Belagavi News In Kannada | News Belgaum

ಬೆಳಗಾವಿ ಸುವರ್ಣಸೌಧದಲ್ಲಿ ಡಿ.13ರಿಂದ ಅಧಿವೇಶನ ನಡೆಯಲಿದೆ : ಸಿಎಂ ಬಸವರಾಜ್ ಬೊಮ್ಮಾಯಿ

ಬೆಳಗಾವಿ : ಈ ಬಾರಿ ಬೆಳಗಾವಿ ಸುವರ್ಣಸೌಧದಲ್ಲಿ ಡಿ.13ರಿಂದ ಅಧಿವೇಶನ ನಡೆಯಲಿದೆ. ಈಗಾಗಲೇ ಸ್ಪೀಕರ್ ಅಧಿವೇಶನದ ತಯಾರಿ ವೀಕ್ಷಿಸಿದ್ದಾರೆ. ಜಿಲ್ಲಾಡಳಿತದಿಂದ ಎಲ್ಲ ರೀತಿ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯವರೆಗೆ 420 ಕೋಟಿ ರೂ. ನೆರೆ ಪರಿಹಾರ ಕೊಟ್ಟಿದ್ದೇವೆ. ಬೆಳಗಾವಿ ಭಾಗದಲ್ಲಿ ದ್ರಾಕ್ಷಿ, ತರಕಾರಿ ಬೆಳೆ ಹಾನಿಯಾಗಿದೆ. ಅವುಗಳಿಗೂ ಪರಿಹಾರ ಒದಗಿಸಲು ತೀರ್ಮಾನ ಮಾಡಿದ್ದೇವೆ. ವಸತಿ ರಹಿತರಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ.

 

ಸಿದ್ದರಾಮಯ್ಯ ಗ್ರಾಮ ಪಂಚಾಯತ್​ಗಳ ಬಗ್ಗೆ ಕಳಕಳಿ ತೋರಿಸುತ್ತಿದ್ದಾರೆ. ಚುನಾವಣೆ ಹತ್ತಿರವಿದ್ದಾಗ ಮನೆ ಘೋಷಿಸಿ ಹಣ ನೀಡಲಿಲ್ಲ. ಇದನ್ನು ನಾನು ಹೇಳಿಲ್ಲ ದಾಖಲೆಗಳು ಹೇಳುತ್ತವೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ಕೃಷಿ ಯೋಜನೆಗಳು, ಜಲಜೀವನ್ ಮಿಷನ್, ಮಾನವ ದಿನಗಳನ್ನು ಹೆಚ್ಚಿಸಿದ್ದು ಮೋದಿ ಸರ್ಕಾರ. ನಮ್ಮ ಸರ್ಕಾರ ಬಂದ ಮೇಲೆ ವಿದ್ಯಾನಿಧಿ ಯೋಜನೆ ಮನೆ ಬಾಗಿಲಿಗೆ ಸರ್ಕಾರ ತರುವ ಕೆಲಸ ಮಾಡುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಎಲ್ಲ ಶಾಸಕರು ಒಕ್ಕಟ್ಟಾಗಿ ಮಹಾಂತೇಶ್ ಕವಟಗಿಮಠಗೆ ಪ್ರಥಮ ಪ್ರಾಶಸ್ತ್ಯದ ಮತ ಕೊಡಿಸಬೇಕು. ರಾಜಕಾರಣ ಮುಂದಿನ ಒಂದು ವರ್ಷ ತೀವ್ರವಾಗಿ ನಡೆಯುತ್ತೆ. ಕಾಂಗ್ರೆಸ್ ಪಕ್ಷದ ನಾಯಕರು ಹತಾಶರಾಗಿದ್ದಾರೆ. ಅವರ ಮಾತಿನಿಂದ ಗೊತ್ತಾಗುತ್ತೆ, ಮನುಷ್ಯ ಹತಾಶೆಯಾದಾಗ ಇಂತಹ ಮಾತುಗಳು ಬರುವುದು ಸಹಜ. ನಾವು ಅವರಂತೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂಬ ಹೆಚ್‌.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಬೊಮ್ಮಾಯಿ ಪ್ರತಿಕ್ರಿಯಿಸಿ,  ಅದು ಅವರ ಪಕ್ಷದ ವಿಚಾರ ನಾವೇನೂ ಮಾಡಲ್ಲ. ನಮ್ಮ ಹಿರಿಯ ನಾಯಕ ಬಿಎಸ್‌ವೈ ತಮ್ಮ ವಿಚಾರ ವ್ಯಕ್ತಪಡಿಸಿದ್ರು. ಎಲ್ಲಿ ಸ್ಪರ್ಧಿಸಲ್ಲ ಅಲ್ಲಿ ಬೆಂಬಲ ಕೊಟ್ರೆ ಒಳ್ಳೆಯದು ಅಂತಾ ಕೇಳಿದ್ರು. ನಾವೇನೂ ಅವರ ಬೆಂಬಲವನ್ನು ಕೇಳಿರಲಿಲ್ಲ. ಅವರು ಏನ್ ತೀರ್ಮಾನ ತಗೆದುಕೊಳ್ತಾರೆ ತಗೆದುಕೊಳ್ಳಲಿ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಹೇಳಿಕೆ ನೀಡಿದ್ದಾರೆ./////