ. ಖಾನಾಪೂರ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ.

ಬೇರೆಯವರಂತೆ ಕ್ಷುಲ್ಲಕ ರಾಜಕಾರಣ ಮಾಡುವುದಿಲ್ಲ. ಜನರ ಹಿತಾಸಕ್ತಿ ಹಾಗೂ ಮನೋಭಾವನೆಗಳನ್ನು ಅರಿತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ. ಮತ ನೀಡುವ ಮತದಾರರೇ ನನಗೆ ದೊಡ್ಡ ಶಕ್ತಿ. ನೀವು ನೀಡುತ್ತಿರುವ ಶಕ್ತಿಯನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಎಂಬ ಮಂತ್ರವನ್ನು ಜಪಿಸುತ್ತೇನೆ. ನಿಮ್ಮೆಲ್ಲ ಆಶೋತ್ತರಗಳಿಗೆ ಸದಾ ಕಾಲ ಸ್ಪಂದಿಸುತ್ತೇನೆ ಎಂದು ಲಖನ್ ಜಾರಕಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮಜರ್ ಖಾನಾಪುರೆ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ನ್ಯಾಯವಾದಿ ಎಚ್.ಎನ್. ದೇಸಾಯಿ, ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾ ಉಪಾಧ್ಯಕ್ಷ ದಿಲೀಪ ಪವಾರ, ಜಿಪಂ ಮಾಜಿ ಸದಸ್ಯರಾದ ತುಕಾರಾಮ ಕಾಗಲ, ವಿಶಾಲ ಪಾಟೀಲ, ಖಾಸೀಂ ಹಟ್ಟಿಹೊಳಿ, ಮೇಘಾ ಕುಂದರಗಿ, ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.//////