Belagavi News In Kannada | News Belgaum

ನಿಮ್ಮ ಶ್ರಮದ ದುಡಿಮೆಯ ಬೆವರಿನ ಹಣವನ್ನು ಯಾರದೋ ಕೈಗಿಟ್ಟು ಒಳ್ಳೆಯವರಾಗುವ ಮುನ್ನ

ನಿಮ್ಮ ಶ್ರಮದ ದುಡಿಮೆಯ ಬೆವರಿನ ಹಣವನ್ನು ಯಾರದೋ ಕೈಗಿಟ್ಟು ಒಳ್ಳೆಯವರಾಗುವ ಮುನ್ನ

ಅಣ್ಣಾ ಸ್ವಲ್ಪ ದುಡ್ ಬೇಕಿತ್ತು ಮನೇಲಿ ಪರಿಸ್ಥಿತಿ ಸರಿ ಇಲ್ಲಾ ನಾಳೆ ನಾಡಿದ್ದು ಕೊಟ್ ಬಿಡ್ತೀನಿ ಕೊಡಣ್ಣಾ…..ಅಯ್ಯೋ ಬೇವರ್ಸಿ ನನ್ ಮಗಾ ಸಾರ್ ಅವತ್ತು ನಾನು ಅವರ ಮನೆಗೆ ಹೋಗಿರಲಿಲ್ಲ ಅಂದ್ರೆ ಅವತ್ತೆ ಹಗ್ಗಕ್ ನೇತಾಡಿರೋಣು ಎನೋ ಕಷ್ಟದಲ್ಲಿ ಇದಾನೆ ಅಂತ ಐವತ್ ಸಾವಿರ ಕೊಟ್ಟಿದ್ದೆ ಐದು ವರ್ಷ ಆದ್ರೂ ಆಸಾಮಿ ದುಡ್ಡೇ ಕೊಡ್ತಿಲ್ಲ….ಮೇಡಮ್ ಒಂದ್ ಹೆಲ್ಪ ಆಗ್ಬೇಕಿತ್ತು ನೀವು ಏನೂ ಅಂದುಕೊಳ್ಳಲ್ಲ ಅಂದ್ರೆ ನಿಮ್ಮಿಂದ ಒಂದು ಹತ್ತು ಸಾವಿರ ಅಡ್ಜಷ್ಟ ಆಗುತ್ತಾ?? ಗೌಡ್ರೆ ನಮಸ್ಕಾರ ಈ ಸಾರಿ ಕಬ್ಬಿನ ಬಿಲ್ ಬಂದಕೂಡ್ಲೆ ನಿಮ್ ಹಳೆ ಬಾಕಿ ಜೊತೆಗೆ ಇದನ್ನು ತಂದ ಕೊಡ್ತೀನಿ ಒಂದಿಪ್ಪತ್ತ ಸಾವಿರ ಬೇಕಿತ್ತು ಮಗಳ ಮದುವೆ ನೋಡಿ…ಥೂ ಇಂತ ಬಡ್ಡಿಮಕ್ಕಳಿಗೆ ಸಾಲ ಬೇರೆ ಕೇಡು ತಗೋಬೇಕಾದ್ರೆ ಅಣ್ಣಾ,ಅಪ್ಪಾ,ಅಂಕಲ್ ಎಲ್ಲಾ ಅಂತಾರೆ ವಾಪಸ್ ಕೊಡು ಅಂದ್ರೆ ಬಾಯಿಗ್ ಬಂದಂಗ್ ಮಾತಾಡ್ತಾರೆ…ಎಸ್! ಇಂತಹದ್ದೊಂದು ಮಾತು ಪ್ರತಿ ಊರಿನ ಪ್ರತಿ ಗಲ್ಲಿ-ಗಲ್ಲಿಯಲ್ಲಿ,ದೊಡ್ಡ ಸಿಟಿಗಳ ಖಾಸಗಿ ಫೈನಾನ್ಸ್ ಗಳಲ್ಲಿ,ಅಷ್ಟೇ ಏಕೆ ತೀರಾ ಇತ್ತೀಚೆಗೆ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಆಗಾಗ ಕೇಳಿ ಬರುತ್ತದೆ.

ಕಷ್ಟ ಅಂತ ಹಣ ಕೇಳಿಕೊಂಡು ಬಂದ ಗೆಳೆಯನೊಬ್ಬ ಹಣ ಕೊಟ್ಟ ನಂತರದ ದಿನಗಳಲ್ಲಿ ವಾಪಸು ಕೇಳಿದ್ರೆ ಅಕ್ಷರಶಃ ನಮ್ಮ ಶತ್ರುವಿನಂತಾಗಿ ಬಿಡುತ್ತಾನೆ.ಅದರಲ್ಲೂ ಬೆವರು ಸುರಿಸಿ ದುಡಿದು ಪೈಸೆಗೆ-ಪೈಸೆ ಸೇರಿಸಿ ಕೂಡಿಟ್ಟ ಹಣ ಹೀಗೆ ಯಾರದೋ ಪಾಲಾಗಿ ಮರಳಿ ಬರಲಿಲ್ಲ ಅಂದರೆ ಖಂಡಿತ ಕೊಟ್ಟವರ ಹೊಟ್ಟೆಯಲ್ಲಿ ಬೆಂಕಿಯ ಉಂಡೆಯಂತೆ ನಿಗಿ-ನಿಗಿಸುತ್ತದೆ.ಇಲ್ಲಿ ಕೊಟ್ಟವನು ಕೋಡಂಗಿ ಆದರೆ ಇಸ್ಕೊಂಡವ ಈರಭದ್ರ ಅಂತ ಗಾದೆ ಮಾತೊಂದು ಬಹಳ ದಿನಗಳಿಂದ ಜನ-ಜನಿತವಾಗಿದೆ. ಹೊರಗಿನವರ ಜೊತೆಗೆ ಒಳಗಿನ ಸಂಭಂದಿಕರು ಕೂಡ ಒಂದಷ್ಟು ಸಹಾಯ ಕೇಳಿಕೊಂಡು ಒಂದಲ್ಲ ಒಂದು ಘಳಿಗೆಯಲ್ಲಿ ನಮ್ಮ ಎದುರಾಗುತ್ತಲೇ ಇರುತ್ತಾರೆ.ತಿಳಿದೋ-ತಿಳಿಯದೆಯೋ ಅಥವಾ ನಮ್ಮ ಹತ್ತಿರ ಆಗಿನ ಸಂಧರ್ಭದಲ್ಲಿ ದುಡ್ಡು ಇಲ್ಲದ್ದಕ್ಕೋ,ನಮ್ಮ ಅಸಹಾಯಕತೆಗೋ ನಾವು ಸಾರಿ ಬ್ರದರ್ ಅಂದಬಿಟ್ರೇ ಮುಗೀತು ಕಥೆ.ಎನೋ ನಂಬಕೊಂಡ ಬಂದಿದ್ವಿ ಬಿಡು ನೀನು ಹಿಂಗ್ ಮಾಡ್ತೀಯಾ ಅಂತ ಗೊತ್ತಿರಲಿಲ್ಲ.ಕಷ್ಟಕ್ ಆಗದೇ ಇರೋಣು ಫ್ರೆಂಡ್ ಆಗೀರೋಕ್ ಸಾಧ್ಯಾನೆ ಇಲ್ಲ.ಅಲ್ಲಪ್ಪಾ ನಾನೆನ್ ಮಹಾ ಕೇಳಿದ್ ನಿನಗೆ??

ಜುಜುಬಿ ಐವತ್ ಸಾವ್ರ ಅಲ್ವಾ?? ಅವತ್ತು ಇಲ್ಲ ಅಂದಬಿಟ್ಟೆ!!ಹೀಗೆ ತರಹೇವಾರಿಯಾದ ಮಾತುಗಳು ನಮ್ಮವರಿಂದಲೇ ನಮ್ಮ ಮನಸ್ಸಿಗೆ ನಾಟಿ ಘಾಸಿಗೊಳಿಸಿಬಿಡುತ್ತವೆ.

ಹಾಗಂತ ಯಾರಿಗಾದರೂ ದುಡ್ಡು ಕೊಡಬೇಕಾ? ಕೊಡಬಾರದಾ? ಅನ್ನುವದನ್ನ ನಿಮಗೆ ಹೇಳುವ ದರ್ದು ನನಗೂ ಇಲ್ಲವಾದರೂ ದುಡ್ಡು ಕೊಡಲಿಲ್ಲ ಅಂದ್ರೆ ಏನು ಅನಕೊಳ್ತಾರೋ ಎನೋ ಅಂತ ಹೆಂಡತಿಯ ತಾಳಿ,ಅಮ್ಮನ ಒಡವೆ,ಮನೆಯಲ್ಲಿನ ವಸ್ತುಗಳನ್ನ ಅಡ ಇಟ್ಟು ಯಾರಿಗೂ ದುಡ್ಡು ಕೊಡಬೇಡಿ.ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣವನ್ನ ಖಂಡಿತ ಬೆಳೆಸಿಕೊಳ್ಳಿ ಆದರೆ ಹಣ ಮತ್ತು ಶ್ರೀಮಂತಿಕೆಯನ್ನು ನೋಡಿಯೇ ಹತ್ತಿರವಾದವರ ಒಂದು ಜನರ ಲಿಸ್ಟ ನಿಮ್ಮ ಹತ್ತಿರ ಯಾವಾಗಲು ಇರಲಿ.ಹಣ ಕೇಳಿಕೊಂಡು ಬಂದವರಿಗೆ ನಿಜವಾಗಿಯೂ ಕಷ್ಟ ಇದೆಯಾ ಅನ್ನುವದನ್ನು ಪರೀಕ್ಷೀಸಿ ನೋಡಿ.ಅವರು ಹೇಳಿದ್ದು ನಿಜ ಅನ್ನಿಸಿದರೆ ಖಂಡಿತ ಸಹಾಯ ಮಾಡಿ.ಅಯ್ಯೋ ಇದು ಉಪಕಾರಕ್ಕೆ ಜಮಾನಾ ಇಲ್ಲಾ ಬಿಡಿ ಸಾರ್ ಅಂತ ಯಾರೋ ಒಬ್ಬರು ಆಡಿಕೊಳ್ಳುವ ಮಾತು ಕೂಡ ಅವರು ಹೀಗೆ ಯಾರಿಗೊ ಯಾವದೋ ಕಷ್ಟದ ಕಾಲದಲ್ಲಿ ಸಹಾಯ ಮಾಡಿ ಆ ಹಣ ಮರಳಿ ಬರದೆ ಹತಾಶರಾಗಿಯೇ ಹೇಳಿರುತ್ತಾರೆ

ಅನ್ನೋದು ನೆನಪಿರಲಿ.ಅಂದಹಾಗೆ ಅತಿ ವಿನಯಮ್ ಚೋರ ಲಕ್ಷ್ಮಣಂ ಅನ್ನುವಂತೆ ಕೆಲವರು ಅತಿಯಾದ ನಯ ವಿನಯಗಳಿಂದ ನಾಜುಕು ಅಯ್ಯರಾಗಿಯೆ ನಿಮ್ಮ ಎದುರು ಸಹಾಯ ಕೇಳಿಕೊಂಡು ಬಂದಿರುತ್ತಾರೆ.ಎಷ್ಟು ಬಡ್ಡಿ ಆದ್ರೂ ಕಟ್ತೀನಿ ಗುರು ಇದೊಂದ್ ಸಾರಿ ಯಾರ್ ಹತ್ರಾ ಆದ್ರೂ ಇಸ್ಕೊಡು ಅಂತ ನಿಮ್ಮನ್ನ ನೈಸ್ ಮಾಡುತ್ತಾರೆ.

 

ಯಾರದೋ ಹತ್ತಿರ ದುಡ್ಡಿದೆ ಅಂತ ಗೊತ್ತಾದರೆ ಸಾಕು ತಮ್ಮ ಇಲ್ಲ ಸಲ್ಲದ ಕಷ್ಟಗಳ ಮೂಟೆಯನ್ನೆ ಬಿಚ್ಚಿ ಅಂಗಾತ ಬಿದ್ದು ಅವರೆದುರು ಗೋಳಾಡುತ್ತಾರೆ.ಒನ್ಸ್ ಅಗೇನ್ ಸಂಭಂದಗಳು ಅಲ್ಲೋಲ-ಕಲ್ಲೋಲ ಆಗುವದು ಇದೇ ದುಡ್ಡಿನ ವಿಚಾರದಲ್ಲಿ ಅನ್ನುವದು ನೆನಪಿರಲಿ.ಚೀಟಿ ದುಡ್ಡು ಕಟ್ಟಿಸಿಕೊಂಡು ಎಷ್ಟೋ ಜನ ಓಡಿಹೋದ ಉದಾಹರಣೆಯ ಜೊತೆಗೆ ಚಿನ್ನದ ಸ್ಕೀಮಿಗೆ ಬಣ್ಣದ ಮಾತನಾಡುವ ಜನರ ಜೊತೆಗೂ ಸ್ವಲ್ಪ ಹುಷಾರಿನಿಂದ ವ್ಯವಹಾರ ಮಾಡಿ…..ಹಾಗಂತ ಯಾವ ಕಾಲಕ್ಕೂ ಯಾರನ್ನೂ ನಂಬಬೇಡಿ ಅಥವಾ ಯಾರಿಗೂ ಸಹಾಯವನ್ನ ಮಾಡಲೇ ಬೇಡಿ ಅಂತ ನಾನು ಹೇಳುವದಿಲ್ಲ.

ಕೆಲವು ಕಡೆ ಹಣದ ಸಹಾಯ ಕೇಳಿಕೊಂಡು ಬಂದವರ ಯೋಗ್ಯತೆಯನ್ನ,ಅವರು ಸಾಲ ಪಡೆಯುವ ಮತ್ತು ಮರಳಿಸುವ ಅರ್ಹತೆಯನ್ನ,ಅಳೆದು ತೂಗಿಯೇ ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ. ನಿಮ್ಮನ್ನು ನಂಬಿ ಬಂದ ಯಾರನ್ನೂ ಬರಿಗೈಯ್ಯಲ್ಲಿ ಕಳಿಸಬೇಡಿ ಆದರೆ ಅವರ ಅಗತ್ಯವನ್ನ ಅರಿತುಕೊಂಡು ಹಣ ಕೊಡಿ.ನಮ್ಮ ಸುತ್ತ-ಮುತ್ತಲಿನ
ಎಷ್ಟೋ ಜನ ತಮ್ಮ ದುಶ್ಚಟಗಳಿಗಾಗಿ,ಇಸ್ಪೀಟು,ಶರಾಬು,ಅಥವಾ ಮತ್ತೊಂದು ಶಾಸ್ವತವಲ್ಲದ ಅನೈತಿಕ ಸಂಭಂಧಕ್ಕಾಗಿ ಸುಖಾ ಸುಮ್ಮನೆ ಸುಳ್ಳು ಹೇಳಿ ನಮ್ಮ ಹತ್ತಿರ ಹಣ ಕೇಳಿಕೊಂಡು ಬರುತ್ತಾರೆ ಅನ್ನುವದು ನಿಮಗೆ ತಿಳಿದಿರಲಿ.

 

ರಿಟೈರ್ ಆದ ಅಪ್ಪನ ಕೊಲಿಗ್ ಅನ್ನುವ ಕಾರಣಕ್ಕಾಗಿ, ಹೆಂಡತಿಯ ತಮ್ಮ ಸೋದರ ಅಳಿಯ ಅನ್ನುವ ಕಾರಣಕ್ಕಾಗಿ, ಅಥವಾ ತಮ್ಮನ ಫ್ರೆಂಡು ಅನ್ನುವ ಕಾರಣಕ್ಕಾಗಿ ಅವರು ಕೇಳಿದ ತಕ್ಷಣವೇ ನಿಮ್ಮ ಜೇಬಿಗೆ ಕೈ ಹಾಕಿ ಹಣಕೊಟ್ಟು ಈ ಕಲಿಯುಗದ ಕರ್ಣರಾಗಬೇಡಿ.ಅವರು ಮತ್ಯಾರ ಹತ್ತಿರವಾದರೂ ಇದೇ ರೀತಿ ಹೇಳಿ ಹಣಪಡೆದಿದ್ದಾರಾ? ವಾಪಸು ಕೊಟ್ಟಿದ್ದಾರಾ? ಅನ್ನುವ ಚಿಕ್ಕ ಕ್ಲೂ ನಿಮಗೆ ಸಿಗುತ್ತಾ ನೋಡಿ.ಒಂದೆರಡು ದಿನ ನೀವು ಮಾಡಬಹುದಾದ ಸಹಾಯವನ್ನ ಮುಂದೂಡುವ ಸಾಧ್ಯತೆ ಇದೆಯಾ ಯೋಚಿಸಿ ಸಮಯ ತೆಗೆದುಕೊಳ್ಳಿ. ಯಾಕೆಂದರೆ ಈ ಜಗತ್ತಿನಲ್ಲಿ ಮನುಷ್ಯ ಹುಟ್ಟುವಾಗಲೂ ಹಣ ಬೇಕು ಅಂತ್ಯ ಸಂಸ್ಕಾರ ಮಾಡುವಾಗಲೂ ಹಣ ಬೇಕು.ಇಲ್ಲಿ ದುಡ್ಡಿದ್ರೆ ಮಾತ್ರ ದುನಿಯಾ ಅನ್ನೋದನ್ನ ಯಾವ ಕಾಲಕ್ಕೂ ಮರೆಯಬೇಡಿ.ಇನ್ನೊಂದು ವಿಷಯ

ಕಷ್ಟ ಮತ್ತು ತಾಪತ್ರಯ ಅನ್ನುವದು ಯಾರಿಗೂ ಹೇಳಿಕೇಳಿ ಬರುವದಿಲ್ಲ. ನಿಮ್ಮ ಕಷ್ಟಗಳುಗೆ ಅವರು ಯಾರಾದರೂ, ಯಾವಾಗಲಾದರೂ ಸಹಾಯ ಮಾಡಿದ್ದಾರಾ?? ಅಂತ ಯೋಚಿಸಿನೋಡಿ. ಇಷ್ಟಕ್ಕೂ ಯಾರ ಮನೆಯಲ್ಲೂ ಹಣದ ಗಿಡವನ್ನ ಯಾರೂ ಕೂಡ ನೆಟ್ಟಿರುವದಿಲ್ಲ ಅನ್ನುವದು ನಿಮಗೆಲ್ಲ ತಿಳಿದಿರಲಿ.ಮನಿ ಡಬ್ಲಿಂಗ್,ರಾತ್ರೋ-ರಾತ್ರಿ ಕೋಟ್ಯಾಧೀಶರನ್ನಾಗಿಸುವ,
ಆಸೆ,ಆಮೀಷಗಳಿಂದ ಕೂಡಿದ ಸ್ಕಿಮ್ ಗಳಿಂದ ಸಾಧ್ಯವಾದಷ್ಟು ದೂರ ಇರಿ.ಇಲ್ಲಿ ಕಷ್ಟಪಟ್ಟು ದುಡಿಯದೇ ಯಾರೂ ಕೂಡ ಶ್ರೀಮಂತರಾಗುವದಿಲ್ಲ ದಿಢೀರ್ ಅಂತ ಬಂದ ಹಣ ಕೂಡ ಬಹಳ ದಿನ ಯಾರ ಹತ್ತಿರವೂ ಶಾಸ್ವತವಾಗಿ ಉಳಿಯೋದಿಲ್ಲ ಅನ್ನುವದು ನಿಮಗೆ ನೆನಪಿರಲಿ.

ಕಷ್ಟ ಅಂತ ಹೇಳಿಕೋಡು ಬಂದಿದ್ದ ಅದ್ಯಾರೋ ಒಂದೆರಡು ವರ್ಷದಲ್ಲಿ ಅದು ಹ್ಯಾಗೆ ಶ್ರೀಮಂತರಾದರು ಅಂತ ಮಾತನಾಡುತ್ತ ಕುಳಿತು ನಿಮ್ಮ ಅಮೂಲ್ಯವಾದ ಸಮಯವನ್ನ ಹಾಳು ಮಾಡದೆ ಒಂದಷ್ಟು ಸೇಪ್ಟಿ ಇನ್ವೆಷ್ಟಮೆಂಟ್ ಗಳನ್ನ ಹೇಗೆ ಮಾಡಬಹುದು ಅಂತ ತಿಳಿದುಕೊಳ್ಳಿ,ಹಣವನ್ನ ಎಲ್ಲಿ ತೊಡಗಿಸಿದರೆ ನಮಗೆ ಲಾಭದ ಜೊತೆಗೆ ಆ ಹಣ ಮರಳಿ ಬರುತ್ತೆ ಅನ್ನುವ ಕಡೆಗೆ ಸ್ವಲ್ಪ ಗಮನ ಕೊಡಿ.ಯಾರಿಗೋ ಒಳ್ಳೆಯವರಾಗುವದಕ್ಕಾಗಿ,
ಇಲ್ಲ ಬಡ್ಡಿಗೆ ಹಣ ಬಿಟ್ಟು ಅದರಿಂದಲೇ ಶ್ರೀಮಂತರಾಗುವದಕ್ಕಾಗಿ ನಿಮ್ಮ ದುಡಿಮೆಯ,ಬೆವರ ಹನಿಯ ಶ್ರಮದ ದುಡ್ಡನ್ನ ಇನ್ಯಾರದೋ ಕೈಗೆ ಇಡುವ ಮುನ್ನ ಖಂಡಿತ ಯೋಚಿಸಿನೋಡಿ….ಏನಂತೀರಿ??

ದೀಪಕ ಶಿಂಧೇ