Belagavi News In Kannada | News Belgaum

ಡಿ.18 ರಂದು ಬೃಹತ್ ಲೋಕ ಅದಾಲತ್

ಅಲ್ಪಸಂಖ್ಯಾತರ ಉದ್ಯೋಗಸ್ಥ ಮಹಿಳೆಯರ ವಸತಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಡಿ.18 ರಂದು ಬೃಹತ್ ಲೋಕ ಅದಾಲತ್ 

ಬೆಳಗಾವಿ, ಡಿ.8  : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಡಿಸೆಂಬರ್ 18 ರಂದು ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ನ್ಯಾಯಾಧೀಶರ ಹಾಗೂ ವಕೀಲರ ಸಹಯೋಗದಲ್ಲಿ ಶನಿವಾರ (ಡಿ.18) ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಎಲ್ಲ ನ್ಯಾಯಾಲಯಗಳಲ್ಲಿ ಹಾಗೂ ಎಲ್ಲಾ ತಾಲೂಕುಗಳ ನ್ಯಾಯಾಲಯಗಳಲ್ಲಿ ಬೃಹತ್ ಲೋಕ ಅದಾಲತ್ ನಡೆಸಲಾಗುವುದು.
ವೈವಾಹಿಕ, ಕೌಟುಂಬಿಕ ಮತ್ತು ಪಾಲು ವಿಭಾಗಕ್ಕೆ, ಬ್ಯಾಂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳು ಹಾಗೂ ಚೆಕ್ ಬೌನ್ಸ್, ಭಾರತ ದಂಡ ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು, ವ್ಯಾಜ್ಯಗಳು, ಮೋಟಾರ ವಾಹನ ಅಪಘಾತ ಪರಿಹಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಕಂದಾಯ ಪ್ರಕರಣಗಳು ಮತ್ತು ಇತರ ಎಲ್ಲಾ ರೀತಿಯ ರಾಜಿಯಾಗಬಹುದಾದಂತಹ ಪ್ರಕರಣಗಳ ಹಾಗೂ ನ್ಯಾಯಾಲಯಗಳಲ್ಲಿ ತನಿಕೆಗೆ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಂಡು ರಾಜಿ ಸಂಧಾನದ ಮುಖಾಂತರ‌ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಸಿ . ಎಮ್ . ಜೋಶಿ ಇವರ ಮಾರ್ಗದರ್ಶನದಲ್ಲಿ ಇತ್ಯರ್ಥ ಮಾಡಲಾಗುವದು.
 ಬ್ಯಾಂಕುಗಳು, ಕಕ್ಷಿದಾರರು ಹಾಗೂ ಜನ ಸಾಮಾನ್ಯರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ / ತಾಲೂಕಾ ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಿಜಯ ದೇವರಾಜ ಅರಸು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಅಲ್ಪಸಂಖ್ಯಾತರ ಉದ್ಯೋಗಸ್ಥ ಮಹಿಳೆಯರ ವಸತಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಬೆಳಗಾವಿ, ಡಿ.08  : 2021-22ನೇ ಸಾಲಿನ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದುಡಿಯುವ ಅಲ್ಪಸಂಖ್ಯಾತರ (ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ಧ, ಸಿಖ್ ಹಾಗೂ ಪಾರ್ಸಿ) ಉದ್ಯೋಗಸ್ಥರ ಮಹಿಳೆಯರ ವಸತಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

18 ವರ್ಷ ವಯಸ್ಸು ಮೇಲ್ಪಟ್ಟ ಪಾಲಿಕೆ ವ್ಯಾಪ್ತಿಯಲ್ಲಿನ ಮಹಿಳೆಯರಿಗೆ  ದುಡಿಯುವ ಕಾರ್ಯನಿರತ, ಒಂಟಿ, ಅಲ್ಪಸಂಖ್ಯಾತರ ಮಹಿಳೆಗೆ ಅವಿವಾಹಿತ ಮಹಿಳೆಗೆ, ವಿಧವೆಯರಿಗೆ, ವಿವಾಹ ವಿಚ್ಛೇದಿತ ಮಹಿಳೆಗೆ, ಪತಿಯಿಂದ ಬೇರ್ಪಟ್ಟ ಮಹಿಳೆಗೆ ಹಾಗೂ ಪತಿ ಬೇರೊಂದು ಸ್ಥಳದಲ್ಲಿ ವಾಸಿಸುವ ವಿವಾಹಿತ ಮಹಿಳೆಗೆ ವಸತಿಯನ್ನು ಕಲ್ಪಿಸಲಾಗುವುದು.

ಅರ್ಹ ಅಲ್ಪಸಂಖ್ಯಾತರ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತಿಯುಳ್ಳವರು ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಭವನ, ಕೆ.ಎಸ್.ಸಿ.ಎ ಕ್ರಿಕೇಟ್ ಕ್ರೀಡಾಂಗಣ ಎದುರುಗಡೆ, ರಾಮತೀರ್ಥ ನಗರ, ಬೆಳಗಾವಿ –590016 ಇಲ್ಲಿ ಅರ್ಜಿ ಪಡೆದು ಡಿಸೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ: ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಭವನ, ಕ.ಎಸ್.ಸಿ.ಎ ಕ್ರಿಕೇಟ್ ಕ್ರೀಡಾಂಗಣ ಎದುರುಗಡೆ, ರಾಮತೀರ್ಥ ನಗರ , ಬೆಳಗಾವಿ –590016 ಇವರನ್ನು ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದು ಅಥವಾ ಮೊಬೈಲ್ ಸಂಖ್ಯೆ : 9591210046 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಅಬ್ದುಲರಶೀದ್ ಮಿರ್ಜನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಕರ್ನಾಟಕ ಪಶ್ಚಿಮ, ವಾಯವ್ಯ ಶಿಕ್ಷಕರ/ ಪದವಿಧರರ ಮತಕ್ಷೇತ್ರ 

ಮತದಾರರ ಕರಡು ಪಟ್ಟಿ ಪ್ರಕಟ

ಬೆಳಗಾವಿ, ಡಿ. 8  : ಕರ್ನಾಟಕ ಪಶ್ಚಿಮ ಶಿಕ್ಷಕರು ಹಾಗೂ ವಾಯುವ್ಯ ಶಿಕ್ಷಕರು/ಪದವಿಧರರ ಮತ ಕ್ಷೇತ್ರದ ಮತದಾರರ ಕರಡು ಪಟ್ಟಿಯನ್ನು ಡಿಸೆಂಬರ್ 06 ರಂದು ಪ್ರಕಟಿಸಲಾಗಿದೆ.

ಈ ಮತದಾರರ ಕರಡು ಪಟ್ಟಿಯು ಮತದಾರರ ನೋಂದಣಿ ಅಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ, ಜಿಲ್ಲಾಧಿಕಾರಿಗಳು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಇವರುಗಳ ಕಚೇರಿಯಲ್ಲಿ ಹಾಗೂ ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ

ನಿಯೋಜಿತ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ.

ಅದೇ ರೀತಿ ಮುಖ್ಯ ಚುನಾವಣಾಧಿಕಾರಿಗಳು

ಬೆಂಗಳೂರು ಇವರ www.ceokarnataka.kar.nic.in ವೆಬ್‌ಸೈಟ್‌ನಲ್ಲಿಯೂ ಸಹ ಲಭ್ಯವಿರುತ್ತದೆ.

ಆಕ್ಷೇಪಣೆ ಸಲ್ಲಿಸಲು ಡಿ.27 ಕೊನೆಯ ದಿನಾಂಕ :

ಅರ್ಹ ಶಿಕ್ಷಕರಿಂದ ಹಾಗೂ ಪದವೀಧರರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿ.6 ರಿಂದ ಡಿ.27 ರವರೆಗೆ ಸಲ್ಲಿಸಬಹುದು. ಆದ್ದರಿಂದ, ಅರ್ಹ ಪ್ರತಿಯೊಬ್ಬ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಮತದಾರರ ನೋಂದಣಿ ನಿಯಮಗಳ ಪ್ರಕಾರ ಪದವೀಧರರು ಅರ್ಜಿ ನಮೂನೆ-18 ರಲ್ಲಿ ಹಾಗೂ ಶಿಕ್ಷಕರು ನಮೂನೆ-19 ನ್ನು ಭರ್ತಿ ಮಾಡಿ ಅವಶ್ಯಕ

ದಾಖಲೆಗಳನ್ನು ಲಗತ್ತಿಸಿ, ಸಂಬಂಧಿಸಿದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ವಿಭಾಗದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ವಾಯವ್ಯ ಶಿಕ್ಷಕರ ಹಾಗೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ತಿಳಿಸಿದ್ದಾರೆ.///

ಪರಿಷ್ಕೃತ ಸ್ಥಿರಾಸ್ತಿ ಗಳ ಮಾರ್ಗಸೂಚಿ ಬೆಲೆ ಪಟ್ಟಿಯ‌ ಕರಡು ಪ್ರತಿಯನ್ನು ಸಾರ್ವಜನಿಕ ಆಕ್ಷೇಪಣೆಗೆ

ಬೆಳಗಾವಿ ಡಿ. 08: ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 45 ಬಿ ರಲ್ಲಿ ರಾಜ್ಯದಲ್ಲಿನ ಸ್ವತ್ತುಗಳು ಮೌಲ್ಯಮಾಪನ ಅವುಗಳ ಪ್ರಕಟಣೆ ಹಾಗೂ ಪರಿಷ್ಕರಣೆ ಮಾಡಲು ಮಾನ್ಯ ನೊಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರವರ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಮೌಲ್ಯ ಮಾಪನ ಸಮಿತಿಯನ್ನು ರಚಿಸುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ ಸಿವಿಸಿ 99 2021 22 ಜುಲೈ 22ರಂದು ಕೇಂದ್ರೀಯ ಮೌಲ್ಯಮಾಪನ ಸಮಿತಿಯನ್ನು ರಚಿಸಲಾಗಿರುತ್ತದೆ ಮೇಲ್ಕಂಡ ಉದ್ದೇಶಕ್ಕಾಗಿ ಪ್ರತಿಯೊಂದು ಜಿಲ್ಲೆ ಹಾಗೂ ಜಿಲ್ಲೆಗಳಲ್ಲಿ ಉಪ ಸಮಿತಿಯನ್ನು ರಚಿಸಲು ಕಲಂ 45 ಬಿ ಯ 2 ನೇ ಉಪ ಕಲಾಂ ಅವಕಾಶ ಮಾಡಿಕೊಡುತ್ತದೆ.
ಅದರಂತೆ ಕರ್ನಾಟಕ ಮುದ್ರಾಂಕ ನಿಯಮಗಳು 2003ರ ನಿಯಮಗಳನ್ವಯ ಉಪಲಬ್ಧವಿರುವ ಅಧಿಕಾರದ ಸಂಕೇಶ್ವರ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಗಳನ್ನು ಕೇರಿ ತಾಲೂಕು ಉಪಸಮಿತಿಯ ಕೇಂದ್ರ ಮೌಲ್ಯಮಾಪನ ಸಮಿತಿಯು ನೀಡಿರುವ ಮಾರ್ಗಸೂಚಿಯಂತೆ ಹಾಗೂ ಕರ್ನಾಟಕ ಮುದ್ರಾಂಕ ನಿಯಮಗಳು 2013 ರ ಅನ್ವಯ ಸ್ವತ್ತುಗಳ ಬೆಲೆಗಳನ್ನು ಉಲ್ಲೇಖ ಒಂದು ಜುಲೈ 27ರ ಡಿ ನೀಡಲಾದ ಮಾರ್ಗಸೂಚಿಗಳನ್ವಯ ಮತ್ತು ನವೆಂಬರ್ 26 ರಂದು ಜರುಗಿದ ಹುಕ್ಕೇರಿ ತಾಲೂಕು ಸ್ಥಿರಾಸ್ತಿಗಳ ನಿರ್ಧಾರಣ ಉಪಸಮಿತಿ ಸಭೆಯಲ್ಲಿ ನೀಡಿದ ನಿರ್ದೇಶನಗಳನ್ನು ಪ್ರಮುಖ ಅಂಶಗಳನ್ನು ಮಾರ್ಗಸೂಚಿ ಬಲೆ ಪಟ್ಟಿಯಲ್ಲಿ ಅಳವಡಿಸಲಾಗಿರುತ್ತದೆ.
ಸದರಿ ಬೆಲೆ ಪಟ್ಟಿಯ ಕರಡುಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಅಕ್ಷೇಪಣೆ ಗಾಗಿ ಉಪ ನೋಂದಣಿ ಕಚೇರಿಯಲ್ಲಿ ಪ್ರಚುರಪಡಿಸಿ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸ್ಥಿರಾಸ್ತಿಗಳ ಮೌಲ್ಯ ನಿರ್ಧಾರಣಾ ಉಪಸಮಿತಿಯ ಉಪ ನೊಂದಣಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///