Belagavi News In Kannada | News Belgaum

ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನ್ನ ಹೃದಯಪೂರ್ವಕವಾಗಿ ಸ್ಮರಿಸಿಕೊಳ್ಳುತ್ತ…….

ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನ್ನ ಹೃದಯಪೂರ್ವಕವಾಗಿ ಸ್ಮರಿಸಿಕೊಳ್ಳುತ್ತ…….

ಓ ದಾದಾ ಟಿವಿ ಲಾವಾ ಕಿ ಲವಕರ್,ಕಾಯ್ ಭಾನಗಡ್ ಚಲ್ಲೆ ಬಗಾ…ಯಪ್ಪಾ ಏನ್ರೀ ಮಾಮಾ ಇದು ಯಾಕ್ ಬೇಕಿದೆಲ್ಲ ಹೀಗೆ ಅಕ್ಕಪಕ್ಕದ ಕನ್ನಡ ಮತ್ತು ಮರಾಠಿ ಭಾಷಿಗ ಮಧ್ಯ ವಯಸ್ಕ ಮತ್ತು ಹಿರಿಯ ಜೀವಗಳು ಮಾತನಾಡಿಕೊಳ್ಳುತ್ತಿದ್ದರೆ…

ತನ್ನ ಜೀವದ ಗೆಳೆಯನಿಗೆ ಪೋನ್ ಮಾಡುವ ಮರಾಠಿ ಹುಡುಗನೊಬ್ಬ ಕನ್ನಡದಲ್ಲಿ ಮಾತನಾಡುತ್ತ ಏ ರಾಮ್ಯಾ ಎಲ್ಲಿ ಅದಿ ಮಗನಾ ಹೊರಗ ಬರಬ್ಯಾಡ ನಮ್ ಹುಡುಗೋರ ಕಲ್ಲ ಒಗ್ಯಾತಾರ ಅಂತ, ಅನ್ನುತ್ತಿದ್ದಂತೆಯೇ ಅಷ್ಟೇ ಕಾಳಜಿಯಿಂದ ಏ ರವಿ ತೂ ಪನ್ ಹುಷಾರ್ ಹ್ಮ ಬೈರ್ ಯೂ ನಕೋ ಅನ್ನುವ ಕನ್ನಡದ ಹುಡುಗ….. ಇನ್ನೊಂದು ಕಡೆ ಮರಾಠಿ ಭಾಷಿಗರು ಇಟ್ಟುಕೊಂಡ ಅಂಗಡಿಗೆ ಹೋಗುವ ಕನ್ನಡದ ಹೆಣ್ಣುಮಗಳೊಬ್ಬಳು ನಿರಾಯಾಸವಾಗಿ ತಿಂಗಳ ರೆಷನ್ ಖರೀದಿಸಿ ಮನೆಗೆ ಮರಳುವ ವೇಳೆ ಏ ರಾಹುಲ್ಯಾ ಭೈರ್ ದಂಗಾ ಚಲ್ಲೈ ತಾಯಿ ಲಾ ಘರಲಾ ಸೋಡುಣ್ ಏ ಅನ್ನುವ ಮರಾಠಿಗ ಮತ್ತು ಬ್ಯಾಡ್ ಬಿಡ್ರಿ ಅಣ್ಣಾ ನಾ ನೋಡ್ಕೊಂಡ್ ಹೋಗ್ತೇನಿ ಅನ್ನುವ ಹೆಣ್ಣುಮಗಳು…ಇದು ನಮ್ಮ ನಡುವೆ ನಿತ್ಯವೂ ಗಡಿಭಾಗಗಳಾದ ಅಥಣಿ,ಕಾಗವಾಡ,ನಿಪ್ಪಾಣಿ, ಚಿಕ್ಕೋಡಿ, ಖಾನಾಪುರ, ಬೆಳಗಾವಿ ಅಂತಹ ಊರುಗಳಲ್ಲಿ ಕಂಡುಬರುವ ದೃಶ್ಯ…
ಆದರೆ ಇಷ್ಟುದಿನಗಳ ಕಾಲ
ಬಾಬ್ರೀ ಮಸೀದಿ ರಾಮ ಮಂದಿರ ವಿವಾದ ಬಗೆಹರಿಯಲು ದಶಕಗಳು ಬೇಕಾದವು,ಈಗ ಮಂಗಳೂರು ಮತ್ತು ಕೆಲವು ಕಡೆ ಹಿಂದೂ ಮುಸ್ಲಿಂ ಜಗಳಗಳು ಅಲ್ಲಲ್ಲಿ ನಡೆದು ನಾಡಿನ ಶಾಂತಿಯನ್ನು ಸತತವಾಗಿ ಕದಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.ನಾಡಿನಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನದ ಅಂಗವಾಗಿ

ಇನ್ನೊಂದು ಕಡೆ ಕನ್ನಡ ಮರಾಠಿ ಅಂತ ಭಾಷಾ ಭಾಂಧವ್ಯ ಕದಡುವ ಅವಿರತ ಪ್ರಯತ್ನಗಳ ನಡುವೆ ಗಡಿ ಖ್ಯಾತೆಯನ್ನೇ ಅಸ್ತ್ರವಾಗಿಸಿಕೊಂಡು ಕನ್ನಡಿಗರ ಸ್ವಾಭಿಮಾನ ಕದಡುವ ನಿಟ್ಟಿನಲ್ಲಿ ಶಿವಸೇನೆ ಮತ್ತು ಎಮ್ ಇ ಎಸ್ ಹೆಸರಲ್ಲಿ ಮತ್ತಷ್ಟು ಹಿಂಸಾಚಾರ,ಮತ್ತು ನಾಡಧ್ವಜ ಸುಟ್ಟರೆ ಅದಕ್ಕೆ ಪ್ರತಿಯಾಗಿ ಕನ್ನಡ ಸಂಘಟನೆಗಳಿಂದ ಭಗವಾ ಧ್ವಜ ಸುಡುವಂತಹ ಎರಡೂ ರೀತಿಯ ವೀಕೃತಿಗಳು ಮುಂದುವರೆದಿವೆ.ಅವರು ಹಾಗೆ ಮಾಡಿದ್ರೆ ನಾವು ಸಹಿಸಿಕೊಳ್ಳಬೇಕಾ,ಸುಮ್ಮನೆ ಉಳಿದು ಬಿಡಬೇಕಾ ಅನ್ನುವ ಪ್ರಶ್ನೆ ಕೇಳುತ್ತ ಕೆರಳಿ ಕೆಂಡಾ ಮಂಡಲವಾಗಿ ರಸ್ತೆಗಳಿಗೆ ಇಳಿದು

ಅಲ್ಲಿ ಕೊಲ್ಹಾಪುರ, ಮಹಾರಾಷ್ಟ್ರದಲ್ಲಿ ಕನ್ನಡಿಗರ ಆಸ್ತಿಪಾಸ್ತಿ ಹಾನಿ ಮಾಡಿ ಕರ್ನಾಟಕ ನೊಂದಣಿಯ ವಾಹನಗಳಿಗೆ ಕಲ್ಲು ಹೊಡೆದರೆ ಇತ್ತ ಛತ್ರಪತಿ ಶಿವಾಜಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುಥ್ಥಳಿಗೆ ಅಪಮಾನ ಮಾಡಿದ್ದು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಗಳು ಭಾಷೆಯ ಹಂಗಿನ ಬೆಂಕಿ ಹೊತ್ತಿಕೊಂಡು ಧಗಧಗಿಸುತ್ತಿವೆ.ಇವೆಲ್ಲವುಗಳ ನಡುವೆ ಪುಂಡತನ ಮೆರೆಯುತ್ತಿರುವ ಎಮ್ ಇ ಎಸ್‌ ಮತ್ತು ಶಿವಸೇನೆ ಕಾರ್ಯಕರ್ತರ ಬಂಧನ,ಜೈಲು ಆದರೆ ಅಸಲಿಗೆ ನಡೆಯುತ್ತಿರುವ ಘಟನೆಗಳ ಬಗ್ಗೆ ಜಾತಿಯಿಂದ ಒಬ್ಬ ಮರಾಠಿಗನಾದ ಮತ್ತು ಮಾತೃಭಾಷೆಯಿಂದ ಹಾಗೂ ನನ್ನ ನೆಲೆಯಿಂದ ಕನ್ನಡಿಗನಾದ ನನಗೆ ತೀವ್ರವಾದ ನೋವಿದೆ.ಛತ್ರಪತಿ ಶಿವಾಜಿಯ ಪುಥ್ಥಳಿಗೆ ಹಾಲಿನ ಅಭಿಷೇಕ, ಚೆನ್ನಮ್ಮನ ಮೂರ್ತಿಗೆ ಹಾರ,ರಾಯಣ್ಣ ಪ್ರತಿಮೆ ಮರುಸ್ಥಾಪನೆ ಆಗುವ ನಡುವೆಯೆ ತಮ್ಮ ವೋಟ್ ಬ್ಯಾಂಕ್ ಕಾಯ್ದುಕೊಳ್ಳಲು ಮುಂದಾದ ಬಿಳಿಯಾನೆಗಳಾದ ರಾಜಕಾರಣಿಗಳು ಒಂದು ವರ್ಗದ ಜನರ ನೋವಿಗೆ ಸಂತಾಪ ಸೂಚಿಸುವದು ಇನ್ನೊಂದು ಕಡೆ ಪರೋಕ್ಷವಾಗಿ ಉರಿವ ಬೆಂಕಿಗೆ ತುಪ್ಪ ಸುರಿಯುವ ವರ್ತನೆಗಳು ಎಷ್ಟು ಸರಿ ಅನ್ನುವದು ಸದ್ಯದ ಪ್ರಶ್ನೆಯಾಗಿದೆ.ಛತ್ರಪತಿ ಶಿವಾಜಿ ಮಹಾರಾಜರು ಮೂಲತಃ ಕನ್ನಡ ನೆಲದವರು ಅನ್ನುವ ಅರಿವಿಲ್ಲದ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಇತಿಹಾಸದ ಸರಿಯಾದ ಅರಿವೂ ಇಲ್ಲದ ಕೆಲವು ಹಾರಾಟಗಾರರು(ಪ್ರಚಾರ ಪ್ರಿಯರು) ಮತ್ತಷ್ಟು ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗುತ್ತಿರುವದು ಅತಿದೊಡ್ಡ ವಿಪರ್ಯಾಸವಾಗಿದೆ.ನಾವೆಲ್ಲ ಭಾರತೀಯರು, ಬಹು ಭಾಷೆ,ಬಹು ಸಂಸ್ಕೃತಿಗಳ ಹೊಂದಿದ ಭಾವೈಕ್ಯ ರಾಷ್ಟ್ರದ ಸತ್ಪ್ರಜೆಗಳು ಅನ್ನುವ ಅರಿವಿಲ್ಲದೆ ಅಗತ್ಯವೇ ಇಲ್ಲದ ಕಿಚ್ಚು ಹತ್ತಿಸುವ ಕೆಲಸ ಅದು ಯಾಕೆ ನಡೆಯುತ್ತಿದೆಯೋ ಇಲ್ಲಿಯವರೆಗೂ ಬಗೆಹರಿಯದ ದೊಡ್ಡ ಗೊಂದಲವಾಗಿಯೆ ಉಳಿದಿದೆ.ಮತ್ತೊಮ್ಮೆ ಇಂತಹ ಕಹಿ ಘಟನೆಗಳು ಮರುಕಳಿಸದಂತೆ ಕಾನೂನು ಕಠಿಣವಾಗಬೇಕಾದ ಅಗತ್ಯದ ಜೊತೆಗೆ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಕಾಣದ ಕೈಗಳ ಮೇಲೂ ಕ್ರಮ ಜರುಗಿಸಬೇಕಾಗಿದೆ.ಗಡಿ ವಿವಾದ ಬಗೆಹರಿಯಬೇಕಾದರೆ ಕೆಲವು ವರದಿಗಳ ಅನುಷ್ಠಾನಕ್ಕೆ ಉಭಯ ರಾಜ್ಯಗಳು ಸಮ್ಮತಿಸುವ ಅಗತ್ಯ ಒಂದು ಕಡೆಯಾದರೆ ಇನ್ನೊಂದು ಕಡೆ ರಾಜಕಾರಣಿಗಳು ಮತಬ್ಯಾಂಕ್ ಗಾಗಿ ತಮ್ಮ ಎಲುಬಿಲ್ಲದ ನಾಲಿಗೆಯ ಲಗಾಮಿಲ್ಲದ ಭಾಷಣಗಳಲ್ಲಿ ಬೆಂಕಿ ಹಚ್ಚುವ ಕೆಲಸ ನಿಲ್ಲಿಸಿ ಮತಗಳಿಸಲು ಜನರನ್ನು ಮರುಳು ಮಾಡುವದನ್ನು ನಿಲ್ಲಿಸಿ ಅಭಿವೃದ್ದಿ ಕೆಲಸಗಳಿಗೆ ಒತ್ತು ಕೊಡುವ ಮೂಲಕ,ಅಧಿಕಾರದ ಆಸೆ ಬಿಟ್ಟು ಇದ್ದಷ್ಟು ದಿನ ತಮ್ಮನ್ನು ನಂಬಿದ ಹಿತೈಷಿಗಳು ಮತ್ತು ಕಾರ್ಯಕರ್ತರಲ್ಲಿ ಏಕತೆಯ ಪ್ರಜ್ಞೆ ಮೂಡಿಸುವ ಕೆಲಸಕ್ಕೆ ಮುಂದಾಗಬೇಕಿದೆ.ಒಂದು ಕಡೆ ಝಾಪಾಗಳ ದುಂದಾವರ್ತನೆ ಇನ್ನೊಂದು ಕಡೆ ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನದ ಹೋರಾಟಗಳ ದುರುಪಯೋಗವನ್ನ ಪಡೆದು ರಾಜಕಾರಣ ಮಾಡಯವ ಬಿಳಿಯಾನೆಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಮುನ್ನ ನಮ್ಮಿಂದ ಪರಸ್ಪರ ಭಾಷೆಗಳನ್ನು ಗೌರವಿಸುವ ಕೆಲಸವಾಗುವದರ ಜೊತೆಗೆ ಮನುಷ್ಯ ಸಂಕುಲವನ್ನ ಜಾತಿ-ಧರ್ಮಗಳನ್ನು ಮೀರಿದ ಪ್ರೀತಿ,ಸ್ನೇಹದ ಸಂಕೋಲೆಯಲ್ಲಿ ಬೆಸೆಯುವ ಮೂಲಕ ಅಮಾಯಕ ಜನರು ವಿನಾಕಾರಣ ಬಲಿಯಾಗುವದನ್ನು ನಿಲ್ಲಿಸುವ ಕೆಲಸಕ್ಕೆ ನಾಡಿನ ಪ್ರಜ್ಞಾವಂತರಾದ ನಾವು ನೀವೆಲ್ಲ ನಿಸ್ವಾರ್ಥದಿಂದ ಕೈ ಜೋಡಿಸಬೇಕಿದೆ.ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ,ಸಾರ್ವಜನಿಕ ಆಸ್ತಿಗಳಿಗೆ
ಉದ್ದೇಶಪೂರ್ವಕವಾಗಿ ಕಲ್ಲು ಹೊಡೆದವರನ್ನ,ನಾಡಿನ ಕ್ರಾಂತಿ ಪುರುಷರು,ಸ್ವಾತಂತ್ರ್ಯ ಹೋರಾಟಗಾರರು,ಸಂತರು ಮತ್ತು ಶರಣರ
ಮೂರ್ತಿಗಳನ್ನು ಭಗ್ನಗೊಳಿಸುವ ಮೂಲಕ ನಾಡಿನ ಶಾಂತಿ ಕದಡಿದವರ ಮೇಲೆ ನಿರ್ದಯವಾಗಿ ದೇಶದ್ರೋಹದ ಕೇಸು ದಾಖಲಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಪೋಲಿಸರು ನಾಡಿನ ಉದ್ದಕ್ಕೂ ತಾವು ಶಾಂತಿ ಸುವ್ಯವಸ್ಥೆ ಕಾಪಾಡಲು ಸಭಲರಿದ್ದೇವೆ ಎನ್ನುವದನ್ನು ಸಾಕ್ಷೀಕರಿಸುವ ಅಗತ್ಯ ಒಂದು ಕಡೆ ಮತ್ತು ಕೋಮು ಗಲಭೆಗಳನ್ನು ಪ್ರಚೋದಿಸುವ,ಭಾಷಾ ವೈಷಮ್ಯ ಹುಟ್ಟು ಹಾಕುವ ಸಂಘಟನೆಗಳನ್ನ ನಿಷೇಧಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಪುಂಡರನ್ನು ಗಡಿಪಾರು ಮಾಡಲು ಕರ್ನಾಟಕ ಸರ್ಕಾರ ದಿಟ್ಟ ಕ್ರಮವನ್ನ ಕೈಗೊಳ್ಳುವ ತುರ್ತು ಅಗತ್ಯವಿದೆ.ಅಲ್ಲಿಯವರೆಗೂ ಸ್ವಲ್ಪ ತಾಳ್ಮೆಯಿಂದ ಶಾಂತಿಯ ಮಂತ್ರ ಪಠಿಸೋಣ ಅಲ್ಲವೇ??

-ದೀಪಕ ಶಿಂಧೇ