Belagavi News In Kannada | News Belgaum

ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ ಮತಾಂತರ ನಿಷೇಧ

ಬೆಳಗಾವಿ: ರಾಜ್ಯದಲ್ಲಿ ಮತಾಂತರ ತಡೆಯಲು ರೂಪಿಸಿರುವ ಕಾಯಿದೆ ಜಾರಿ ಸಂಬಂಧ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ತಡೆಯುವ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ.

ಮತಾಂತರಕ್ಕೆ ನಿಷೇಧ ಹೇರುವ ಮಸೂದೆಯ ಕರಡು ಈಗಾಗಲೇ ಸಿದ್ಧವಾಗಿದ್ದು, ಎರಡೆರೆಡು ಬಾರಿ ಕರಡನ್ನು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿ ಬೆಳಗಾವಿ ಅಧಿವೇಶನದಲ್ಲಿ ಈ ವಿಧೇಯಕ ಮಂಡಿಸಲು ತಯಾರಿ ನಡೆಸಲಾಗಿದೆ ಎನ್ನಲಾಗಿದೆ.

 

ಈ ಮತಾಂತರ ನಿಷೇಧ ಕಾಯ್ದೆಯಲ್ಲಿ ಕೆಲ ಕಠಿಣ ನಿಯಮ ಜಾರಿ ಮಾಡಲಾಗಿದ್ದು, ಮತಾಂತರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಂಶವು ವಿಧೇಯಕದಲ್ಲಿದೆ ಎಂದು ಮೂಲಗಳಿಂದ ತಿಳಿದಿದೆ.

 

ಈಗಾಗಲೇ ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಸೇರಿ 8 ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆಯನ್ನು ತರಿಸಿ ಶಾಸನ ರಚನೆ ಇಲಾಖೆ ಪರಿಶೀಲನೆ ನಡೆಸಿದೆ. ಕಾನೂನು ಇಲಾಖೆಯೂ ಇತರೆ ರಾಜ್ಯಗಳ ಕಾಯ್ದೆಯಲ್ಲಿನ ಕಾನೂನಾತ್ಮಕ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರ ಮಂಡಿಸಲಿರುವ ಈ ಮತಾಂತರ ನಿಷೇಧ ವಿಧೇಯಕದಲ್ಲಿ ಬಲವಂತದ ಮತಾಂತರವನ್ನು ಅಸಿಂಧು ಎಂದು ಘೋಷಿಸಲು ಅವಕಾಶವಿದೆ. ಮತಾಂತರ ಸಿಂಧುವಾಗಲು ಮ್ಯಾಜಿಸ್ಟ್ರೇಟ್‌ಗೆ ಮುಂದೆಯೇ ಮತಾಂತರ ಉದ್ದೇಶ ತಿಳಿಸಬೇಕು. ಹಾಗೆಯೇ ಮ್ಯಾಜಿಸ್ಟ್ರೇಟ್ ಅವರು ಮತಾಂತರ ವಾಸ್ತವ ಉದ್ದೇಶವನ್ನರಿಯಲು ಪೊಲೀಸ್ ತನಿಖೆ ನಡೆಸಲು ಅವಕಾಶ ನೀಡುವ ಅಂಶವೂ ವಿಧೇಯಕದಲ್ಲಿದೆ ಎಂದು ಹೇಳಲಾಗಿದೆ.

ಬಲವಂತದ ಮತಾಂತರ ಆಗಿಲ್ಲ ಎಂಬ ಅಂಶವನ್ನು ಸಾಬೀತುಪಡಿಸಬೇಕಾದ ಕಾನೂನನ್ನು ಈ ವಿಧೇಯಕದಲ್ಲಿ ಸೇರಿಸಲಾಗಿದೆ. ಹಾಗೆಯೇ ಬಲವಂತದ ಮತಾಂತರ ಮಾಡಿದವರಿಗೆ 1 ರಿಂದ 5 ವರ್ಷ ಜೈಲು ಶಿಕ್ಷೆ ವಿಧಿಸುವ ಅಂಶವೂ ಈ ಕಾಯ್ದೆಯಲ್ಲಿದೆ.

ಮತಾಂತರ ಮಸೂದೆ ಕಾಯ್ದೆ ಜಾರಿಗೆ ಕ್ರೈಸ್ತ ಸಮುದಾಯದವರು ವಿರೋಧ ವ್ಯಕ್ತಪಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವಿವಿಧ ಮಠಾಧೀಶರು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಂತೆ ಪಟ್ಟು ಹಿಡಿದಿದ್ದಾರೆ.

 

ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ಅವರು ಮತಾಂತರ ನಿಷೇಧದ ಖಾಸಗಿ ವಿಧೇಯಕವನ್ನು ಮಂಡಿಸಲು ಸಭಾಪತಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆರ್‌ಎಸ್‌ಎನವರು ಮತಾಂತರ ಮಸೂದೆ ಜಾರಿಮಾಡಲು ಒತ್ತಡ ಹೇರಿದ್ದು, ಬೆಳಗಾವಿ ಅಧೆವೇಶನದಲ್ಲಿ ಮತಾಂತರ ತಡೆ ಕಾಯ್ದೆ ಮಂಡನೆಯಾಗಿ ಅಂಗೀಕಾರವಾಗುವ ಸಾಧ್ಯತೆಗಳು ಹೆಚ್ಚು.