Belagavi News In Kannada | News Belgaum

ಶೌರ್ಯ/ಶೌರ್ಯೇತರ ಪ್ರಶಸ್ತಿ ವಿಜೇತರಿಗೆ ಅನುದಾನ 4 ಪಟ್ಟು ಹೆಚ್ಚಳ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶೌರ್ಯ/ಶೌರ್ಯೇತರ ಪ್ರಶಸ್ತಿ ವಿಜೇತರಿಗೆ ಅನುದಾನ 4 ಪಟ್ಟು ಹೆಚ್ಚಳ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಾಲಮಿತಿಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಅನುಷ್ಠಾನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಬೆಳಗಾವಿ,ಡಿ.16  : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಸುಗಮ ಸುವ್ಯವಸ್ಥಿತ ವಾಹನ ನಿಲುಗಡೆಗಾಗಿ ಕೈಗೊಂಡಿರುವ ಸ್ಮಾರ್ಟ್ ಪಾರ್ಕಿಂಗ್ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಲ್ಮನೆಗೆ ತಿಳಿಸಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಆರ್. ರಮೇಶ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಬೆಂಗಳೂರು ನಗರದ ಸಂಚಾರಿ ದಟ್ಟಣೆ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು 85 ರಸ್ತೆಗಳಲ್ಲಿ ಸುವ್ಯವಸ್ಥಿತ ವಾಹನ ನಿಲುಗಡೆಗಾಗಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ 10 ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಬಳಸಲಾಗುತ್ತದೆ. ಎರಡನೇ ಹಂತದಲ್ಲಿ 32 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನೀಲಿ ನಕ್ಷೆ ತಯಾರಿಸಿ ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ಸ್ಮಾರ್ಟ್ ಪಾರ್ಕಿಂಗಿಗೆ ಅಗತ್ಯವಾದ ಉಪಕರಣಗಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಸ್ತೆ ಇತಿಹಾಸ: ಬೆಂಗಳೂರು ನಗರದ ಪ್ರಮುಖ ರಸ್ತೆಗಳ ಇತಿಹಾಸ ದಾಖಲಿಸಿ ರಸ್ತೆ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತಂತೆ ಶೀಘ್ರವೇ ಸಭೆ ನಡೆಸಲಾಗುವುದು. ಯಾವುದೇ ಒಂದು ರಸ್ತೆಯ ಸ್ಥಿತಿ ಯಾವ ಯಾವ ಯೋಜನೆಯಡಿ ಯಾವ ಯಾವ ಕಾಲದಲ್ಲಿ ದುರಸ್ತಿಯಾಗಿದೆ ಎಂಬ ಮಾಹಿತಿಯನ್ನು ದಾಖಲಿಸಲಾಗುವುದು. ಇದರಿಂದ ಒಂದೇ ರಸ್ತೆಯನ್ನು ಹಲವು ಯೋಜನೆಗಳಲ್ಲಿ ಪುನರಾವರ್ತಿತ ಅನುದಾನ ಬಳಸಿ ದುರಸ್ತಿ ಮಾಡುವುದನ್ನು ತಡೆಹಿಡಿಬಹುದಾಗಿದೆ. ಪಾರದರ್ಶಕತೆ ಕಾಪಾಡಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.////

ಸಿಂಧುತ್ವ ನಂತರ ಎಫ್.ಡಿ.ಎ.-ಎಸ್.ಡಿ.ಎ.
ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ

ಬೆಳಗಾವಿ,ಡಿ.16 : ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಗೊಂಡ ಅಭ್ಯರ್ಥಿಗಳ ಸಕ್ಷಮ ಪ್ರಾಧಿಕಾರದಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ನೆಡೆಸಿ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸದಸ್ಯ ಅ.ದೇವೆಗೌಡ ಅವರ ಪ್ರಶ್ನೆಗೆ ಮೇಲ್ಮನೆಯಲ್ಲಿ ಉತ್ತರಿಸಿದ ಅವರು 2017-18ರಲ್ಲಿ ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಕೆ.ಪಿ.ಎಸ್.ಸಿ. ಅಂತಿಮ ಆಯ್ಕೆ ಪಟ್ಟಿಯನ್ನು ಸಕ್ಷಮ ಪ್ರಾಧಿಪಾರಗಳಿಗೆ ಕಳುಹಿಸಿದೆ. ಸಂಬಂಧಪಟ್ಟ ಪ್ರಾಧಿಕಾರಿಗಳು ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ, ಸಿಂಧುತ್ವ ಪ್ರಮಾಣಪತ್ರ ಇತ್ಯಾದಿ ಪರಿಶೀಲನಾ ಕಾರ್ಯ ಪ್ರಕ್ರಿಯೆ ಪೂರ್ಣಗೊಳಿಸಿ ನೇಮಕಾತಿ ಆದೇಶ ನೀಡುತ್ತವೆ ಎಂದು ಉತ್ತರಿಸಿದ್ದಾರೆ.////

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೊಸ ವೈದ್ಯಕೀಯ
ಕಾಲೇಜು ಸ್ಥಾಪನೆ-ಡಾ. ಕೆ. ಸುಧಾಕರ


ಬೆಳಗಾವಿ,ಡಿ.16  : ಖಾಸಗಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಅವರು ಮೇಲ್ಮನೆಗೆ ತಿಳಿಸಿದರು.

ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ ಅವರ ಪ್ರಸ್ತಾವನೆಗೆ ಉತ್ತರ ನೀಡಿದ ಅವರು ನೀತಿ ಆಯೋಗದಂತೆ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅವಕಾಶವಿದೆ. ಈಗಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಕಾರ್ಯ ಆರಂಭವಾಗಿದೆ ಎಂದರು.

ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂಬುವುದು ಸರ್ಕಾರದ ನೀತಿಯಾಗಿದೆ. ಇದರನ್ವಯ 2014-15ನೇ ಸಾಲಿನ ಆಯವ್ಯಯದ ಘೋಷಣೆಯಲ್ಲಿ ತುಮಕೂರ, ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಘೋಷಣೆ ಮಾಡಿ ಮಂಜೂರಾತಿ ನೀಡಲಾಗಿತ್ತು. ಅನುದಾನದ ಲಭ್ಯತೆಗನುಗುಣವಾಗಿ ಈ ಮುಂಚೆ ಘೋಷಣೆ ಮಾಡಿದ ಗುಲಬರ್ಗಾ, ಗದಗ, ಕೊಪ್ಪಳ, ಕಾರವಾರ, ಕೊಡಗು ಮತ್ತು ಚಾಮರಾಜನಗರಗಳಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಅನುದಾನ ಒದಗಿಸಬೇಕಾಗಿರುವುದರಿಂದ ಸದರಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮುಂದೂಡಲಾಗಿತ್ತು ಎಂದು ತಿಳಿಸಿದರು.

2019-20ನೇ ಸಾಲಿನಲ್ಲಿ ಹಾವೇರಿ, ಯಾದಗಿರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಕ್ರಮವಹಿಸಿದೆ. ಈಗಾಗಲೇ ಖಾಸಗಿ ವೈದ್ಯಕೀಯ ಕಾಲೇಜುಗಳು ಹೊಂದಿದ ಜಿಲ್ಲೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಉದ್ದೇಶಿಸಿದೆ ಎಂದರು.///

ಗ್ರೂಪ್ ಕ್ಯಾಪ್ಟನ್ ವರುಣ್‍ಸಿಂಗ್ ನಿಧನಕ್ಕೆ ಮೇಲ್ಮನೆಯಲ್ಲಿ ಸಂತಾಪ
ಶೌರ್ಯ/ಶೌರ್ಯೇತರ ಪ್ರಶಸ್ತಿ ವಿಜೇತರಿಗೆ ಅನುದಾನ 4 ಪಟ್ಟು ಹೆಚ್ಚಳ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ ಸುವರ್ಣ ಸೌಧ  .ಡಿ.16: ಕುನೂರು ಕಾನನದಲ್ಲಿ ಘಟಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡು ಬದುಕುಳಿದಿದ್ದ ಭಾರತದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣಸಿಂಗ್ ಅವರ ನಿಧನರಾಗಿರುವುದಕ್ಕೆ ಮೇಲ್ಮನೆಯಲ್ಲಿ ಸಂತಾಪ ಸೂಚಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿ ವರುಣಸಿಂಗ್ ಅವರು ನಿಧನರಾಗಿರುವುದು ಅತ್ಯಂತ ದುಃಖದ ಸಂಗತಿ. ಅವರ ನಿಧನವು ಹಿರಿಯ ವೀರ ಯೋಧರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ನುಡಿದರು. ಅವರ ಜೀವನ ಮತ್ತು ನಡೆದುಬಂದ ದಾರಿಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಸಭಾನಾಯಕರು ಹಾಗೂ ಸಚಿವರಾದ ಕೋಟಶ್ರೀನಿವಾಸ ಪೂಜಾರಿ ಹಾಗೂ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಸಂತಾಪಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದುರಂತದಲ್ಲಿ ಶೇ.80ರಷ್ಟು ಸುಟ್ಟಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‍ರನ್ನು ನೋಡಲು ರಾಜ್ಯಪಾಲರೊಂದಿಗೆ ತೆರಳಿದ್ದೆ. ಅವರ ಕಿಡ್ನಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದಾಗ್ಯೂ ಕೂಡ ಅವರು ಅವರ ಮನೋಸ್ಥೈರ್ಯ ಕುಗ್ಗಿರಲಿಲ್ಲ. ಬದುಕಿ ಬರಲು ಹೋರಾಟ ನಡೆಸುತ್ತಿದ್ದರು. ಸಾವು ಎದುರಿಗೆ ಇದ್ದರೂ ಧೃತಿಗೆಡದೆ ಎದುರಿಸುವ ಅವರ ಮನೋಬಲ ಸೈನಿಕರ ಬಗೆಗಿನ ಹೆಮ್ಮೆಯನ್ನು ಹೆಚ್ಚಿಸಿತು ಎಂದರು.

ಹಲವು ಸೇನಾಧಿಕಾರಿಗಳು ದೇಶದ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ಜನರಲ್ ಕೆ.ಎಂ.ಕಾರಿಯಪ್ಪ, ತಿಮ್ಮಯ್ಯ, ಮಾಣಿಕ್ ಷಾ ಅಂತವರ ಸೇವೆ ಜನ ಮಾನಸದಲ್ಲಿ ಉಳಿದಿದೆ. ಹೀಗೆ ಮೂರು ಸೇನೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಸೇವೆಯನ್ನು ಸಹ ಮರೆಯಲಾಗದು ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು ಸೇನೆಯ ಆಧುನಿಕರಣ, ದೇಶದಲ್ಲಿಯೇ ಸೇನೆಗೆ ಅಗತ್ಯ ಇರುವ ಶಸ್ತ್ರಾಸ್ತ್ರ ನಿರ್ಮಿಸುವ ಉದ್ದಿಮೆ ಸ್ಥಾಪನೆಗೆ ಅವರು ಪ್ರಯತ್ನಿಸಿದ್ದರು. ಇಂದು ಖಾಸಗಿ ವಲಯದಲ್ಲಿ ಸೇನಾ ಶಸ್ತ್ರಾಸ್ತ್ರಗಳನ್ನು ತಯಾರಿಸುವುದರೊಂದಿಗೆ, ಹೊರದೇಶಕ್ಕೂ ಸರಬರಾಜು ಮಾಡುವ ಹಂತಕ್ಕೆ ದೇಶ ತಲುಪಿದೆ;ಇದರಲ್ಲಿ ಜನರಲ್ ಬಿಪಿನ್ ರಾವತ್ ಶ್ರಮ ದೊಡ್ಡದು. ರಾವತ್ ಸೇವೆ ಹಾಗೂ ದಕ್ಷತೆಯನ್ನು ಮೆಚ್ಚಿ ಪ್ರಧಾನ ಮಂತ್ರಿಗಳು ಮೂರು ಸೇನೆಗಳ ಮುಖ್ಯಸ್ಥರನ್ನಾಗಿ ಅವರನ್ನು ನೇಮಿಸಿದ್ದರು ಎಂದರು.

ಕೂನುರು ದುರಂತದಲ್ಲಿ ಸೇನೆಯ ಅತ್ಯನ್ನತ ಅಧಿಕಾರಿಗಳನ್ನು ದೇಶ ಕಳೆದುಕೊಂಡಿದೆ. ಘಟನೆಯ ಬಗ್ಗೆ ತಿಳಿದುಕೊಳ್ಳಲು ದೇಶದ ಜನ ಬಯಸಿದ್ದರು. ಕ್ಯಾಪ್ಟನ್ ವರುಣ್ ಸಿಂಗ್ ಬದುಕಿ ಬಂದಿದ್ದರೆ ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತಿತ್ತು. ಆದರೆ ಅವರು ಅಸುನೀಗಿರುವುದು ದುಃಖ ತಂದಿದೆ ಎಂದರು.
*ಶೌರ್ಯ/ಶೌರ್ಯೇತರ ಪ್ರಶಸ್ತಿ ವಿಜೇತರಿಗೆ ಅನುದಾನ 4 ಪಟ್ಟು ಹೆಚ್ಚಳ: ಶೌರ್ಯ ಮತ್ತು ಶೌರ್ಯೇತರ ಪ್ರಶಸ್ತಿ ವಿಜೇತರಿಗೆ ಒಂದು ಬಾರಿ ನೀಡಲಾಗುತ್ತಿದ್ದ ಅನುದಾನವನ್ನು 4 ಪಟ್ಟು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ಯೋಧರ ಮನೋಭಿಲಾಷೆಯನ್ನು ಹೆಚ್ಚಿಸಿ ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಹಾಗೂ ಯೋಧರ ಮನೋಸ್ಥೈರ್ಯ ಹೆಚ್ಚಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಪರಿಷತ್‍ನಲ್ಲಿ ಸಂತಾಪ ಸೂಚನೆಯ ಸಂದರ್ಭದಲ್ಲಿ ತಿಳಿಸಿದರು.

ಸೇನಾ ಶೌರ್ಯ ಪ್ರಶಸ್ತಿ ಪಡೆದವರಿಗೆ ರಾಜ್ಯ ಸರ್ಕಾರವು ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ವತಿಯಿಂದ ಒಂದು ಬಾರಿಗೆ ನೀಡುತ್ತಿರುವ ಅನುದಾನ ಇತರೆ ರಾಜ್ಯಗಳಿಗೆ ಹೊಲಿಸಿದರೆ ಕಡಿಮೆ ಇದೆ ಎಂಬ ಅಂಶ ಗಮನಕ್ಕೆ ಬಂದಿತು.ಈ ಹಿನ್ನೆಲೆಯಲ್ಲಿ ಇಂದು ಈ ಆದೇಶವನ್ನು ನಮ್ಮ ಸರಕಾರ ಹೊರಡಿಸಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು
ಪರಮವೀರ ಚಕ್ರ ಪ್ರಶಸ್ತಿ ಪಡೆದವರಿಗೆ ಈ ಹಿಂದೆ 25 ಲಕ್ಷ ನೀಡಲಾಗುತ್ತಿತ್ತು. ಇದನ್ನು 1.5 ಕೋಟಿಗೆ ಹೆಚ್ಚಿಸಲಾಗಿದೆ. ಹೀಗೆಯೇ ಮಹಾವೀರ ಚಕ್ರ ಪಡೆದವರಿಗೆ 1 ಕೋಟಿ, ಅಶೋಕ ಚಕ್ರ 1.5 ಕೋಟಿ, ಕೀರ್ತಿಚಕ್ರ ಪಡೆದವರಿಗೆ 1 ಕೋಟಿ, ವೀರ ಹಾಗೂ ಶೌರ್ಯಚಕ್ರ ಪಡೆದವರಿಗೆ 50 ಲಕ್ಷ, ಸೇನಾ ಮೆಡಲ್ ಪಡೆದವರಿಗೆ 15 ಲಕ್ಷ, ಮೆನ್ ಶನ್ ಎನ್ ಡಿಸ್ ಪ್ಯಾಚ್ ಪಡೆದವರಿಗೆ 15 ಲಕ್ಷ ರೂ.ಅನುದಾನ ನೀಡಲಾಗುತ್ತದೆ ಎಂದರು.

 

ವಿಧಾನಸಭೆಯಲ್ಲಿಯೂ ಸಂತಾಪ: ಹೆಲಿಕ್ಯಾಪ್ಟರ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಪ್ಟನ್ ವರುಣಸಿಂಗ್ ಅವರು ನಿನ್ನೆ ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಇಂದು ವಿಧಾನಸಭೆ ಕಾರ್ಯಕಲಾಪಗಳು ಆರಂಭವಾಗುತ್ತಿದ್ದಂತೆಯೇ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ವ್ಯಕ್ತಪಡಿಸಿ ಮೃತರ ಗೌರವಾರ್ಥ ಒಂದು ನಿಮಿಷ ಕಾಲ ಮೌನ ಆಚರಿಸಲು ಸೂಚಿಸಿದರು. ಸದನದ ಸದಸ್ಯರು ಎದ್ದು ನಿಂತು ಗೌರವ ಸಲ್ಲಿಸಿದರು.///

ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರಿಂದ ಪಾರದರ್ಶಕ ನಡೆ: ಸಚಿವ ಅರಗ ಜ್ಞಾನೇಂದ್ರ

ಬೆಳಗಾವಿ ಸುವರ್ಣಸೌಧ,ಡಿ.16  : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರು ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಅವರು ಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯ ಯು.ಬಿ.ವೆಂಕಟೇಶ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 11 ಬಿಟ್‍ಕಾಯಿನ್ ಪ್ರಕರಣಗಳು ದಾಖಲಾಗಿವೆ. ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಡಾರ್ಕ್‍ವೆಬ್ ಮುಖಾಂತರ ಡ್ರಗ್ಸ್ ಪ್ರಕಣದಲ್ಲಿ ಶ್ರೀಕಿ ಸಿಕ್ಕಿಹಾಕಿಕೊಂಡಾಗ ಪೊಲೀಸರಿಗೆ ಬಿಟ್‍ಕಾಯಿನ್ ಹ್ಯಾಕರ್ ಅಂತ ಗೊತ್ತಿರಲಿಲ್ಲ;ವಿಚಾರಣೆ ನಡೆಸಿದ ನಂತರ ಶ್ರೀಕಿ ಹ್ಯಾಕರ್ ಅಂತ ಗೊತ್ತಾಯಿತು ಎಂದು ವಿವರಿಸಿದ ಗೃಹ ಸಚಿವ ಅರಗಜ್ಞಾನೇಂದ್ರ ಅವರು ನಿಯಮಾನುಸಾರ ಯಾವ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಬೇಕಾಗಿತ್ತೋ ಅವುಗಳನ್ನು ದಾಖಲಿಸಲಾಗಿದೆ ಎಂದರು.

ಶ್ರೀಕಿಯನ್ನು ಉಳಿಸುವ ಅಗತ್ಯ ನಮಗಿಲ್ಲ;ನಿಯಮಾನುಸಾರ ಏನು ಮಾಡಬೇಕೋ ಅವುಗಳನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಶ್ರೀಕಿಯನ್ನು ಪೊಲೀಸರೇ ಡ್ರಗ್ಸ್ ಸೇವನೆ ಮಾಡಲು ಹೇಳುತ್ತಿದ್ದಾರೆ ಮತ್ತು ಅವರಿಗೆ ಯರ್ರಾಬಿರ್ರಿ ಹೊಡೆಯಲಾಗಿದೆ ಮತ್ತು ಠಾಣೆಗೆ ಕರೆಯಿಸಿ ಪೊಲೀಸರಿಗೆ ಬಿಟ್ ಕಾಯಿನ್‍ಗಳನ್ನು ಹ್ಯಾಕ್ ಮಾಡಿಸಿಕೊಂಡಿದ್ದಾರೆ. ಎಸ್‍ಐ ಪರೀಕ್ಷೆಗಳಲ್ಲಿ 22 ಅಭ್ಯರ್ಥಿಗಳ ಅಂಕಗಳನ್ನು ಪೊಲೀಸರು ಹ್ಯಾಕ್ ಮಾಡಿಸಿಕೊಂಡಿದ್ದಾರೆ ಎಂದು ಸದಸ್ಯ ಯು.ಬಿ.ವೆಂಕಟೇಶ ಅವರ ಆರೋಪಗಳಿಗೆ ಉತ್ತರಿಸಿದ ಸಚಿವ ಅರಗ ಜ್ಞಾನೇಂದ್ರ ಅವರು ಈಗ ಶ್ರೀಕಿ ಜಾಮೀನು ಮೇಲೆ ಹೊರಗಡೆಯೇ ಇದ್ದಾನೆ;ತೊಂದರೆ ಕೊಟ್ಟಿದ್ದರೇ ಮಾಧ್ಯಮದವರಿಗೆ ತಿಳಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು; ತಮ್ಮೆಲ್ಲ ಆರೋಪಗಳು ನಿರಾಧಾರ ಎಂದು ಸ್ಪಷ್ಟಪಡಿಸಿದರು.///

ಮಳೆ ನೀರು ಸಂಗ್ರಹ ಜನಾಂದೋಲನ: ಸಿಎಂ ಬೊಮ್ಮಾಯಿ

ಬೆಳಗಾವಿ ಸುವರ್ಣಸೌಧ,ಡಿ.16  : ಬೆಂಗಳೂರು ನಗರದಲ್ಲಿ ಮಳೆನೀರು ಸಂಗ್ರಹ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಮಾಡಲಾಗುವುದು.ಖಾಸಗಿ ಆಸ್ತಿಗಳಲ್ಲಿಯೂ ಮಳೆ ನೀರು ಸಂಗ್ರಹಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಅಲ್ಲಂವೀರಭದ್ರಪ್ಪ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ ಅವರು ಮಳೆ ನೀರು ಸಂಗ್ರಹ ಜನಾಂದೋಲನ ರೂಪದಲ್ಲಿ ಮಾಡಲಾಗುವುದು; ಆ ಸಂದರ್ಭದಲ್ಲಿ ತಮ್ಮೆಲ್ಲ ಸಲಹೆಗಳನ್ನು ಇದರಡಿ ಅಳವಡಿಸಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಮಳೆ ನೀರಿನ ಮರುಬಳಕೆಗೆ ಸಂಬಂಧಿಸಿದಂತೆ ಅಂತರ್ಜಲಮಟ್ಟವನ್ನು ಕಾಯ್ದುಕೊಳ್ಳುವ ಸಂಬಂಧ ಸರಕಾರದ ಉದ್ಯಾನವನಗಳು,ಕಟ್ಟಡಗಳು, ಚರಂಡಿಗಳಲ್ಲಿ,ಪಾದಾಚಾರಿ ಮಾರ್ಗಗಳಲ್ಲಿ ಮಳೆನೀರು ಕೊಯ್ಲು ಪದ್ದತಿ ಅಳವಡಿಸಿಕೊಳ್ಳಲಾಗಿರುತ್ತದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳಲ್ಲಿ ಮಳೆನೀರಿನ ಸಂಗ್ರಹಣೆ ಹಾಗೂ ಮರುಬಳಕೆಗಾಗಿ ಮತ್ತು ಅಂತರ್ಜಲ ವೃದ್ಧಿಸಲು ಬೆಂಗಳೂರು ಜಲಮಂಡಳಿ ವಿನಿಮಯ ಕಾಯ್ದೆಗೆ ತಿದ್ದುಪಡಿ ತರಲಾಗಿರುವುದನ್ನು ಸಿಎಂ ಬೊಮ್ಮಾಯಿ ಅವರು ಸದನಕ್ಕೆ ವಿವರಿಸಿದರು.///

ಪ್ರತಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ ವಿಭಾಗ: ಸಚಿವ ಅರಗ ಜ್ಞಾನೇಂದ್ರ

 

ಬೆಳಗಾವಿ ಸುವರ್ಣಸೌಧ,ಡಿ.16: ಸೈಬರ್ ಅಪರಾಧಗಳನ್ನು ರಾಜ್ಯದಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸೈಬರ್‍ಕ್ರೈಂ ವಿಭಾಗಗಳನ್ನು ತೆರೆಯಲಾಗಿದೆ. ತಂತ್ರಜ್ಞಾನದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಸೈಬರ್ ಕ್ರೈಂನಲ್ಲಿ ಅಧ್ಯಯನ ಮಾಡಿದವರನ್ನು ಹೊರಗುತ್ತಿಗೆ ಅಡಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಗೃಹಸಚಿವ ಅರಗಜ್ಞಾನೇಂದ್ರ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯ ಪಿ.ಎಂ.ಮುನಿರಾಜುಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲ ಸೈಬರ್ ಕ್ರೈಂಠಾಣೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. 2019ರಡಿ 10497 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು,107 ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.2020ರಡಿ 8818 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು 768 ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. 2021ರ ನವೆಂಬರ್ 30ರವರೆಗೆ 5480 ಪ್ರಕರಣಗಳು ದಾಖಲಾಗಿದ್ದು 501 ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಬೆಂಗಳೂರು ನಗರದಲ್ಲಿ ಒಟ್ಟು 09 ಸೈಬರ್ ಮತ್ತು ಆರ್ಥಿಕ ಅಪರಾಧ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

*ಗೋಲ್ಡನ್ ಅವರ್ ಗೆ ಕೇಂದ್ರ ಮೆಚ್ಚುಗೆ: ಸೈಬರ್ ಅಪರಾಧ ಕೃತ್ಯ ನಡೆದ ಎರಡು ಗಂಟೆಯೊಳಗೆ 112 ಗೆ ಅಥವಾ ಹತ್ತಿರದ ಠಾಣೆಗೆ ಕಾಲ್ ಮಾಡಿದ್ದಲ್ಲಿ ಬ್ಯಾಂಕ್‍ಗಳಲ್ಲಿನ ಅಕೌಂಟ್ ಕ್ಲೋಸ್ ಮಾಡಿಸಲಾಗುತ್ತಿದೆ; ಈ ರೀತಿ ಬೆಂಗಳೂರು ನಗರವೊಂದರಲ್ಲಿಯೇ 70 ಕೋಟಿ ರೂ.ಸೀಜ್ ಮಾಡಲಾಗಿದೆ. ಕೇಂದ್ರ ಕೂಡ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದರು.

ಸೈಬರ್‍ಕ್ರೈಂ ಎಂಬುದು ಬುದ್ದಿವಂತರ ಕರಾಮತ್ತು ಸಣ್ಣಕ್ಷಣದಲ್ಲಿಯೇ ಹಣದೋಚುವ ಪ್ರಯತ್ನಗಳು ನಡೆಯುತ್ತವೆ. ನಿತ್ಯ ನೂರಾರು ಪ್ರಕರಣಗಳು ವರದಿಯಾಗುತ್ತಿದ್ದು, ಈ ವಿಷಯದಲ್ಲಿ ಜನಜಾಗೃತಿ ಬಹಳ ಮುಖ್ಯ ಎಂದು ಅವರು ಹೇಳಿದರು.

*ಕಳೆದ 5 ವರ್ಷಗಳಲ್ಲಿ 39 ಹನಿಟ್ರ್ಯಾಪ್ ಪ್ರಕರಣಗಳು ದಾಖಲು: ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗಿರುವುದು ಸರಕಾರ ಗಮನಕ್ಕೆ ಬಂದಿದ್ದು, ಕಳೆದ 5 ವರ್ಷಗಳಲ್ಲಿ 39 ಪ್ರಕರಣಗಳು ದಾಖಲಾಗಿವೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಅವರು ಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯ ಗೋವಿಂದರಾಜಲು ಅವರ ಪ್ರಶ್ನೆಗೆ ಉತ್ತರಿಸಿದ ಅವರು ಹನಿಟ್ರ್ಯಾಪ್ ಜಾಲದಲ್ಲಿ ದಾಖಲಾದ 39 ಪ್ರಕರಣಗಳಲ್ಲಿ 28 ಪ್ರಕರಣಗಳು ವಿಚಾರಣೆಯಲ್ಲಿವೆ. ಇನ್ನೂ 09 ಪ್ರಕರಣಗಳು ತನಿಖಾ ಹಂತದಲ್ಲಿದ್ದು, 02 ಪ್ರಕರಣಗಳು ಖುಲಾಸೆಯಾಗಿವೆ ಎಂದು ವಿವರಿಸಿದ ಅವರು ಬಾಧಿತರ ಹೆಸರುಗಳನ್ನು ಗೌಪ್ಯವಾಗಿಡಲಾಗಿದೆ ಎಂದರು.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಪ್ರಸ್ತಾವನೆ ಸದ್ಯ ಸರಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವ ಅರಗಜ್ಞಾನೇಂದ್ರ ಅವರು ಸದಸ್ಯ ಬಿ.ಕೆಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದರು.///

ಅಸಂಘಟಿತ ಕಾರ್ಮಿಕರ 500 ಮಕ್ಕಳಿಗೆ ಐಎಎಸ್/ಐಪಿಎಸ್

ತರಬೇತಿ:ಸಚಿವ ಹೆಬ್ಬಾರ್

ಬೆಳಗಾವಿ ಸುವರ್ಣಸೌಧ,ಡಿ.16 : ಮೊದಲ ಹಂತದಲ್ಲಿ ಅಸಂಘಟಿತ ಕಾರ್ಮಿಕರ 500 ಮಕ್ಕಳಿಗೆ ಐಎಎಸ್ ಮತ್ತು ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಎಚ್.ಎಂ.ರಮೇಶಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 1950 ಕಾರ್ಮಿಕರ ಮಕ್ಕಳಿಗೆ ಪರೀಕ್ಷೆ ನಡೆಸಲಾಗಿತ್ತು.ಅವರಲ್ಲಿ 900ಜನರು ತೇರ್ಗಡೆಯಾಗಿದ್ದು,ಮೊದಲ ಹಂತದಲ್ಲಿ 500 ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ತರಬೇತಿಯ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪಠ್ಯಪುಸ್ತಕಗಳು ಮತ್ತು ತರಬೇತಿ ಕೇಂದ್ರದ ಶುಲ್ಕ ಹಾಗೂ ವಿದ್ಯಾರ್ಥಿಗೆ ಸ್ಟೈಫಂಡ್ ನೀಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ ಅವರು ಇ-ಶ್ರಮ್ ಪೋರ್ಟಲ್ ಅಡಿ 18ಲಕ್ಷ ಕಾರ್ಮಿಕರು ರಾಜ್ಯದಲ್ಲಿ ನೋಂದಣಿಯಾಗಿದ್ದಾರೆ ಎಂದರು.
ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಳ್ಳಲಾಗಿರುವ ವಿವಿಧ ಕಾರ್ಯಕ್ರಮಗಳನ್ನು ಸದನದಲ್ಲಿ ಬಿಡಿಸಿಟ್ಟರು.///

ಸ್ಪಾರಸ್ಯಕರ ಚರ್ಚೆಗೆ ನಾಂದಿಹಾಡಿದ ‘ಶಿಶುಪಾಲನಾ ರಜೆ’

ಬೆಳಗಾವಿ ಸುವರ್ಣಸೌಧ,ಡಿ.16  : ಸರಕಾರಿ ಮಹಿಳಾ ಅಧಿಕಾರಿ/ನೌಕರರಿಗೆ ನೀಡಲಾಗುತ್ತಿರುವ ಶಿಶುಪಾಲನಾ ರಜೆಯು ವಿಧಾನಪರಿಷತ್‍ನಲ್ಲಿ ಸ್ಪಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.
ಸದಸ್ಯ ಆಯನೂರು ಮಂಜುನಾಥ ಅವರು ಶಿಶುಪಾಲನಾ ರಜೆಗೆ ಸಂಬಂಧಿಸಿದಂತೆ ಚುಕ್ಕೆಗುರುತಿನ ಪ್ರಶ್ನೆ ಸದನಲ್ಲಿ ಪ್ರಸ್ತಾಪಿಸುತ್ತಲೇ ನಗುಮೊಗದೊಡನೆ ಎದ್ದುನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು “ಯಾರಿಗೂ ಹೊಳೆಯದ್ದು;ಮಂಜಣ್ಣನಿಗೆ ಹೊಳೆದಿದೆ ಅಂದ್ರೇ ಅದರಲ್ಲೇನು ವಿಶೇಷ ಇದೆ’’ ಎಂದು ಕಾಲೇಳೆದರು.
ಶಿಶುಪಾಲನಾ ರಜೆಯನ್ನು ಸರಕಾರಿ ಮಹಿಳಾ ಅಧಿಕಾರಿ/ ನೌಕರರಿಗೆ ನೀಡಲಾಗುತ್ತಿದೆ. ಒಂದೊಂದು ಕಚೇರಿಯಲ್ಲಿ ಅತಿಹೆಚ್ಚು ಮಹಿಳಾ ನೌಕರರಿದ್ದಾರೆ.ಎಲ್ಲರೂ ಒಂದೇ ಬಾರಿಗೆ ಹೆರಿಗೆ ರಜೆ ಕೋರಿದರೇ ಏನ್ಮಾಡ್ತೀರಿ..?ರಜೆ ನೀಡಲು ಮಾರ್ಗಸೂಚಿ ಇರಬೇಕಲ್ಲವೇ..?ಎಂದು ಆಯನೂರು ಮಂಜುನಾಥ ಪ್ರಶ್ನಿಸಿದರು.
ಸಿಎಂ ಬೊಮ್ಮಾಯಿ ಅವರು ಎಲ್ಲರೂ ಒಂದೆ ಬಾರಿಗೆ ಹೆರಿಗೆ ಹೋಗಲ್ಲ ಬಿಡ್ರಿ;ಅದು ದೇವರ ಮೇಲೆ ಭಾರವಾಗಿರುತ್ತದೆ ಅಂದ್ರು;ಅದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಆಯನೂರು ಇದು ದೇವರ ಮತ್ತು ಮನುಷ್ಯರ ಪ್ರಶ್ನೆಯಲ್ಲ;ಸರಕಾರದ ಪ್ರಶ್ನೆಯಾಗಿದೆ ಎಂದು ಸಿಎಂ ಬೊಮ್ಮಾಯಿ ಅವರನ್ನು ಕಿಚಾಯಿಸಿದರು.///

ಎನ್.ಪಿ.ಎಸ್.ರದ್ದತಿ ವಿಚಾರ ಸರ್ಕಾರದ ಮುಂದೆ ಇಲ್ಲ –
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ ಸುವರ್ಣ ಸೌಧ  ಡಿ.16: ರಾಜ್ಯ ಸರ್ಕಾರಿ ನೌಕರರಿಗೆ ಪ್ರಸ್ತುತ ಜಾರಿಯಲ್ಲಿರುವ ಎನ್.ಪಿ.ಎಸ್.( ರಾಷ್ಟ್ರೀಯ ಪಿಂಚಣಿ ಯೋಜನೆ)ಅನ್ನು ರದ್ದು ಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಇಂದು ಸದಸ್ಯ ಹಣಮಂತ ನಿರಾಣಿ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿವರ ಒದಗಿಸಿದ್ದಾರೆ.
ಎನ್.ಪಿ.ಎಸ್ ವ್ಯವಸ್ಥೆಯ ಸಾಧಕ ಬಾಧಕಗಳ ಪರಿಶೀಲನೆಗೆ 2018 ರ ಡಿಸೆಂಬರ್ 11 ರಂದು ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಸಮಿತಿ ಇದುವರೆಗೆ 3 ಸಭೆಗಳನ್ನು ನೆಡೆಸಿದೆ. ಸಮಿತಿಯು ತನ್ನ ವರದಿ ನೀಡಲು ಯಾವುದೇ ಕಾಲಮಿತಿ ನಿಗದಿ ಪಡಿಸಿಲ್ಲ ಎಂದು ವಿವರಿಸಿದ್ದಾರೆ.
ಇದೇ ವಿಷಯದ ಕುರಿತು ಶಿಕ್ಷಕರ ಕ್ಷೇತ್ರದ ಸದಸ್ಯ ಎಸ್.ಎಲ್.ಭೋಜೆಗೌಡ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ,ಕೇಂದ್ರ ಸರ್ಕಾರದಲ್ಲಿ ಹಳೆಯ ಪಿಂಚಣಿ ಯೋಜನೆ ಅನ್ವಯ ಅರ್ಜಿ ಸಲ್ಲಿಸಿ, ಎನ್.ಪಿ.ಎಸ್. ಜಾರಿಗೆ ಬಂದ ನಂತರ ಸೇವಗೆ ಸೇರಿದ ನೌಕರರಿಗೆ ನೇಮಕಾತಿ ಅಧಿಸೂಚನೆ ದಿನಾಂಕದ ಅನುಗುಣವಾಗಿ ಹಳೆ ಪಿಂಚಣೆ ಯೋಜನೆ ವ್ಯಾಪ್ತಿಗೆ ಒಳಪಡಿಸಲು ದೆಹಲಿ ಉಚ್ಛ ನ್ಯಾಯಾಲಯ ತೀರ್ಪುಗಳು ಹಾಗೂ ಸರ್ವೋಚ್ಚ ನ್ಯಾಯಾಲಯ ನೀಡಿರುವ ಮರುಪರಿಶೀಲನೆ ಆದೇಶಗಳು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ 2006 ಏಪ್ರಿಲ್ 01 ಕ್ಕಿಂತ ಮುಂಚಿತವಾಗಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದರೂ ಸಹ ನೌಕರರು ನಂತರದ ದಿನಾಂಕದಲ್ಲಿ ಸೇವೆಗೆ ಸೇರಿದ್ದರೆ, ಎನ್.ಪಿ.ಎಸ್ ನಿಯಮಾವಳಿಗೆ ಒಳಪಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.////

ಬೆಳಗಾವಿ ಜಿ.ಟಿ.ಟಿ.ಸಿ.: ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಬೆಳಗಾವಿ ಸುವರ್ಣಸೌಧ,ಡಿ.16  :ಬೆಳಗಾವಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಒಂದು ವರ್ಷದ ಅವಧಿಗೆ ಬಿ.ಇ/ಎಂ.ಟೆಕ್‍ನ ಮೆಕ್ಯಾನಿಕಲ್/ ರೊಬೂಟಿಕ್ಸ್/ ರೊಬೂಟಿಕ್ಸ್ ಆಂಡ್ ಅಟೋಮೆಷನ್/ ಪ್ರೋಸೆಸ್‍ಇನ್‍ಸ್ಟ್ರುಮೆಂಟೇಷನ್ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹಾಗೂ ಕನಿಷ್ಠ ಎರಡು ವರ್ಷಗಳ ಅನುಭವವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೆಳಗಾವಿ ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಸ್ವವಿವರ ಮತ್ತು ವಿದ್ಯಾರ್ಹತೆಯ ಪ್ರಮಾಣ ಪತ್ರದೊಂದಿಗೆ 2021ರ ಡಿಸೆಂಬರ್ 13 ರೊಳಗಾಗಿ ಬೆಳಗಾವಿ ಸರ್ಕಾರಿ ಉಪಕರಣಾಗಾರ ಮತ್ತುತರಬೇತಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 0831-2950611, ಮೊಬೈಲ್ ಸಂಖ್ಯೆ 9141630309 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.///