Belagavi News In Kannada | News Belgaum

‘ತಿರುಮಲ ಯಾತ್ರೆ ಮುಂದೂಡಿ’; ಭೂ ಕುಸಿತದಿಂದ ಘಾಟ್ ರಸ್ತೆ ಸ್ಥಗಿತ

ತಿರುಪತಿ: ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಮಳೆ ಮುಂದುವರೆದಿರುವಂತೆಯೇ ಮತ್ತೆ ಭೂ ಕುಸಿತ  ಸಂಭವಿಸಿದ್ದು, ಪರಿಣಾಮ ಘಾಟ್ ರಸ್ತೆಗಳು ಹಾನಿಗೊಳಗಾಗಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತಿರುಮಲ ಬೆಟ್ಟಕ್ಕೆ ಹೋಗುವ ಹೆದ್ದಾರಿಯ ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಘಾಟ್ ನಂಬರ್ 2ರಲ್ಲಿ ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಣಾಮ ತಿರುಪತಿಯಿಂದ ತಿರುಮಲಕ್ಕೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಘಟನೆಯ ಸಮಯದಲ್ಲಿ ವಾಹನ ದಟ್ಟಣೆ ಇಲ್ಲದ ಕಾರಣ, ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ರಸ್ತೆ ಹಾಳಾಗಿದ್ದರಿಂದ ತಿರುಮಲಕ್ಕೆ ತೆರಳುವ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ರಸ್ತೆ ದುರಸ್ತಿಯಾಗುವವರೆಗೂ ಸಂಚಾರಕ್ಕೆ ಅನುಮತಿ ಇಲ್ಲ ಎನ್ನಲಾಗಿದೆ.
ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಇನ್ನು ಇಂದು ಬೆಳಗಿನ ಜಾವ 05.45 ರ ಸುಮಾರಿಗೆ ತಿರುಮಲದತ್ತ ಪ್ರಯಾಣಿಸುತ್ತಿದ್ದ ಭಕ್ತರು ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯಾದಿಂದ ಬಚಾವ್ ಆಗಿದ್ದಾರೆ. ಬಸ್ ಬೆಟ್ಟದಲ್ಲಿ ಚಲಿಸುವಾಗ ಮೇಲಿನಿಂದ ಬಂಡೆ ಉರುಳುವ ಜೋರಾದ ಶಬ್ದ ಕೇಳಿತ್ತು. ಕೂಡಲೇ ಎಚ್ಚೆತ್ತ ಬಸ್ ಚಾಲಕ ಬಸ್ ಅನ್ನು ಅಲ್ಲಿಯೇ ನಿಲ್ಲಿಸಿದ್ದಾನೆ. ಬಸ್ ನಿಲ್ಲುತ್ತಿದ್ದಂತೆಯೇ ಬಸ್ ನಿಂದ ಒಂದಷ್ಟು ದೂರದಲ್ಲಿ ಬಂಡೆಗಳು ಉರುಳಿ ಬಿದ್ದಿವೆ. ಆದರೆ ಬಸ್ ನಲ್ಲಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ಟಿಟಿಡಿ ಅಧ್ಯಕ್ಷರ ಭೇಟಿ
ಇನ್ನು ಭೂ ಕುಸಿತ ವಿಚಾರ ತಿಳಿಯುತ್ತಲೇ ಘಟನಾ ಪ್ರದೇಶಕ್ಕೆ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಅವರು ಅಧಿಕಾರಿಗಳ ಸಹಿತ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಟಿಟಿಡಿ ಇಂಜಿನಿಯರಿಂಗ್ ಅಧಿಕಾರಿಗಳು ಉರುಳಿದ ಬಂಡೆಗಳನ್ನು ತೆಗೆಯುಲು ದುರಸ್ತಿ ಕಾರ್ಯದ ಕುರಿತು ಸುಬ್ಬಾರೆಡ್ಡಿ ಅವರಿಗೆ ಮಾಹಿತಿ ನೀಡಿದರು.
ಯಾತ್ರೆ ಮುಂದೂಡಿ
ಇದೇ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವೈವಿ ಸುಬ್ಬಾರೆಡ್ಡಿ ಅವರು, ತಿರುಮಲದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಘಾಟ್ ರಸ್ತೆ ದುರಸ್ತಿ ಕಾರ್ಯ ಮುಂದುವರಿದಿರುವುದರಿಂದ ಸೀಮಿತ ಸಂಖ್ಯೆಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದುರಸ್ತಿಗೆ ಕೆಲವು ದಿನಗಳು ಹಿಡಿಯುವ ಸಾಧ್ಯತೆ ಇರುವುದರಿಂದ ದರ್ಶನ ಟಿಕೆಟ್ ಹೊಂದಿರುವ ಭಕ್ತರಿಗೆ ದಿನಾಂಕ ಬದಲಿಸುವಂತೆ ಟಿಟಿಡಿ ಮನವಿ ಮಾಡುತ್ತಿದೆ. ಆನ್ ಲೈನ್ ನಲ್ಲಿ ದರ್ಶನ ಟಿಕೆಟ್ ಪಡೆದ ಭಕ್ತರಿಗೆ ಇನ್ನು ಆರು ತಿಂಗಳ ಕಾಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  ಭಕ್ತರು ಒಂದಷ್ಟು ದಿನಗಳ ಕಾಲ ಯಾತ್ರೆ ಮುಂದೂಡಬಹುದು. ಅಲ್ಲದೆ ಪ್ರಸ್ತುತ ಬುಕ್ ಆಗಿರುವ ದರ್ಶನ ಟಿಕೆಟ್ ಗಳ ಕಾಲಾವಧಿಯನ್ನು ಆರು ತಿಂಗಳಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಭಕ್ತರು ತಮ್ಮ ತಮ್ಮ ದರ್ಶನ ವೇಳಾಪಟ್ಟಿಯನ್ನು ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದಾರೆ./////