Belagavi News In Kannada | News Belgaum

ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯನ್ನ ಸೋಲಿಸಿದ್ರು ಅಚ್ಚರಿ ಇಲ್ಲ : ವಿಪಕ್ಷ ನಾಯಕ ಸಿದ್ದರಾಮಯ್ಯ

ರಾಮದುರ್ಗ : ”  ಕಳೆದ ಬಾರಿ ನಮ್ಮ ಅಧಿಕೃತ ಅಭ್ಯರ್ಥಿಯನ್ನು ರಮೇಶ ಜಾರಕಿಹೊಳಿ ಸೋಲಿಸಿದ್ರು. ಈ ಸಲ ಸಹೋದರ ಲಖನ್ ಅವರನ್ನು ನಿಲ್ಲಿಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ರು ಅಚ್ಚರಿ ಇಲ್ಲ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಚುನಾವಣೆ ಹಿನ್ನೆಲೆ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಸವದತ್ತಿ ಮತ್ತು ರಾಮದುರ್ಗ ಪಂಚಾಯಿತಿ ಸದಸ್ಯರ ಸಮ್ಮಿಲನ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

” ಸಿದ್ದರಾಮಯ್ಯ ಮೋಸ ಮಾಡಿದ್ದಾರೆಂದು ಎಲ್ಲ ಕಡೆ ರಮೇಶ್  ಹೇಳುತ್ತಿದ್ದಾರೆ. ಕುರುಬ ಸಮಾಜದ ವಿವೇಕರಾವ್ ಪಾಟೀಲರಿಗೆ ಮೋಸ ಮಾಡಿದ್ದಾರೆ ಎನ್ನುತ್ತಾರೆ. ರಮೇಶ್ ಬ್ಯಾಗ್ ಹಿಡಿದುಕೊಂಡು ತಿರುಗಾಡುವ ಗಿರಾಕಿ, ಕಾಂಗ್ರೆಸ್ ಪಕ್ಷವನ್ನೇ ಸೇರಿಲ್ಲ. ಅಂತವರಿಗೆ ಟಿಕೆಟ್ ಕೊಡುವುದು ಹೇಗೆ .?. ವಸಂತರಾವ್ ಪಾಟೀಲ್ ಮಗ ಎನ್ನುವ ಕಾರಣಕ್ಕೆ ವಿವೇಕರಾವಗೆ ಟಿಕೆಟ್ ಕೊಡಲು ಆಗುವುದಿಲ್ಲ ಎಂದು ತಿರುಗೇಟು ನೀಡಿದರು.

” ಕಾಂಗ್ರೆಸ್ ಪಕ್ಷದಲ್ಲಿ ಕುರುಬ ಸಮುದಾಯದ ಮೂರು ಜನರಿಗೆ ಟಿಕೆಟ್ ಕೊಟ್ಟಿದೆ. ಬಿಜೆಪಿಯಲ್ಲಿ ಎಷ್ಟು ಜನರಿಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ರಮೇಶ್ ಜಾರಕಿಹೊಳಿ ಆಡಿದ್ದೇನೆ ಆಟ ಎನ್ನುವ ಕಾಲ ಆಗಿ ಹೋಗಿದೆ. ಸಿದ್ಧಾಂತ, ಪಕ್ಷ ಆಧಾರದ ಮೇಲೆ ರಾಜಕೀಯ ಮಾಡಬೇಕು. ಸ್ವಾರ್ಥಕ್ಕಾಗಿ  ರಾಜಕೀಯ ಮಾಡಬಾರದು‌” ಎಂದು ಕಿಡಿಕಾರಿದರು.

ಹೊಟ್ಟೆ ಉರಿಯಿಂದ ಅಕ್ಕಿ ಕಡಿತ :” ಬಿಜೆಪಿ ಸರ್ಕಾರ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿದ್ದಾರೆ. ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರಪ್ಪನ ಮನೆಯಿಂದ ಕೊಡ್ತಾ ಇದ್ರಾ ?. ಜನರ ದುಡ್ಡಿನಿಂದ ಕೊಡುತ್ತಿದ್ದರು. ಆದರೆ ಹೊಟ್ಟೆ ಊರಿಯಿಂದ ಯೋಜನೆಯ ಅಕ್ಕಿ ಕಡಿತ ಮಾಡಿದ್ದಾರೆ. ನನ್ನ ಅವಧಿಯಲ್ಲಿ 5 ವರ್ಷದಲ್ಲಿ 15 ಲಕ್ಷ ಮನೆಗಳು ಮನೆ ನಿರ್ಮಾಣ ಮಾಡಿದ್ದಾರೆ. ರಾಮದುರ್ಗ ಶಾಸಕರೂ 12 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಈಗಿರುವ ಆಸಾಮಿ ಎಷ್ಟು ಮನೆಗಳು ನೀಡಿದ್ದಾರೇ ?. ಒಂದು ಮನೆ ನೀಡದವರಿಗೆ ವೋಟ್ ಹಾಕಬೇಕಾ ಎಂದು ನೀವೇ ಯೋಚಿಸಿ ” ಎಂದರು.

ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಕಿತ್ತಾಕಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. 2 ವರ್ಷ 4 ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ಕೆಲಸವನ್ನಾದ್ರು ಮಾಡಿದ್ದಾರಾ ಹೇಳಿ. ಮಾನ, ಮರ್ಯಾದೆ ಬಿಟ್ಟು ಮತ ಕೇಳುತ್ತಿದ್ದಾರೆ. ಮುಖಕ್ಕೆ ಮಂಗಳಾರತಿ ಮಾಡಿ ಬಿಜೆಪಿಯವರನ್ನು ಕಳಸಿ” ಎಂದು ಹೇಳಿದರು.

2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ : ” ಬಿಜೆಪಿಯ ಭ್ರಷ್ಟಾಚಾರ , ದುರಾಡಳಿತದಿಂದ ದೇಶ, ರಾಜ್ಯದ ಜನರು ಬೇಸತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರದ ಕೊಡುಗೆ. ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್. ಆದರೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು ? ” ಎಂದು ಪ್ರಶ್ನಿಸಿದರು.

” ದುಡ್ಡು ಹಂಚಿ, ಆಪರೇಷನ್ ಕಮಲ ಮಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.  ಬೆಲೆ ಏರಿಕೆಯಿಂದ ಜನರ ತತ್ತರಿಸಿದ್ದಾರೆ. ಇಂತಹ ಸರ್ಕಾರ ಬೇಕಾ ? ಬಿಜೆಪಿಯನ್ನು ದಯಮಾಡಿ ಕಿತ್ತು ಎಸೆಯಿರಿ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ ” ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಗಾಂಧಿಜೀಯನ್ನು ಕೊಂದು ಹಾಕಿದ್ದು ಆರ್ ಎಸ್ ಎಸ್ : ಸ್ವಾರ್ಥಕ್ಕಾಗಿ, ಹೆದರಿಸಿ ರಾಜಕಾರಣ ಮಾಡುವುದಲ್ಲ. ಸ್ವಾತಂತ್ರ್ಯಕ್ಕಾಗಿ ಒಬ್ಬರಾದರೂ ಹುತಾತ್ಮರಾಗಿದ್ದಾರಾ ? ಬಿಜೆಪಿಯವರು ನಮಗೆ ದೇಶ ಭಕ್ತಿ ಹೇಳಿಕೊಡ್ತಿದ್ದಾರೆ‌‌. ಗಾಂಧೀಜಿಯವರನ್ನ ಕೊಂದು ಹಾಕಿದವರು ಇದೇ ಆರ್‌ಎಸ್‌ಎಸ್​ನವರು. ಗೋಡ್ಸೆ ಪಳೆಯುಳಿಕೆಗಳೇ ಈಗಿನ ಆರ್‌ಎಸ್‌ಎಸ್, ಬಿಜೆಪಿಯವರು.

ನರೇಂದ್ರ ಮೋದಿ ಆರ್‌ಎಸ್‌ಎಸ್​ನಿಂದ ಬಂದವರು. ಈ ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್​ನಿಂದ ಬಂದಿಲ್ಲ. ಲಾಟರಿ ಹೊಡೆದು ಸಿಎಂ ಆಗಿದ್ದಾರೆ. ಇವರನ್ನು ಕಿತ್ತು ಹಾಕಲು ಈಶ್ವರಪ್ಪ ಮಾತಾಡ್ತಿದ್ದಾನೆ ಎಂದು ಏಕವಚನದಲ್ಲಿ ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣಾ ವೀಕ್ಷಕರು, ಶಾಸಕರೂ ಆಗಿರುವ ಎನ್.ಎ.ಹ್ಯಾರಿಸ್ , ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಮಾಜಿ ಶಾಸಕ ಅಶೋಕ ಪಟ್ಟಣ, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ, ವಿಶ್ವಾಸ ವೈದ್ಯ , ಸಂಚನಗೌಡ ದ್ಯಾಮನಗೌಡ, ರವಿ ಯಲಿಗಾರ, ಆರ್.ಬಿ.ಪಾಟೀಲ, ಸೌರಭ ಚೋಪ್ರಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು./////