Belagavi News In Kannada | News Belgaum

ಭಾರತದಿಂದ ದೂರ ಹೋದರು ಭಾರತೀಯತೆ ಎಂದೂ ದೂರವಾಗಿಲ್ಲ : ರಘುನಂದನಜಿ

ಭಾರತದಿಂದ ದೂರ ಹೋದರು ಭಾರತೀಯತೆ ಎಂದೂ ದೂರವಾಗಿಲ್ಲ : ರಘುನಂದನಜಿ
ಭಾರತಿಯರು ಅನೇಕ ಕಾರಣಗಳಿಂದ ಭಾರತದಿಂದ ಜಗತ್ತಿನ ಇತರ ದೇಶಗಳಿಗೆ ವಲಸೆ ಹೋಗುತ್ತಾರೆ. ಅಲ್ಲೇ ಉದ್ಯೋಗದಲ್ಲಿ ನಿರತರಾಗಿ ವಾಸ ಮಾಡುತ್ತಾರೆ.

 

ಜೊತೆಗೆ ಆ ದೇಶದ ಪೌರತ್ವವನ್ನು ಕೂಡ ಪಡೆದುಕೊಳ್ಳುತ್ತಾರೆ. ಆದರೆ, ಭಾರತದ ಪ್ರತಿ ಸಂಕಷ್ಟದ ಸಂದರ್ಭದಲಿಯೂ ಭಾರತದೊಂದಿಗಿದ್ದಾರೆ. ಅವರಲ್ಲಿ ಭಾರತೀಯತೆ ಸದಾ ಜಾಗೃತವಾಗಿರುತ್ತದೆ ಎಂದು ಪ್ರಜ್ಞಾ ಪ್ರವಾಹ ವೈಚಾರಿಕೆ ವೇದಿಕೆ, ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕರಾದ ರಘುನಂದನಜಿ ಅಭಿಪ್ರಾಯ ಪಟ್ಟರು.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿ ಇವುಗಳ ಜೊತೆಯಲ್ಲಿ ಸ್ವರಾಜ್ಯ-75 ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ರಘುನಂದನಜಿ ಅವರು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಚಾರಿತ್ರಿಕ ಹೆಜ್ಜೆಗಳ ಕುರಿತು ಮಾತನಾಡಿದರು.

 

ಸ್ವಾತಂತ್ರ್ಯ ಸಂಗ್ರಾಮ ಚಳುವಳಿಯಲ್ಲಿ ಸಾಧು-ಸಂತರಾದಿಯಾಗಿ ಶ್ರೀಸಾಮಾನ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದರು ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಭೂಮಿಕೆಯನ್ನು ಒದಗಿಸಿಕೊಟ್ಟರು. ಅವರಿಂದ ಸ್ಪೂರ್ತಿಗೊಂಡ ದೇಶದ ತರುಣರಾದಿಯಾಗಿ ಎಲ್ಲರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಅಂದಿನ ಬ್ರಿಟಿಷರ ಭಾರತಕ್ಕಿಂತ ಇಂದಿನ ಭಾರತವು ವೈಜ್ಞಾನಿಕ, ಆರ್ಥಿಕ, ಶೈಕ್ಷಣಿಕ, ಔದ್ಯಮಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತ ಜಗತ್ತಿನೊಂದಿಗೆ ಸರಿಸಮಾನವಾಗಿ ಹೆಜ್ಜೆ ಹಾಕುತ್ತಿದೆ. ಭಾರತದ ಕಡೆಗೆ ಇಂದು ವಿಶ್ವವು ತಿರುಗಿ ನೋಡುತ್ತಿದೆ ಎಂದರು.

 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಭಾರತದ ಮೇಲೆ 1300 ವರ್ಷಗಳವರೆಗೆ ವಿದೇಶಿಗರು ದಾಳಿ ನಡೆಸಿದರು. ಆದರೆ, ಭಾರತಕ್ಕೆ ಏನೂ ಆಗಿಲ್ಲ: ಮುಂದೆಯೂ ಏನು ಆಗುವುದಿಲ್ಲ ಎಂದು ಭಾರತದ ಅಂತಸತ್ವದ ಕುರಿತು ಮಾತನಾಡಿದರು, ಎಲ್ಲಿಯವರೆಗೆ ಜಗತ್ತು ಇರುತ್ತದೆಯೋ ಅಲ್ಲಿಯವರೆಗೆ ಭಾರತ ಇರುತ್ತದೆ. ಯಾರಿಂದಲೂ ಭಾರತವನ್ನು ನಾಶಗೊಳಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯೋತ್ತರ ಭಾರತವು ಅನೇಕ ಬದಲಾವಣೆಗಳನ್ನು ಕಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿರುವ ಭಾರತ ಮುಂಬರುವ ದಿನಗಳಲ್ಲಿ ಸೂಪರ್ ಪವರ್ ಶಕ್ತಿಯನ್ನು ಪಡೆಯಲಿದೆ. ಪಂ. ದೀನದಯಾಳರಾದಿಯಾಗಿ ಅನೇಕ ಮಹಾಪುರುಷರು ಭಾರತವನ್ನು ಸ್ವಾತಂತ್ರ್ಯಗೊಳಿಸಿ, ಸಶಕ್ತಗೊಳಿಸಲು ಶ್ರಮಿಸಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರ ಅವರು ಅತ್ಯುತ್ತಮವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ. ಅವರೆಲ್ಲರ ತ್ಯಾಗದ ಫಲಶ್ರುತಿಯಾಗಿ ನಾವು ಇಂದು ಈ ಸುಂದರ ಭಾರತವನ್ನು ಕಾಣುತ್ತೇವೆ. ಇವರೆಲ್ಲರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು ಎಂದರು.

 

ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿಯವರು ಭಾರತದ ಗತವೈಭವವು ಮತ್ತೇ ಮರುಕಳಿಸುತ್ತಿದೆ. ಭಾರತ ಇಂದು ವಿಶ್ವಗುರುವಿನ ಸ್ಥಾನವನ್ನು ಅಲಂಕರಿಸುತ್ತಿದೆ ಎಂದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎಸ್. ಎಂ. ಹುರಕಡ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದಿಂದ ಆಯೋಜಿಸಲಾಗುವ ಕಾರ್ಯಕ್ರಮದ ಕಾರ್ಯಸೂಚಿಗಳ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕರಾದ ಡಾ. ಪ್ರಕಾಶ ಕಟ್ಟಿಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯರಾದ ಶ್ರೀ ಆದಿನಾಥ ಉಪಾಧ್ಯೆ ಅತಿಥಿಗಳನ್ನು ಸ್ವಾಗತಿಸಿದರು. ಕುಮಾರ ಕೃಷ್ಣಾ ಮುಳ್ಳೂರ ಹಾಗೂ ಸಂಗಡಿಗರು ದೇಶಭಕ್ತಿ ಗೀತೆ ಹಾಡಿದರು. ಕುಮಾರ ಸಂತೋಷ ಸೊಗಲದ “ವಂದೇ ಮಾತರಂ” ಹಾಡಿದರು. ಡಾ. ನಾರಾಯಣ ನಾಯ್ಕ ವಂದಿಸಿದರು. ಡಾ. ಹನಮಂತಪ್ಪ ಸಂಜೀವಣ್ಣನವರ್ ನಿರೂಪಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.