Belagavi News In Kannada | News Belgaum

ಬಿಪಿನ್‌ ರಾವತ್ ದಂಪತಿ ಪಂಚಭೂತಗಳಲ್ಲಿ ಲೀನ ಪುತ್ರಿಯರಿಂದ ಅಂತಿಮ ವಿಧಿ

ನವದೆಹಲಿ: ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮಡಿದಿದ್ದ ದೇಶದ ಮೂರು ಸಶಸ್ತ್ರ ಪಡೆಗಳ ಮೊತ್ತ ಮೊದಲ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಮತ್ತು ಪತ್ನಿ ಮಧುಲಿಕಾ ರಾವತ್‌ ಅವರ ಅಂತ್ಯಕ್ರಿಯೆ ಶುಕ್ರವಾರ ದೆಹಲಿ ಕಂಟೋನ್ಮೆಂಟ್‌ನಲ್ಲಿರುವ ಬ್ರಾರ್ ಸ್ಕ್ವೇರ್ ರುದ್ರ ಭೂಮಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನಡೆಸಲಾಯಿತು.

ಒಂದೇ ಚಿತೆಯಲ್ಲಿ ದಂಪತಿಗಳನ್ನು ಮಲಗಿಸಿ ಅಗ್ನಿ ಸ್ಪರ್ಷ ಮಾಡಲಾಯಿತು. ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅಂತಿಮ ವಿಧಿಗಳನ್ನು ನೆರವೇರಿಸಿದರು.
ಅಂತಿಮ ಯಾತ್ರೆಯ ವೇಳೆ ಸಾವಿರಾರು ಜನರು ಗೌರವ ನಮನ ಸಲ್ಲಿಸಿದರು.

ಜನರಲ್ ಬಿಪಿನ್ ರಾವತ್ ಅವರಿಗೆ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ , ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಗೌರವ ಸಲ್ಲಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್ಎಸ್ಎ ಅಜಿತ್ ದೋವಲ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಮೂರು ಸೇನಾ ಮುಖ್ಯಸ್ಥರಾದ ,ಭೂ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಹಾಜರಿದ್ದು, ಅಂತಿಮ ನಮನ ಸಲ್ಲಿಸಿದರು.