Belagavi News In Kannada | News Belgaum

ಕೃಷಿ ವಿಜ್ಞಾನ ಕೇಂದ್ರದಲ್ಲಿ ಏಳನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆ

 

ಮತ್ತಿಕೊಪ್ಪದ ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏಳÀನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ನಡೆಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕೇಂದ್ರ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್‍ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಬಿ. ಆರ್. ಪಾಟೀಲ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ಈಗಾಗಲೇ ಉತ್ತಮ ಕೆಲಸ ಮಾಡುತ್ತಿದ್ದು ಈ ಕೇಂದ್ರದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಸಭೆಯಲ್ಲಿರುವ ವಿವಿಧ ಅಭಿವೃದ್ಧಿ ಇಲಾಖೆಗಳ ಮುಖ್ಯಸ್ಥರು, ವಿಜ್ಞಾನಿಗಳು ಹಾಗೂ ರೈತರು ಚರ್ಚಿಸಿ ರೈತರಿಗೆ ಅಧಿಕ ಆದಾಯ ಬರುವಂತಹ ಯೋಜನೆಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.

ಸಭೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ, ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರರಾದ ಡಾ. ವಿ. ಎಸ್. ಕೋರಿಕಂಥಿಮಠ, ಕೃಷಿ ವಿಜ್ಞಾನ ಕೇಂದ್ರವು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಕಡಿಮೆ ಅವಧಿಯಲ್ಲಿಯೇ ಹೆಚ್ಚು ರೈತರಿಗೆ ತಂತ್ರಜ್ಞಾನದ ಮಾಹಿತಿಯನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಕೇಂದ್ರವು ಅಧಿಕ ಇಳುವರಿ ನೀಡುವ ವಿವಿಧ ಬೆಳೆಗಳ ಬೀಜೋತ್ಪಾದನೆ, ಮಣ್ಣು ಪರೀಕ್ಷೆ ಸೇವೆ, ತೋಟಗಾರಿಕಾ ಸಸ್ಯೋತ್ಪಾದನೆ, ಸಸ್ಯ ರೋಗ/ಕೀಟ ನಿರ್ವಹಣೆ, ಹೈನುಗಾರಿಕೆ, ಮಹಿಳಾ ಸ್ವ ಸಹಾಯ ಸಂಘಗಳಿಗೆ ಸ್ವ ಉದ್ಯೋಗ ಕೈಗೊಂಡು ಉದ್ದಿಮೆ ಸ್ಥಾಪಿಸುವಲ್ಲಿ ತಾಂತ್ರಿಕ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಟಾರಿ-ಬೆಂಗಳೂರು ನಿರ್ದೇಶಕ ಡಾ. ವ್ಹಿ. ವೆಂಕಟಸುಬ್ರಮನಿಯನ್ ಕೃಷಿ ವಿಜ್ಞಾನ ಕೇಂದ್ರದಿಂದ ಸಿದ್ಧಪಡಿಸಿದ ಪೌಷ್ಟಿಕ ಕೈತೋಟದ ಬೀಜದ ಪೊಟ್ಟಣವನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಕೃಷಿಯಲ್ಲಿ ಹವಾಮಾನ ಬದಲಾವಣೆಗನುಗುಣವಾಗಿ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡುವುದು ಅವಶ್ಯಕವಾಗಿದೆ. ಈ ದಿಸೆಯಲ್ಲಿ ಹವಾಮಾನದ ಏರಿಳೀತ ಕುರಿತು ಅಧ್ಯಯನ ಮಾಡಲು ಕೃಷಿ ವಿಜ್ಞಾನ ಕೇಂದ್ರಕ್ಕೆ ಕೃಷಿ ಹವಾಮಾನ ಮಾಪನ ಘಟಕವನ್ನು ಸ್ಥಾಪಿಸಲು ಮಂಜೂರಾತಿ ನೀಡಲಾಗುವುದು ಎಂದು ಹೇಳಿದರು.

ಡಾ. ಆರ್. ಆರ್. ಹಂಚಿನಾಳ, ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮತ್ತು ಮಾಜಿ ಅಧ್ಯಕ್ಷರು, ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ಭಾರತ ಸರ್ಕಾರ ಇವರು ಮಾತನಾಡಿ, ಈ ಭಾಗದಲ್ಲಿ ಪ್ರಸಿದ್ಧಿಯಾಗಿರುವ ಕಾದ್ರೊಳ್ಳಿ ಮೆಣಸಿನಕಾಯಿ, ಮುರಕಿಬಾವಿ ಜೋಳ ಹಾಗೂ ಬೆಳಗಾವಿ ಬಾಸುಮತಿ ಭತ್ತ ಇವುಗಳಿಗೆ ಭೌಗೋಳಿಕ ವಿಶೇಷತೆ (ಜಿಐ) ಟ್ಯಾಗಿಂಗ್ ಪಡೆಯಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವಿಸ್ತರಣಾ ನಿರ್ದೇಶಕ ಡಾ. ಬಾಲಚಂದ್ರ ಕೆ. ನಾಯ್ಕ ಮಾತನಾಡಿ, ಈ ಭಾಗದ ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುವಿನ ಬಾಧೆಯ ನಿರ್ವಹಣಾ ತಂತ್ರಜ್ಞಾನಗಳನ್ನು ತ್ವರಿತವಾಗಿ ರೈತರಿಗೆ ತಲುಪಿಸಲು ಕೃಷಿ ಪರಿಕರ ವಿತರಕರಿಗೆ ನಡೆಸುವ ತರಬೇತಿಯಲ್ಲಿ ತಂತ್ರಜ್ಞಾನದ ಮಾಹಿತಿಯನ್ನು ನೀಡಬೇಕೆಂದು ಸಲಹೆ ನೀಡಿದರು. ಸಹ ವಿಸ್ತರಣಾ ನಿರ್ದೇಶಕ ಡಾ. ಪಿ. ಎಸ್. ಹೂಗಾರ, ಸಭೆಯ ಕ್ರಿಯಾ ಯೋಜನೆಯ ಅಂಶಗಳನ್ನು ಅಂತಿಮಗೊಳಿಸಿದರು.

ಸಭೆಯಲ್ಲಿ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಶ್ರೀಮತಿ ಶ್ರೀದೇವಿ ಬ. ಅಂಗಡಿ ಅವರು ಹಿಂದಿನ ವೈಜ್ಞಾನಿಕ ಸಲಹಾ ಸಮಿತಿಯಲ್ಲಿ ನೀಡಿರುವ ಸಲಹೆಗಳಿಗೆ ತೆಗೆದುಕೊಂಡ ಕ್ರಮಗಳ ಕುರಿತು, ಕೃಷಿ ವಿಜ್ಞಾನ ಕೇಂದ್ರದ ಪ್ರಗತಿ ವರದಿ ಕುರಿತು ಮತ್ತು ಮುಂಬರುವ ವರ್ಷದ ಕ್ರೀಯಾ ಯೋಜನೆಯ ಪ್ರಸ್ತಾವನೆಯನ್ನು ಮಂಡಿಸಿದರು.

ಸಭೆಯಲ್ಲಿ ಕೆವಿಕೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪ್ರವೀಣ ಬಾಗೇವಾಡಿ, ಭಾರತೀಯ ಹುಲ್ಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಡಾ. ನರೇಂದ್ರ ಕುಲಕರ್ಣಿ, ಕೆವಿಕೆ ನೋಡಲ್ ಅಧಿಕಾರಿ ಡಾ. ಶ್ರೀಪಾದ ಕುಲಕರ್ಣಿ, ಜಂಟಿ ಕೃಷಿ ನಿರ್ದೇಶಕ ಶ್ರೀ ಶಿವನಗೌಡ ಪಾಟೀಲ, ತೋಟಗಾರಿಕಾ ಉಪನಿರ್ದೇಶಕ ಶ್ರೀ ಮಹಾಂತೇಶ ಮುರಗೋಡ, ಆತ್ಮ ಯೋಜನಾ ನಿರ್ದೇಶಕ ಶ್ರೀ ಹೆಚ್. ಡಿ. ಕೋಳೇಕರ, ರೇಷ್ಮೆ ಇಲಾಖೆಯ

ಶ್ರೀ ಜಿ. ಬಿ. ಮಾಳಣ್ಣವರ, ಮೀನುಗಾರಿಕೆ ಇಲಾಖೆಯ ಶ್ರೀ ರವಿಕಿರಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶ್ರೀಮತಿ ಕಾಂಚನಾ ಅಮಟೆ, ಪಶು ಸಂಗೋಪನೆ ಇಲಾಖೆಯ ಡಾ. ಗಂಗಾಧರ, ತುಕ್ಕಾನಟ್ಟಿ ಕೆವಿಕೆಯ ಮುಖ್ಯಸ್ಥೆ ಶ್ರೀಮತಿ ರೇಖಾ ಕಾರಬಾರಿ, ಪ್ರಗತಿಪರ ರೈತರಾದ ಶ್ರೀ ಮಹಾಂತೇಶ ಹಿರೇಮಠ, ಶ್ರೀ ಸಂತೋಷ ಕಿತ್ತೂರ ಹಾಗೂ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಶಿಲ್ಪಾ ಮೊರಬದ ಹಾಗೂ ಶ್ರೀಮತಿ ಭಾಗ್ಯಶ್ರೀ ಅಕ್ಕಿ ಭಾಗವಹಿಸಿ ಸಲಹೆಗಳನ್ನು ನೀಡಿದರು.

ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಶ್ರೀಮತಿ ಶ್ರೀದೇವಿ ಬ. ಅಂಗಡಿ ಸ್ವಾಗತಿಸಿದರು. ಶ್ರೀ ಎಸ್. ಎಮ್. ವಾರದ ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಸಭೆಯು ಮುಕ್ತಾಯವಾಯಿತು.