Belagavi News In Kannada | News Belgaum

ತಡರಾತ್ರಿ ಕಲ್ಲು ತೂರಾಟ ನಡೆಸಿದ್ದ ಎಂಇಎಸ್, ಶಿವಸೇನೆ ಪುಂಡರು ಮತ್ತೆ ಇಂದು ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‍ರ ಪುತ್ಥಳಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ತಡರಾತ್ರಿ ಕಲ್ಲು ತೂರಾಟ ನಡೆಸಿದ್ದ ಎಂಇಎಸ್, ಶಿವಸೇನೆ ಪುಂಡರು ಮತ್ತೆ ಇಂದು ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

ಹೌದು ಶನಿವಾರ ಬೆಳಿಗ್ಗೆ ಬೆಳಗಾವಿಯ ಶಿವಾಜಿ ಉದ್ಯಾನದ ಮುಂದೆ ಎಂಇಎಸ್, ಶಿವಸೇನೆ, ಹಿಂದೂಪರ ಸಂಘಟನೆಗಳು ಹೈಡ್ರಾಮಾ ಸೃಷ್ಟಿಸಿದ್ದವು. ಬೆಳಗಾವಿಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ಅವರು 144 ಸೆಕ್ಷನ್ ಜಾರಿಗೊಳಿಸಿದ್ದರೂ ಕೂಡ ಕ್ಯಾರೆ ಎನ್ನದೇ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಪೊಲೀಸರು ವಿರೋಧ ವ್ಯಕ್ತಪಡಿಸಿದರೂ ಕೂಡ ಪ್ರತಿಭಟನಾಕಾರರು ಶಿವಾಜಿ ಉದ್ಯಾನದ ಒಳಗೆ ನುಗ್ಗಿ ಶಿವಾಜಿ ಮಹಾರಾಜ್‍ರ ಪುತ್ಥಳಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.

ಪೊಲೀಸರ ಮನವಲಿಕೆಗೆ ಬಗ್ಗದ ಹಿನ್ನೆಲೆ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಶಿವಸೇನೆ ಮುಖಂಡ ಪ್ರಕಾಶ ಶಿರೋಳ್ಕರ್ ಸೇರಿದಂತೆ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಅದೇ ರೀತಿ ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ ಜಾಧವ್ ಕೂಡ ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಿರಣ ಜಾಧವ್ ಮರಾಠಾ ಸಮಾಜದ ಪ್ರಮುಖರನ್ನು ಪೊಲೀಸರು ಬಂಧಿಸಿ ಎಪಿಎಂಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಲ್ಲಿ ಶಿವಾಜಿ ಮಜಾರಾಜ್‍ರ ಪುತ್ಥಳಿಗೆ ಅವಮಾನ ಮಾಡಿರುವುದು ಅತ್ಯಂತ ಖಂಡನೀಯ. ಇನ್ಮುಂದೆ ಮರಾಠಾ ಸಮಾಜ ಸುಮ್ಮನಾಗುವುದಿಲ್ಲ. ನಿನ್ನೆ ಯಾರೂ ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿಲ್ಲ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿ ವಿರೂಪಗೊಳಿಸಿದ್ದು ನನಗೆ ಗೊತ್ತೇ ಇಲ್ಲ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತರು.

ಒಟ್ಟಿನಲ್ಲಿ ಬೆಳಗಾವಿಯಲ್ಲಿ ಶಾಂತಿ ಸುವ್ಯಸ್ಥೆಗೆ ಧಕ್ಕೆ ತರುವ ಕೆಲಸವನ್ನು ಎಂಇಎಸ್, ಶಿವಸೇನೆಯ ಪುಂಡರು ಮಾಡುತ್ತಿದ್ದು. ಪೊಲೀಸರು ಇದಕ್ಕೆ ಬ್ರೇಕ್ ಹಾಕಿದ್ದಾರೆ. ವಿನಾಕಾರಣ ಕನ್ನಡಿಗರು-ಮರಾಠಿ ಭಾಷಿಕರ ಮಧ್ಯ ಕಂದಕ ಸೃಷ್ಟಿಸುತ್ತಿರುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಿ, ನಗರದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಬೇಕಿದೆ