Belagavi News In Kannada | News Belgaum

ಸಾರಾಪುರದಲ್ಲಿ ಮಹಾಕಾಳಿ ದೇವಿ ನೂತನ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ

ಹುಕ್ಕೇರಿ:   ಶಾಂತಿ-ಸಹಬಾಳ್ವೆಗೆ ಹೆಸರುವಾಸಿಯಾದ ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದಲ್ಲಿ ಇದೇ ತಿಂಗಳು 6 ರಿಂದ 8ರ ವರೆಗೆ ನೂತನವಾಗಿ ನಿರ್ಮಿಸಿರುವ ಮಹಾಕಾಳಿ ದೇವಿಯ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದ್ದು ಮೂರು ದಿನಗಳ ಕಾಲ ಗ್ರಾಮದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಭಕ್ತಿಯ ಸುಧೆ ಹರಿಯಲಿದೆ ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾರಾಪುರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಮಹೋತ್ಸವದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಕರಪತ್ರ, ಬ್ಯಾನರ್ ಸೇರಿದಂತೆ ಇತರೆ ಪರಿಕರಗಳನ್ನು ಬಿಡುಗಡೆಗೊಳಿಸಿ ಬಳಿಕ ಅವರು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಐತಿಹಾಸಿಕ ಪರಂಪರೆಯ ಹಿನ್ನಲೆಯುಳ್ಳ ಮಹಾಕಾಳಿ ದೇವಿಯು ಭಕ್ತರ ಇಷ್ಟಾರ್ಥವನ್ನು ಪೂರೈಸುವ ಶಕ್ತಿದೇವತೆಯಾಗಿದ್ದಾಳೆ. ಶಿಷ್ಟರ ಸಂರಕ್ಷಣೆ, ದುಷ್ಟರ ಸಂಹಾರ ದೇವಿಯ ವೈಶಿಷ್ಟವಾಗಿದೆ. ಏಕಶಿಲೆಯಲ್ಲಿ ಸುಮಾರು 4 ಅಡಿ ಎತ್ತರದ ಸಿಂಹದ ಮೇಲೆ ಆಸೀನವಾದ ಅದ್ಭುತ-ಮನಮೋಹಕ ಮಹಾಕಾಳಿ ದೇವಿ ಮೂರ್ತಿ ಕೆತ್ತನೆ ಮಾಡಲಾಗಿದೆ. ಈ ಭಾಗದಲ್ಲಿ ಪ್ರತಿಷ್ಠಾಪನೆಯಾಗಲಿರುವ ಅತ್ಯಂತ ಸುಂದರ ಮೂರ್ತಿ ಇದಾಗಿದೆ ಎಂದು ಅವರು ಹೇಳಿದರು.

ಡಿ. 6 ರಂದು ಬೆಳಗ್ಗೆ 9 ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂತನ ಮೂರ್ತಿ, ಸುಮಂಗಲೆಯರ ಕುಂಭಮೇಳ, ವಿವಿಧ ವಾದ್ಯಮೇಳ, ಕಲಾ ತಂಡಗಳ ಭವ್ಯ ಮೆರವಣಿಗೆ ನಡೆಯಲಿದ್ದು ಸಚಿವ ಉಮೇಶ ಕತ್ತಿ ಚಾಲನೆ ನೀಡುವರು. ಡಿ. 7 ರಂದು ಬೆಳಗ್ಗೆಯಿಂದ ಹೋಮ-ಹವನ ನಡೆಯಲಿದೆ. ಡಿ. 8 ರಂದು ಬೆಳಗ್ಗೆ 9 ಕ್ಕೆ ನೂತನ ಮಹಾಕಾಳಿ ದೇವಿ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ 10.30 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮತ್ತಿತರರು ಉಪಸ್ಥಿತರಿರುವರು. ಸಂಜೆ 7 ಕ್ಕೆ ಹಾಸ್ಯಸಂಜೆ-ಆರ್ಕೇಸ್ಟ್ರಾ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬೆಳವಿ-ಸಾರಾಪುರ ಸಿದ್ಧರೂಢ ಮಠದ ಮೃತ್ಯುಂಜಯ ಸ್ವಾಮೀಜಿ, ಎಪಿಎಂಸಿ ನಿರ್ದೇಶಕ ಕೆ.ಜಿ.ಪಾಟೀಲ, ನ್ಯಾಯವಾದಿ ಪಿ.ಆರ್.ಚೌಗಲಾ, ಮುಖಂಡರಾದ ಸಿದ್ಧಪ್ಪ ಮದಕರಿ, ನಿಂಗಪ್ಪಾ ಪೂಜೇರಿ, ಎಸ್.ಎಂ.ಪಾಟೀಲ, ಪಾರೇಶ ಬೆಳವಿ, ಶಂಕರ ಬಡಗಾಂವಿ, ರವಿ ಕಾಂಬಳೆ, ಬಸಪ್ಪ ಮದಕರಿ, ಮಹಾದೇವ ಬೆಳವಿ, ಸಿದ್ಧಪ್ಪ ಪೂಜೇರಿ, ಮಾಕಪ್ಪಾ ಮಾದರ ಮತ್ತಿತರರು ಉಪಸ್ಥಿತರಿದ್ದರು./////