Belagavi News In Kannada | News Belgaum

ಸಂಸದರ ಅಮಾನತು ಹಿಂಪಡೆಯಲು ಒತ್ತಾಯ: ರಾಜ್ಯ ಸಭೆಯಿಂದ ಹೊರ ನಡೆದ ಕಾಂಗ್ರೆಸ್‌

ನವದೆಹಲಿ: ಸಂಸದರ ಅಮಾನತು ಆದೇಶ ಹಿಂಪಡೆಯದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್, ರಾಜ್ಯಸಭೆ ಕಲಾಪದಿಂದ ಸೋಮವಾರ ಸಭಾತ್ಯಾಗ ಮಾಡಿದೆ.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, 12 ಸಂಸದರ ಅಮಾನತು ಆದೇಶ ಹಿಂಪಡೆಯುವುದನ್ನು ಪರಿಗಣಿಸದೆ, ಸರ್ಕಾರವು ವಿರೋಧ ಪಕ್ಷಗಳನ್ನು ಸದನಕ್ಕೆ ಅಡ್ಡಿಪಡಿಸಲು ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದರು.
‘ನಾವು ಏನು ಮಾಡಬೇಕು, ಮಾಡಬಾರದು ಎಂಬುದನ್ನು ಸರ್ಕಾರವು ನಿರ್ದೇಶಿಸಲು ಸಾಧ್ಯವಿಲ್ಲ. ನೀವು ಸದನದ ಉಸ್ತುವಾರಿಯಾಗಿರುವುದರಿಂದ, 12 ಸದಸ್ಯರ ಅಮಾನತು ಆದೇಶವನ್ನು ರದ್ದುಗೊಳಿಸಬೇಕೆಂದು ನಾವು ಮನವಿ ಮಾಡುತ್ತೇವೆ. ಸದನಕ್ಕೆ ಅಡ್ಡಿಪಡಿಸಲು ಪ್ರತಿಪಕ್ಷಗಳನ್ನು ಪ್ರೇರೇಪಿಸುವುದೇ ಸರ್ಕಾರದ ಉದ್ದೇಶವಾಗಿದೆ, ಹಾಗಾಗಿಯೇ ನಾವು ಸಭಾತ್ಯಾಗ ಮಾಡಲು ನಿರ್ಧರಿಸಿದ್ದೇವೆ’ ಎಂದರು.
ಇದಕ್ಕೂ ಮುನ್ನ ಕಾಂಗ್ರೆಸ್ ಉಪ ನಾಯಕ ಆನಂದ್ ಶರ್ಮಾ ಮಾತನಾಡಿ, ಸದನದ ನಾಯಕರು ಇಲ್ಲೇ ಇದ್ದಾರೆ. ಅಮಾನತು ಆದೇಶವನ್ನು ರದ್ದುಪಡಿಸಬೇಕೆಂದು ನಾವು ಮನವಿ ಮಾಡುತ್ತೇವೆ’ ಎಂದರು. ಈ ವೇಳೆ ಡಿಎಂಕೆ ಸಂಸದ ತಿರುಚಿ ಶಿವ ಕೂಡ ಇವರ ಹೇಳಿಕೆಯನ್ನ ಪುನರುಚ್ಛರಿಸಿದರು.
ಅಮಾನತುಗೊಂಡವರಲ್ಲಿ ಕಾಂಗ್ರೆಸ್‌ನ ಸೈಯದ್ ನಾಸೀರ್ ಹುಸೇನ್, ಅಖಿಲೇಶ್ ಪ್ರಸಾದ್ ಸಿಂಗ್, ಪೌಲೊ ದೇವಿ ನೇತಮ್, ಛಾಯಾ ವರ್ಮ, ರಿಪುನ್ ಬೋರಾ ಮತ್ತು ರಾಜಮಣಿ ಪಟೇಲ್ ಸೇರಿದ್ದಾರೆ. ಪ್ರಿಯಾಂಕಾ ಚತುರ್ವೇದಿ, ಅನಿಲ್ ದೇಸಾಯಿ ಶಿವಸೇನಾ ಸಂಸದರು. ಎಲಾಮರಮ್ ಕರೀಮ್ ಸಿಪಿಐಎಂ, ಬಿನಾಯ್ ವಿಶ್ವಂ ಸಿಪಿಐ ಮತ್ತು ದೋಲಾ ಸೇನಾ ಹಾಗೂ ಶಾಂತ ಛೇತ್ರಿ ತೃಣಮೂಲ ಕಾಂಗ್ರೆಸ್‌ ಸಂಸದರಾಗಿದ್ದಾರೆ./////