Belagavi News In Kannada | News Belgaum

ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಕೇಂದ್ರ ಸಚಿವರಿಗೆ ಸಿಎಂ ಒತ್ತಾಯ

ನವದೆಹಲಿ: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಮಾಡೋದಕ್ಕೆ ಡಿಸೆಂಬರ್ 6ರಂದು ಮಹತ್ವದ ಸಭೆ ಇದೆ. ಈ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ನಿರ್ಧಾರ ಕೈಗೊಳ್ಳಬೇಕೆಂಬ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ ಮಾಡಿದ್ದೇವೆ. ಈ ನಿರ್ಣಯದ ಬಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಕಾರಾತ್ಮಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರ ಭೇಟಿ ನಂತರ ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೃಷ್ಣಾ ಮೇಲ್ದಂಡೆ 2ನೇ ಟ್ರಿಬುನಲ್ ನೋಟಿಫಿಕೇನ್ ವಿಚಾರ ಸುಪ್ರೀಂಕೋರ್ಟ್ ನಲ್ಲಿದೆ. ಅದರಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಪ್ರಕಟ ಮಾಡಬೇಕು. ಮತ್ತು ಕಾನೂನು ಪ್ರಕಾರ ಟ್ರಿಬ್ಯುನಲ್ ಆಧಾರದಲ್ಲಿ ಸಂಪೂರ್ಣ ವರದಿ ಕೊಟ್ಟ ನಂತರ ಪರಿಪೂರ್ಣ ಪಾಲನೆಯಾಗಬೇಕು. ಆ ನಿಟ್ಟಿನಲ್ಲಿ ಜಲಶಕ್ತಿ ಇಲಾಖೆಯಿಂದ ನಿರ್ದೇಶನವನ್ನು ಹೊರಡಿಸಬೇಕೆಂಬ ವಿಚಾರವನ್ನು ಕೇಂದ್ರ ಸಚಿವರ ಮುಂದೆ ಇಟ್ಟಿದ್ದೇವೆ. ಇದಲ್ಲದೆ, ಗೋಧಾವರಿ, ಕಾವೇರಿ, ಕೃಷ್ಣಾ ಮಹಾನದಿ ಜೋಡಣೆ ಮಾಡುವ ಬಗ್ಗೆ ನಮ್ಮ ಅಹವಾಲನ್ನು ಕೇಳದೆ ಅದರ ಡಿಪಿಆರ್ ನ್ನು ಮಾಡಬಾರದು ಅನ್ನೋ ವಿಚಾರ ತಿಳಿಸಿದ್ದೇವೆ. ತಮಿಳುನಾಡಿನ ಜೋಡಣೆಯ ಯೋಜನೆ ಬಗ್ಗೆ ಮೇಕೆದಾಟು ಯೋಜನೆ ಪೂರ್ಣವಾಗುವರೆಗೂ ಕ್ಲಿಯರೆನ್ಸ್ ಕೊಡಬಾರದು ಅಂತಾ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ತಿಳಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯಕ್ಕೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚರ್ಚೆ
ಇನ್ನು ಕೋವಿಡ್ ನಿರ್ವಹಣೆ ಮತ್ತು ಈಗಿರುವ ಹೊಸ ತಳಿ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಅವರ ಜೊತೆ ಚರ್ಚೆ ಮಾಡಿದ್ದೇವೆ. ಕೋವಿಡ್ ನಿರ್ವಹಣೆ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಕರ್ನಾಟಕ ಲಸಿಕೆ ನೀಡುವುದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ವೇಗ ಮುಂದುವರಿಯಲಿ ಅಂತಾ ಆರೋಗ್ಯ ಸಚಿವರು ಹೇಳಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.//////