Belagavi News In Kannada | News Belgaum

ಖಾನಾಪುರ ಅಭಿವೃದ್ಧಿಗಾಗಿ ಡಿ.12ರಂದು ಪಾದಯಾತ್ರೆಗೆ ಮುಂದಾದ ಶಾಸಕಿ ಅಂಜಲಿ ನಿಂಬಾಳ್ಕರ್

ಖಾನಾಪುರ: ಖಾನಾಪುರ ಅಭಿವೃದ್ಧಿಗೆ ಸ್ಪಂದಿಸದ ಬಿಜೆಪಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ  ಡಿ.12ರಂದು ಖಾನಾಪುರ ಸಂಘರ್ಷ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಡಿ.13ರಂದು ನಡೆಯುವ ಅಧಿವೇಶನದಲ್ಲಿ ಖಾನಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ಜನರಿಗೆ ಸಿಗಬೇಕಾದ ಮನೆ  ಪರಿಹಾರ, ರೈತರ ಬೆಳೆ  ಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ ಎಂದಿದ್ದಾರೆ.

ಡಿ.12ರಿಂದ ಖಾನಾಪುರದಿಂದ ಮಧ್ಯಾಹ್ನ 12ಗಂಟೆ ಪಾದಯಾತ್ರೆ ಆರಂಭವಾಗಿ ಮರುದಿನ ಬೆಳಗಾವಿ ಸುವರ್ಣಸೌಧದವರೆಗೆ ಸುಮಾರು 40 ಕಿಮೀ ಪಾದಯಾತ್ರೆ ಮಾಡಲಿದ್ದೇವೆ. ಪಾದಯಾತ್ರೆಯಲ್ಲಿ ಈ ಭಾಗದ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಿವಿ, ಕಣ್ಣು ಇಲ್ಲ. ಅದೆಷ್ಟೋ ಬಾರಿ ಖಾನಾಪುರ ಕ್ಷೇತ್ರದ ಅಭಿವೃದ್ಧಿ ಸಂಬಂಧ ಪಟ್ಟಂತೆ ಚರ್ಚಿಸಲಾಗಿದೆ. ಆದರೆ ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಮಳೆಗಾಲದಲ್ಲಿ ಹಾಳಾದ ರಸ್ತೆ, ಮನೆ, ಬೆಳೆಗೆ ಪರಿಹಾರ ಸಿಕ್ಕಿಲ್ಲ. ಅನ್ನದಾತರ ಸಂಕಷ್ಟದಲ್ಲಿ ಇದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಖಾನಾಪುರ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈಚೆಗೆ ಶಾಲೆ, ಕಾಲೇಜ್ ಆರಂಭವಾಗಿದ್ದರೂ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಖಾನಾಪುರಕ್ಕೆ ಒಳ್ಳೆಯ ಬಸ್ ನಿಲ್ದಾಣವಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಇನ್ನೂ ನಮ್ಮ ಸಂಸದರಾದ ಅನಂತಕುಮಾರ್ ಹೆಗಡೆ ಪುಣ್ಯಾತ್ಮ ಕ್ಷೇತ್ರಕ್ಕೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಆಗ್ರಹಿಸಿ ಸುವರ್ಣಸೌಧ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು./////