Belagavi News In Kannada | News Belgaum

ಸಚಿವರನ್ನು ಸಂಪುಟದಿಂದ ಕೈ ಬಿಟ್ಟ ಗೋವಾ ಸರ್ಕಾರ

ಪಣಜಿ: ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಗೋವಾದ ಬಿಜೆಪಿ ಸರ್ಕಾರಕ್ಕೆ ಭಾರೀ ಪೆಟ್ಟು ಬಿದ್ದಿದೆ. ನಗರಾಭಿವೃದ್ದಿ ಮತ್ತು ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ ಅವರು ಲೈಂಗಿಕ ಹಗರಣವೊಂದರಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಅವರು ಪ್ರಮೋದ್ ಸಾವಂತ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

ಓರ್ವ ಸಚಿವನಾಗಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಲು ಅನುವು ಮಾಡುವ ಸಲುವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಾಯಕ್ ಹೇಳಿದ್ದಾರೆ. ನಾನು ಅವರ ರಾಜೀನಾಮೆ ಅಂಗೀಕರಿಸಿದ್ದೇನೆ ಮತ್ತು ಅದನ್ನು ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರಿಗೆ ಕಳುಹಿಸಿದ್ದೇನೆ ಎಂದು ಸಾವಂತ್ ಸುದ್ದಿಗಾರರಿಗೆ ತಿಳಿಸಿದರು.

ನ.30ರಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗಿರೀಶ್ ಛೋಡಂಕರ್ ಅವರು ರಾಜ್ಯದ ಸಚಿವರೊಬ್ಬರು ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು 15 ದಿನಗಳ ಗಡುವು ನೀಡಿದ್ದರು.

ಈ ಸಚಿವರ ಹೆಸರು ಬಹಿರಂಗಪಡಿಸಿದರೆ ಕ್ರಮ ಕೈಗೊಳ್ಳುವುದಾಗಿ ಸಾವಂತ್ ಪ್ರತಿಪಾದಿಸಿದ್ದರು. ಬಿಜೆಪಿ ರಾಜ್ಯ ಮುಖ್ಯಸ್ಥ ಸದಾನಂದ ಶೇಟ್ ತಾನಾವಡೆ ಅವರು ಕಾಂಗ್ರೆಸ್ ಈ ಸಚಿವರು ಯಾರು ಎಂದು ತಿಳಿಸಿದರೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಛೋಡಂಕರ್ ಅವರಿಗೆ ಸವಾಲೆಸೆದಿದ್ದರು.

ಬುಧವಾರ ಕಾಂಗ್ರೆಸ್ ನೀಡಿದ 15 ದಿನಗಳ ಗಡುವು ಮುಕ್ತಾಯಗೊಂಡಿದ್ದು ಸಚಿವ ಮಿಲಿಂದ್ ನಾಯಕ್ ಬಿಹಾರ ಮೂಲದ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಛೋಡಂಕರ್ ಬಹಿರಂಗ ಹೇಳಿಕೆ ನೀಡಿದ್ದರು./////