Belagavi News In Kannada | News Belgaum

ಸಿದ್ದರಾಮಯ್ಯ ಇವತ್ತಿಗೂ ನಮ್ಮ ಗುರುಗಳು : ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇವತ್ತಿಗೂ ನಮ್ಮ ಗುರುಗಳು, ನಾಯಕರು. ಆದರೆ ನಿನ್ನೆ ಯಾವ ಒತ್ತಡದಲ್ಲಿ ಸುಳ್ಳು ಹೇಳಿದ್ದಾರೋ ತಿಳಿಯುತ್ತಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಈಗ ಬೇರೆ ಪಕ್ಷಕ್ಕೆ ಹೋಗಿರಬಹುದು. ಆದರೆ ಸಿದ್ದರಾಮಯ್ಯ, ಖರ್ಗೆಯವರು ಯಾವಾಗಲೂ ನಮ್ಮ ಗುರುಗಳು, ಅವರ ವ್ಯಕ್ತಿತ್ವ ಬಹಳ ದೊಡ್ಡದು. ಆದರೆ ಸಿದ್ದರಾಮಯ್ಯ ನಿನ್ನೆ ಯಾವ ಒತ್ತಡದಲ್ಲಿ ಸುಳ್ಳು ಹೇಳಿದ್ದಾರೋ ತಿಳಿಯುತ್ತಿಲ್ಲ ಎಂದರು.

ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಲು ಹೋಗುವುದಿಲ್ಲ. ನಿನ್ನೆ ಕಾಂಗ್ರೆಸ್ ಸಮಾವೇಶದಲ್ಲಿ ಸುಳ್ಳು ಹೇಳಿದ ಹಿನ್ನೆಲೆ ಉತ್ತರ ನೀಡುತ್ತಿದ್ದೇನೆ. ವಿವೇಕರಾವ್ ಪಾಟೀಲ ಕಾಂಗ್ರೆಸ್ ಪಕ್ಷವನ್ನೇ ಸೇರಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಕೊಲ್ಹಾಪುರ ಮಹಾಲಕ್ಷ್ಮಿ ದೇವಿಯ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ, ಅವರು ಕಾಂಗ್ರೆಸ್ ಪಕ್ಷದ ಸದಸ್ಯರು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದ ವೇಳೆ ವಿವೇಕರಾವ್ ಪಾಟೀಲ ಅವರಿಗೆ ವಿಧಾನಪರಿಷತ್ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಆದರೆ ಆಗ ಗಂಭೀರವಾಗಿ ಮಾತನಾಡಿದ್ದರು. ಆ ಕಾರಣದಿಂದ ವಿವೇಕರಾವ್ ಅವರನ್ನು ಪಕ್ಷೇತರವಾಗಿ ಸ್ಪರ್ಧೆಗಿಳಿಸಿದ್ದೇ. ನಿಮ್ಮ ಆಶೀರ್ವಾದದಿಂದ ಗೆಲುವು ಸಾಧಿಸಿದರು, ಆಗ ಇದೇ  ಸಿದ್ದರಾಮಯ್ಯ ಅವರು ನನ್ನ ಕರೆದು ಕಾಂಗ್ರೆಸ್ ಪರ ಕೆಲಸ ಮಾಡುವಂತೆ ಹೇಳು ಎಂದಿದ್ದರು.

ಕಾಂಗ್ರೆಸ್ ಪಕ್ಷದ ಪ್ರತಿ ಸಭೆಗೂ ವಿವೇಕರಾವ್ ಪಾಟೀಲ ಅವರಿಗೆ ನೋಟಿಸ್ ನೀಡಲಾಗುತ್ತಿತ್ತು. ಕಾಂಗ್ರೆಸ್  ಬೆಂಬಲಿತ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನ ಪ್ರತಿಯೊಂದು ಸಭೆಗೂ ಹಾಜರಾಗಿದ್ದಾರೆ  ಎಂದು ತಿಳಿಸಿದರು./////