Belagavi News In Kannada | News Belgaum

ಅಪರಾಧ ನಿಯಂತ್ರಿಸಲು ಸಾರ್ವಜನಿಕರೂ ಸಹಕರಿಸಿ ಎಂದ ಸಿಪಿಐ ತಹಶೀಲ್ದಾರ್

ಹುಕ್ಕೇರಿ : ಸಮಾಜದಲ್ಲಿ ಸಂಭವಿಸುತ್ತಿರುವ ಅಪರಾಧ ಪ್ರಕರಣ ತಡೆಗಟ್ಟುವಲ್ಲಿ ಪೊಲೀಸರ ಜತೆ ನಾಗರಿಕರ ಸಹಕಾರವೂ ಮುಖ್ಯ ಎಂದು ಸಿಪಿಐ ಮಹ್ಮದ್‍ರಫೀಕ್ ತಹಶೀಲ್ದಾರ್ ಹೇಳಿದರು.

ಪಟ್ಟಣದ  ಶಿವಬಸವ ಸ್ವಾಮೀಜಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಹಕ್ಕಿನ ಬಗ್ಗೆ ಹೆಚ್ಚು ಮಾತಾಡುತ್ತಾರೆ. ಆದರೆ, ಸಂವಿಧಾನದಲ್ಲಿ ಹಕ್ಕಿನ ಜತೆ ಕರ್ತವ್ಯ ಕೂಡಾ ತಿಳಿಸಲಾಗಿದೆ. ಅದರ ಬಗ್ಗೆ ಯಾರು ಮಾತಾಡದೆ ಇರುವುದಕ್ಕೆ ಅಪರಾಧ ಸಂಖ್ಯೆ ಹೆಚ್ಚುತ್ತಲಿದೆ ಎಂದರು.

ಅಪರಾಧ ಸಂಭವಿಸದಂತೆ ನೋಡಿಕೊಳ್ಳುವುದು ಅಥವಾ ಸಂಭವಿಸಿದಾಗ ಅಪರಾಧ ಮಾಡಿದವರ ವಿರುದ್ಧ ಕ್ರಮ ಜರುಗಿಸುವಾಗ ನಾಗರಿಕರ ಸಹಕಾರ ನೀಡುವುದು ಅವಶ್ಯ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಮಾಜದ ಶಾಂತಿ ಕದಡುವ, ವೈಷಮ್ಯ ಹೆಚ್ಚಿಸುವ, ದೇಶಕ್ಕೆ ಗಂಡಾಂತರ ತರುವ ಸುದ್ದಿಗಳನ್ನು ಪಸರಿಸದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅದನ್ನು ಬೇರೆಯವರಲ್ಲಿ ಹಂಚಿಕೊಂಡಲ್ಲಿ, ಅವುಗಳ ಪ್ರಕರಣ ದಾಖಲಾದರೆ ಅದರಡಿ ಸಿಲುಕಿ ಎದುರಿಸಬಹುದಾದ ಅಪಾಯಗಳ ಕುರಿತು ಅವರು ವಿವರಿಸಿದರು.

ಪೊಕ್ಸೋ ಕಾಯ್ದೆ, ಮೋಟರ್ ವಾಹನ ಕಾಯ್ದೆ, ಸಂಚಾರಿ ನಿಯಮ ಉಲ್ಲಂಘಣೆ, ಆಸ್ತಿ ತೆರಿಗೆ ಉಲ್ಲಂಘಣೆ ಮತ್ತು ಹೊಡೆದಾಟ, ಬಾಲ್ಯವಿವಾಹ ಕಾಯ್ದೆ ಸೇರಿದಂತೆ ಇತ್ತೀಚಿಗೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಕುರಿತು ಘಟನಾವಳಿ ಸಹಿತ ಮಾರ್ಮಿಕವಾಗಿ ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ಸರ್ವಮಂಗಲ ಕಮತಗಿ ಮಾತನಾಡಿ, ಅಪರಾಧಕ್ಕೆ ಒಳಗಾಗಿ ಪರಿತಪಿಸುವುದಕ್ಕಿಂತ ಅಪರಾಧ ಆಗದ ಹಾಗೆ ನೋಡಿಕೊಳ್ಳುವುದು ಮತ್ತು ಅದರ ಬಗ್ಗೆ ಅರಿವು ಮೂಡಿಸುವುದು ಅತೀ ಅವಶ್ಯ ಎಂದರು.

ಎಎಸ್‍ಐ ಕೆ.ಎನ್.ಪಿಂಜಾರ್, ಪೇದೆಗಳಾದ ಸಾವಿತ್ರಿ ಅಂತರಗಟ್ಟಿ, ಮಂಜುನಾಥ ಕಬ್ಬೂರ್, ಪ್ರೊ. ನಿರಂಜನ್ ಪಾಟೀಲ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ.ಸೋಮಶೇಖರಪ್ಪ ಸ್ವಾಗತಿಸಿದರು. ಪ್ರೊ.ಮಲ್ಲಿಕಾರ್ಜುನ ಹೋಳಿಮಠ ನಿರೂಪಿಸಿದರು. ಪ್ರೊ.ಶಶಿಕಾಂತ ಮರೆಪ್ಪಗೋಳ ವಂದಿಸಿದರು.//////