Belagavi News In Kannada | News Belgaum

ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ: ಕಾಂಗ್ರೆಸ್ ನವರು  ಅಭಿವೃದ್ಧಿಯಲ್ಲಿ ಹಿಂದುಳಿದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನ ಪರಿಷತ್ ಚುನಾವಣಾ ಹಿನ್ನಲೆಯಲ್ಲಿ  ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ಪದಾಧಿಕಾರಿಗಳ  ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ತಮ್ಮ ಅಧಿಕಾರಾವಧಿಯಲ್ಲಿ ಸಾಧಿಸಲಾಗದ ಅಭಿವೃದ್ಧಿಯನ್ನು ಮರೆಮಾಚಿ  ಈ ಚುನಾವಣೆಯ ವ್ಯಾಖ್ಯಾನವನ್ನೇ ಬದಲಾಯಿಸುವ ಕೆಲಸವನ್ನು ಕಾಂಗ್ರೆಸ್‍ನವರು ಮಾಡುತ್ತಿದ್ದಾರೆ. ಅವರ ಈ ಕೃತ್ಯವನ್ನು ನಾವು ಕಡೆಗಣಿಸಿ ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸಿ ವಿಧಾನ ಪರಿಷತ್ ಚುನಾವಣೆಯ ಗೆಲುವಿಗಾಗಿ ದುಡಿಯಬೇಕಿದೆ ಎಂದರು.
ಭಾರತೀಯ ಜನತಾ ಪಕ್ಷ ಸಂಘಟಿತವಾಗಿದೆ.  ಕಾಂಗ್ರೆಸ್ ಪಕ್ಷದ ನಾಯಕರು ಹತಾಶರಾಗಿರುವುದು  ಅವರ ಭಾಷೆಯಿಂದ ಸ್ಪಷ್ಟವಾಗುತ್ತಿದೆ. ತಮ್ಮ ಸ್ಥಾನ ಹಾಗೂ ಘನತೆಗೆ ತಕ್ಕಂತೆ ಮಾತನಾಡದೇ ಮನಸೋಇಚ್ಛೆ ಮಾತನಾಡುತ್ತಾರೆ. ಮನುಷ್ಯ ಹತಾಶರಾಗಿ ನಿರಾಶೆಯಾದಾಗ ಈ ರೀತಿ ಮಾತನಾಡುವುದು ಸಹಜ. ನಮಗೆ ಇಂತಹ ಭಾಷೆಯ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರಿಂದ ಯಾವುದೇ ಸರ್ಟಿಫಿಕೇಟ್ ಬೇಕಾಗಿಲ್ಲ. ನಮಗೆ ಸರ್ಟಿಫಿಕೇಟ್ ಕೊಡುವವರು ಬೆಳಗಾವಿಯ ಮಹಾಜನತೆ. ನಮಗೆ ಪ್ರೀತಿ ವಿಶ್ವಾಸವನ್ನು ತೋರುವ ಜೊತೆಗೆ ನಮ್ಮಿಂದ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ. ಬಿಜೆಪಿ ಪಕ್ಷ ಅವರ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂಬ ವಿಶ್ವಾಸ ಅವರಿಗಿದೆ ಎಂದರು.
ತಳಹಂತದಲ್ಲಿ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಜನರು ಪಕ್ಷದ ಪರವಾಗಿದ್ದಾರೆ ಎನ್ನುವುದಕ್ಕೆ ಮಹಂತೇಶ್ ಕವಟಗಿಮಠ  ಅವರು ಅಧಿಕ ಮತಗಳ ಅಂತರದಿಂದ ಗೆಲ್ಲಬೇಕು. ಇದು ಮುಂದೆ ನಡೆಯುವ ಜಿಲ್ಲಾ ಪಂಚಾಯತ್, ತಾಲ್ಲುಕು ಪಂಚಾಯತ್‍ಗಳ ಪದಾದಿಕಾರಿಗಳ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದರು.
  ಬೆಳಗಾವಿ ಬಹಳ ವಿಶೇಷ ಹಾಗೂ ಮುಖ್ಯವಾದ ಜಿಲ್ಲೆ.  ಬೆಳಗಾವಿ ಎಲ್ಲಾ ಸಂದರ್ಭಗಳಲ್ಲಿಯೂ ಭಾಜಪಕ್ಕೆ ದೊಡ್ಡ ಬಲವನ್ನು  ಕೊಟ್ಟಿದೆ. ಅತಿ ಹೆಚ್ಚು ಶಾಸಕರನ್ನು ಕರ್ನಾಟಕದಲ್ಲಿ ಬೆಳಗಾವಿಯಿಂದ ಆಯ್ಕೆಯಾಗಿದ್ದಾರೆ. ನಮ್ಮ ವಿರೋಧ ಪಕ್ಷದಲ್ಲಿ ಇರುವವರ ಅತಿ ಹೆಚ್ಚಿನ ಕೊಡುಗೆಯೂ ಬೆಳಗಾವಿ ಜಿಲ್ಲೆಯಿಂದ ಬಂದಿದೆ. ರಾಜ್ಯ ಸಭಾ ಸದಸ್ಯರು, ಲೋಕಸಭೆಗೆ ಭಾಜಪದ ಅಭ್ಯರ್ಥಿಯನ್ನೇ ಜನ ಆಯ್ಕೆ ಮಾಡಿದ್ದಾರೆ.  ವಿಜಯದ ಪರಂಪರೆ ಬೆಳಗಾವಿಯಲ್ಲಿ  ಭಾಜಪಕ್ಕೆ ಸದಾ ಕಾಲವಿದ್ದು, ಅದಕ್ಕೆ ಕಾರಣೀಭೂತರು ಬೆಳಗಾವಿಯ ಮಹಾಜನತೆ ಹಾಗೂ ನಮ್ಮೆಲ್ಲಾ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಎಂದರು./////