Belagavi News In Kannada | News Belgaum

ಇಂದಿನ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು – ಪಿಎಸ್ಐ ಕುಮಾರ ಹಾಡಕರ

ರಾಜ್ಯಮಟ್ಟದ ಮುಕ್ತ ಕನ್ನಡ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಅಭಿಮತ

 

 ಅಥಣಿ:  ಇಂದಿನ ಮಕ್ಕಳನ್ನು   ಮೊಬೈಲ್ ಸಂಸ್ಕೃತಿಯಿಂದ  ದೂರವಿಟ್ಟು   ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಿದೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಭಾಷಣ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ ಸೇರಿದಂತೆ ಇನ್ನಿತರ ಕ್ರೀಡೆಗಳು ಕೂಡ ಪೂರಕವಾಗಿವೆ ಎಂದು  ಅಥಣಿ ಪಿಎಸ್ಐ  ಕುಮಾರ ಹಾಡಕರ ಹೇಳಿದರು.
 ಅವರು ರವಿವಾರ ಇಲ್ಲಿನ  ಐ.ಎಂ.ಎ ಸಭಾಂಗಣದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣಕುಮಾರ್  ಶೆಟ್ಟಿ ಬಣ) ಹಾಗೂ ಸಹಾಯ ಪೌಂಡೇಶನ್ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಲಾಗಿದ್ದ  ರಾಜ್ಯಮಟ್ಟದ  ಮುಕ್ತ ಕನ್ನಡ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಜೇತರಿಗೆ ಬಹುಮಾನ ವಿತರಿಸಿ   ಮಾತನಾಡಿದರು. ಇಂದಿನ ಮಕ್ಕಳು  ಪುಸ್ತಕದ ಬದಲಾಗಿ ಮೊಬೈಲ್ ನಲ್ಲಿ ಹೆಚ್ಚು ಕಾಲ  ಕಳೆಯುತ್ತಿದ್ದಾರೆ. ಪಾಲಕರು ಅದನ್ನು ಗಮನಿಸಿ ಮಕ್ಕಳು ದಾರಿ ತಪ್ಪದಂತೆ ಸರಿಯಾದ ಮಾರ್ಗದಲ್ಲಿ ನಡೆಸುವುದು ಅಗತ್ಯವಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಉತ್ತಮ ಶಿಕ್ಷಣ, ದೇಶಾಭಿಮಾನ ಕಲಿಸಿಕೊಡುವುದು ಅಗತ್ಯವಿದೆ ಎಂದರು.
 ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರಿಗೆ ಅನ್ಯಾಯವಾದಾಗ  ಬೀದಿಗಿಳಿದು ಹೋರಾಟ ಮಾಡುವುದರ ಜೊತೆಗೆ  ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಉದ್ದೇಶದಿಂದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ. ನಾಡಿನ ಭಾಷೆ ಕಲೆ ಸಂಸ್ಕೃತಿಗೆ  ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ನಾಡಿನ ಐತಿಹಾಸಿಕ  ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
  ಮುಖ್ಯ ಅತಿಥಿಗಳಾಗಿದ್ದ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ  ವಿ. ಎ. ಮಾಳಿ, ಕರವೇ ರಾಜ್ಯ ಕಾರ್ಯದರ್ಶಿ  ರವಿ ಪೂಜಾರಿ,
ನಿವೃತ್ತ ಇಂಜಿನಿಯರ್  ಅರುಣ್ ಯಲಗುದ್ರಿ, ಕಲಾವಿದ ಹಾಗೂ ನ್ಯಾಯವಾದಿ ಅಮೋಘ ಖೋಬ್ರಿ, ನ್ಯಾಯವಾದಿ ಸುನಿಲ್ ಸಂಕ ಮಾತನಾಡಿದರು.
 ಸಮಾರಂಭದ ಅಧ್ಯಕ್ಷತೆಯನ್ನು ಕರವೇ ತಾಲೂಕ ಅಧ್ಯಕ್ಷರು  ಅಣ್ಣಾಸಾಬ ತೆಲಸಂಗ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಹಾಯ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಸವಿನೆನಪಿನಲ್ಲಿ  ರಾಜ್ಯಮಟ್ಟದ ಮುತ್ತ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಕಳೆದ ದಿ.5 ರಂದು  ಹಮ್ಮಿಕೊಳ್ಳಲಾಗಿತ್ತು. ಪ್ರಾಥಮಿಕ ಶಾಲಾ ವಿಭಾಗದಿಂದ 395 ಮತ್ತು ಪ್ರೌಢಶಾಲಾ  ವಿಭಾಗದಿಂದ  235  ಮತ್ತು ಕಾಲೇಜು ಹಾಗೂ ಮುಕ್ತ ವಿಭಾಗದಲ್ಲಿ  43 ಜನ ಭಾಗವಹಿಸಿದ್ದರು. ಮೂರು ವಿಭಾಗದಲ್ಲಿ  ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡುವುದರ ಜೊತೆಗೆ  21 ಜನರಿಗೆ ಸಮಾಧಾನಕರ ಬಹುಮಾನ ನೀಡಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ  ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ  ಅನೇಕ ಸಮಾಜ ಸೇವಕರು, ಕನ್ನಡ ಅಭಿಮಾನಿಗಳು ಪ್ರಾಯೋಜಕತ್ವವನ್ನು ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಇಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ  ಅನೇಕ ಜನರ ಸಹಾಯ-ಸಹಕಾರ ಮುಖ್ಯವಾಗಿರುತ್ತದೆ ಎಂದ ಅವರು  ಕನ್ನಡ ಪರ ಕಾರ್ಯಕ್ರಮಗಳಿಗೆ ಎಲ್ಲ ಪ್ರಾಯೋಜಕರಿಗೆ ಅಭಿನಂದಿಸಿದರು.
 ದಿವ್ಯ ಸಾನಿಧ್ಯ ವಹಿಸಿದ್ದ  ಶೆಟ್ಟರ ಮಠದ ಮರುಳಸಿದ್ಧ ಮಹಾಸ್ವಾಮೀಜಿ  ಆಶೀರ್ವಚನ ನೀಡುತ್ತಾ ಕನ್ನಡ ನಮ್ಮ ಉಸಿರಿನ ಭಾಷೆಯಾಗಬೇಕು. ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಿ ಕನ್ನಡ ಉಳಿಯಲಿ ಬೆಳೆಯಲಿ ಎಂದರೆ ಸಾಧ್ಯವಿಲ್ಲ. ಮಕ್ಕಳಿಗೆ ಅಕ್ಷರದ ಅರಿವಿನ ಜೊತೆಗೆ ಗುರುವಿಗೆ ತಲೆಬಾಗುವ ಸಂಸ್ಕೃತಿಯನ್ನು ಕಲಿಸಬೇಕು. ತಮ್ಮ ಸಂಸ್ಕಾರ ಹೊಂದಿದ ಮಗು ಉನ್ನತ ಸ್ಥಾನದಲ್ಲಿ ಬೆಳೆಯಲು ಸಾಧ್ಯವಿದೆ. ನಮ್ಮ ಭಾಷೆ, ನೆಲ ಜಲ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ  ಪ್ರತಿಯೊಬ್ಬರು  ಸ್ವಾಭಿಮಾನ  ಹೊಂದಿರಬೇಕು ಎಂದು ಹೇಳಿದರು.
ಈ ಸಮಾರಂಭದಲ್ಲಿ  ಕರವೇ ಜಿಲ್ಲಾ ಕಾರ್ಯದರ್ಶಿ  ರಾವಸಾಬ ಐಹೊಳೆ, ಜಿಲ್ಲಾ ಸಂಚಾಲಕ ಜಗನ್ನಾಥ ಭಾವನೆ, ಶಿಕ್ಷಣ ಪ್ರೇಮಿ ಡಿ.ಡಿ ಮೇಕಲಮರಡಿ, ಅಥಣಿ  ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ್ ತೊಡ್ಕರ್, ಸಂತೋಷ್ ಜಾದವ್, ಕರವೇ  ಮಹಿಳಾ ಅಧ್ಯಕ್ಷ  ವಿದ್ಯಾ ಮರಡಿ, ಉದಯ ಮಾಕಾಣಿ, ಶಂಕರ ಮಗದುಮ್ಮ, ಕುಮಾರ ಬಡಿಗೇರ, ರಾಜು ವಾಗ್ಮೋರೆ ಇನ್ನಿತರರು  ಉಪಸ್ಥಿತರಿದ್ದರು. ಸಮಾರಂಭದಲ್ಲಿ ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ  ದೇಶದ ಶಶಸ್ತ್ರ ಮೀಸಲು ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾಧಿಕಾರಿಗಳಿಗೆ  ಶ್ರದ್ದಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.  ಸಿದ್ದು ಹಂಡಗಿ  ಸ್ವಾಗತಿಸಿದರು. ಸಂತೋಷ್ ಭಡ್ಕಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಹುದ್ದಾರ ವಂದಿಸಿದರು.