Belagavi News In Kannada | News Belgaum

ಅಥಣಿ ಕಾಗವಾಡ ತಾಲೂಕಿನಲ್ಲಿ ಹೆಚ್ಚಿದ ಕಳ್ಳತನಗಳಿಂದ ಬೆಚ್ಚಿಬಿದ್ದ ಜನರಿಗೆ ಪೋಲಿಸರ ಅಭಯ

ಅಥಣಿ: ಕಳೆದ ಎರಡು ತಿಂಗಳಿನಿಂದ ಚಳಿಗಾಲ ಆರಂಭವಾಗುತ್ತಿದ್ದಂತೆಯೆ ಅಥಣಿ ಮತ್ತು ಕಾಗವಾಡ ತಾಲೂಕಿನ ಹಲವು ಕಡೆ ಮನೆಗಳು,ದೇವಸ್ಥಾನಗಳು, ಅಂಗಡಿಗಳು ಸೇರಿದಂತೆ ಹತ್ತಾರು ಕಡೆ ಕಳ್ಳತನಗಳು ನಡೆದಿವೆ. ಇನ್ನೂ ಐನಾಪೂರ ಮತ್ತು ಮಂಗಸೂಳಿ ಗ್ರಾಮದಲ್ಲಿ ಕಳ್ಳರು ಮಾರಕಾಸ್ತ್ರಗಳೊಂದಿಗೆ ಗುಂಪು ಗುಂಪಾಗಿ ಸಂಚರಿಸುತ್ತಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಜನರಲ್ಲಿ ಭಯದ ವಾತಾವರಣ ಮೂಡಿದೆ.
ಇನ್ನೂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆರಳಚ್ಚು ತಜ್ಞರು, ಸ್ನೀಪರ್ ಡಾಗ್ ಸ್ಕ್ವಾಡ್ ಮೂಲಕ ಅಥಣಿ ಡಿವೈಎಸ್ಪಿ, ಎಸ್. ವ್ಹಿ ಗಿರೀಶ ಮತ್ತು ಸಿಪಿಐ ಶಂಕರಗೌಡ ಬಸನಗೌಡರ ಅವರ ಮಾರ್ಗದರ್ಶನದಲ್ಲಿ ಮೂರಕ್ಕೂ ಅಧಿಕ ಪೋಲಿಸ್ ತಂಡಗಳನ್ನು ರಚಿಸಿ ಕಳ್ಳರ ಪತ್ತೆಗೆ ಜಾಲ ಬೀಸಲಾಗಿದ್ದು ಮಹಾರಾಷ್ಟ್ರ ಪೋಲಿಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಆದಷ್ಟು ಬೇಗ ಕಳ್ಳರ ಹೆಡೆ ಮುರಿ ಕಟ್ಟುವದಾಗಿ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 ಅಷ್ಟೇ ಅಲ್ಲದೆ ಗ್ರಾಮೀಣ ಭಾಗ ಒಳಗೊಂಡಂತೆ ಪಟ್ಟಣದಲ್ಲಿಯೂ ಹೆಚ್ಚುವರಿ ಪೋಲಿಸ್ ಸಿಬ್ಬಂದಿಯ ರಾತ್ರಿ ಗಸ್ತು ಹೆಚ್ವಿಸಲಾಗಿದ್ದು ಸಾರ್ವಜನಿಕರು ಭಯಮುಕ್ತರಾಗುವಂತೆ ಡಿವೈಎಸ್ಪಿ ಎಸ್. ವ್ಹಿ ಗಿರೀಶ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು ಪರ ಊರುಗಳಿಗೆ ತೆರಳುವ ಜನರು ಅಕ್ಕಪಕ್ಕದ ಮನೆಯವರಿಗೆ ಮತ್ತು ಪೋಲಿಸ್ ಇಲಾಖೆಗೆ ಮಾಹಿತಿ ನೀಡಬೇಕು, ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ ಗಳಲ್ಲಿ ಇಡುವ ಮೂಲಕ ಸಹಕರಿಸಬೇಕು ಮತ್ತು ಅಪರಿಚಿತ ಸಂಶಯಾಸ್ಪದ ಜನರು ಕಂಡು ಬಂದಲ್ಲಿ ಪೋಲಿಸರಿಗೆ ಮಾಹಿತಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.