Belagavi News In Kannada | News Belgaum

ಡಾ. ಮನ್ ಮೋಹನ ಸಿಂಗ್ ಪ್ರಧಾನಿಯಾಗಲು ಸೋನಿಯಾ ಗಾಂಧಿ ಕಾರಣ : ಡಿ.ಕೆ. ಶಿವಕುಮಾರ್

ರಾಮದುರ್ಗ: ಸೋನಿಯಾ ಗಾಂಧಿಯವರು ಮನಸ್ಸು ಮಾಡಿದರೆ ಈ ದೇಶದ ಪ್ರಧಾನಿ ಆಗಬಹುದಿತ್ತು. ಆದರೆ ಅವರು ದೇಶದ ಅಭಿವೃದ್ಧಿಗಾಗಿ ಆರ್ಥಿಕ ತಜ್ಞ ಡಾ. ಮನ್ ಮೋಹನ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿ ತಾವು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಉಳಿದು ಅಧಿಕಾರಕ್ಕೆ ಆಸೆ ಪಡಲಿಲ್ಲಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

 

ಬೆಳಗಾವಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ  ಸವದತ್ತಿ ಮತ್ತು ರಾಮದುರ್ಗ ಗ್ರಾಮ ಪಂಚಾಯತ್ ಸದಸ್ಯರ ಸಮ್ಮಿಲನ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಗಾಂಧಿ ಕುಟುಂಬದ ಕೊಡುಗೆ ಅಪಾರವಾಗಿದೆ. ಆದರೆ ಬಿಜೆಪಿ ಮಾತ್ರ ಹೊಟ್ಟೆಕಿಚ್ಚಿನಿಂದ ಗಾಂಧಿ ಕುಟುಂಬದ ಬಗ್ಗೆ ಆರೋಪ ಮಾಡುತ್ತದೆ ಎಂದರು.

 

ಚನ್ನರಾಜ್ ಹಟ್ಟಿಹೊಳಿ ಲಕ್ಷ್ಮೀ ಹೆಬ್ಬಾಳಕರ್  ತಮ್ಮ ಅಂತ ಟಿಕೆಟ್ ಕೊಟ್ಟಿಲ್ಲ.  ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದೇವೆ. ಚನ್ನರಾಜ್ ಹಟ್ಟಿಹೊಳಿ ಯುವಕ, ಇಂಜನಿಯರಿಂಗ್ ಪದವೀಧರನಾಗಿದ್ದಾನೆ. ನಿಮ್ಮ ಪರ ಪರಿಷತ್ ನಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಮುಂದಿನ ದಿನದಲ್ಲಿ ಸವದತ್ತಿ, ರಾಮದುರ್ಗದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಪ್ರಾಶಸ್ತ್ಯ ಚಲಾವಣೆ ಬಗ್ಗೆ ಪಂಚಾಯತಿ ಸದಸ್ಯರಿಗೆ ತರಬೇತಿ ನೀಡಬೇಕು. ಕಳೆದ ಚುನಾವಣೆಯಲ್ಲಿ 800 ಕ್ಕೂ ಹೆಚ್ಚು ಮತಗಳು ತಿರಸ್ಕೃತ ಆಗಿದೆ. ಈ ಸಲ ಹಾಗೇ ಆಗದಂತೆ ಎಚ್ಚರಿಕೆ ವಹಿಸಬೇಕು. ಸ್ವಾಭಿಮಾನದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕ ಎ.ಎನ್. ಹ್ಯಾರೀಶ,  ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಮಾಜಿ ಶಾಸಕ ಅಶೋಕ ಪಟ್ಟಣ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ  ಜಿ್ಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಗ್ರಾಪಂ ಸದಸ್ಯರು ಸೇರಿದಂತೆ ಇತರರು ಇದ್ದರು./////