Belagavi News In Kannada | News Belgaum

ಮಾಜಿ ಸಚಿವ ಆರ್.ಎಲ್.ಜಾಲಪ್ಪ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚನೆ ರೈತರ ಸಾಲಮನ್ನಾ ಸಹಕಾರ ರಂಗದ ಸ್ವಾಯತ್ತತೆಗೆ ಜಾಲಪ್ಪ ಕೊಡುಗೆ ಅಮೂಲ್ಯ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ ಸುವರ್ಣಸೌಧ  ಡಿ.20; ಹಿಂದುಳಿದ ವರ್ಗಗಳ ನಾಯಕರಾಗಿ, ಬಡವರು, ರೈತರ ಕಲ್ಯಾಣಕ್ಕಾಗಿ ಕೊಳವೆ ಬಾವಿಗಳ ಸಾಲಮನ್ನಾ ಸೇರಿದಂತೆ ಸಹಕಾರ ರಂಗದ ಸ್ವಾಯತ್ತತೆಗಾಗಿ ಮಾಜಿ ಸಚಿವ ಆರ್.ಎಲ್.ಜಾಲಪ್ಪನವರು ನೀಡಿದ ಕೊಡುಗೆ ಅಮೂಲ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆ ಇಂದು ಬೆಳಿಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು.


ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಜಾಲಪ್ಪನವರ ವ್ಯಕ್ತಿತ್ವ ವಿಭಿನ್ನವಾಗಿತ್ತು, ನೇರ, ನಿಷ್ಠುರ ಹಾಗೂ ಗಟ್ಟಿತನದ ನಡೆ, ನುಡಿ ಅವರದಾಗಿತ್ತು. ಸಹಕಾರ ರಂಗವು ಸ್ವಾಯತ್ತವಾಗಲು ಆ ಕಾಯ್ದೆಗಳಿಗೆ ತಿದ್ದುಪಡಿ ತಂದು ಮಹತ್ವದ ಛಾಪು ಮೂಡಿಸಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ, ಸಂತರ ಸಹಕಾರ ಸಚಿವರಾಗಿ ರೈತರ ಪರವಾಗಿ ಸಹಕಾರ ಕಾಯ್ದೆಗಳನ್ನು ಜಾರಿಗೊಳಿಸಿದರು.

1983 ರಿಂದ 1986 ರವರೆಗೆ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಭೀಕರ ಬರಗಾಲದ ಸಂದರ್ಭದಲ್ಲಿ ಎಲ್ಲ ರೈತರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಯಿಸಿ ನೀರ್‍ಸಾಬ್ ಎಂದು ನಜೀರ್‍ಸಾಬ್ ಹೆಸರು ಗಳಿಸಿದರು. ಈ ಸಂಬಂಧ ಮಾಡಿದ್ದ ರೈತರ ಸಾಲಗಳನ್ನು ಆರ್.ಎಲ್.ಜಾಲಪ್ಪ ಮನ್ನಾ ಮಾಡಿದರು. ಕೋಲಾರ-ಚಿಕ್ಕಬಳ್ಳಾಪುರ ಭಾಗದಿಂದ ಅವರು ಬಂದಿದ್ದರಿಂದ ನೀರಿನ ಬವಣೆಯ ತೀವ್ರತೆ ಅವರಿಗೆ ಗೊತ್ತಿತ್ತು. ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರ ಎಲ್ಲ ಸಮಾಜದ ಸಂಘ, ಸಂಸ್ಥೆಗಳಿಗೆ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿತ್ತು.

 

ಆಗ ಜಾಲಪ್ಪನವರು ಸ್ವತಃ ಮುಂದೆ ಬಂದು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ, ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಮುಂದಾದರು. ಈಗ ಕಾಲೇಜು ಯಶಸ್ವಿಯಾಗಿ ನಡೆಯುತ್ತಿದೆ. ಗೃಹ ಸಚಿವರಾಗಿದ್ದಾಗ ಅವರ ಮೇಲೆ ಆರೋಪಗಳು ಕೇಳಿ ಬಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸ್ವಾಭಿಮಾನ ತೋರಿದರು. ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 1994 ರಲ್ಲಿ ಜನತಾದಳ ಸರ್ಕಾರ ಅಧಿಕಾರಕ್ಕೆ ತರಲು ಅಪಾರವಾಗಿ ಶ್ರಮಿಸಿದ್ದರು. ಈಗಿನ ವಿರೋಧಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ, ಡಾ.ಜಿ.ಪರಮೇಶ್ವರ್, ರಮೇಶಕುಮಾರ ಸೇರಿದಂತೆ ಅನೇಕರೊಡನೆ ನಿರಂತರ ಒಡನಾಟ ಹೊಂದಿದ್ದರು. ವೈಯಕ್ತಿಕವಾಗಿ ಬಹಳ ಗಟ್ಟಿ ಮನಸ್ಥಿತಿ, ಆತ್ಮಸ್ಥೈರ್ಯ ಹೊಂದಿದ್ದರ ಪರಿಣಾಮವಾಗಿ 95 ರ ಇಳಿ ವಯಸ್ಸಿನಲ್ಲಿಯೂ ಎರಡು ಬಾರಿ ಕೋವಿಡ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದರು.

 

ತಾವು ಆಡಿದ ಮಾತನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳುತ್ತಿದ್ದರು. ಬಡವರು, ವಿಕಲಚೇತನರ ವಿಕಾಸಕ್ಕಾಗಿ ಸಂಸ್ಥೆ ತೆರೆದು ತಮ್ಮ ಟ್ರಸ್ಟಿನ ಮೂಲಕ ನೆರವು ನೀಡುತ್ತಿದ್ದರು. ಆದಾಯವನ್ನು ಪರೋಪಕರಕ್ಕೆ ವಿನಿಯೋಗಿಸಿ ಅನೇಕ ರಂಗಗಳಿಗೆ ತಮ್ಮ ಕೊಡುಗೆಗಳನ್ನು ಜಾಲಪ್ಪನವರು ನೀಡಿರುವದನ್ನು ಮುಖ್ಯಮಂತ್ರಿಯವರು ಸ್ಮರಿಸಿದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ದೀರ್ಘ ಸಾರ್ವಜನಿಕ ಬದುಕು ಬದುಕಿದ ಆರ್.ಎಲ್.ಜಾಲಪ್ಪನವರ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಹಾಗೂ ತಾಲೂಕು ಅಭಿವೃದ್ಧಿ ಮಂಡಳಿಯ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಜಾಲಪ್ಪನವರನ್ನು ಡಿ.ದೇವರಾಜ ಅರಸು ಗುರುತಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿದರು. ಅವರು ಶಾಸಕರಾದ ಕೂಡಲೇ ತಮ್ಮ ಒಟ್ಟು ಆಸ್ತಿಯನ್ನು ಕುಟುಂಬದ ಸದಸ್ಯರಿಗೆ ವಿಭಾಗಿಸಿ ಹಸ್ತಾಂತರ ಮಾಡಿದರು. ತಮ್ಮ ಅಧಿಕಾರದಲ್ಲಿ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡದಂತೆ ನೋಡಿಕೊಂಡರು. 1973 ರಿಂದಲೂ ಅವರನ್ನು ಹತ್ತಿರದಿಂದ ಬಲ್ಲ ತಮ್ಮ ಹಾಗೂ ಅವರ ನಡುವೆ ಸುಮಾರು 20ಕ್ಕೂ ಹೆಚ್ಚು ವರ್ಷಗಳ ಅಂತರವಿದ್ದರೂ ಕೂಡ ಆತ್ಮೀಯತೆ, ಗೆಳೆತನಕ್ಕೆ ಅದು ಅಡ್ಡಿಯಾಗಲೇ ಇಲ್ಲ. 1996ರಲ್ಲಿ ಅವರ ಲೋಕಸಭೆಗೆ ಚುನಾಯಿತರಾದಾಗ ಹೆಚ್.ಡಿ. ದೇವೆಗೌಡರು ಪ್ರಧಾನಿಯಾದರು, ಆಗ ನನ್ನನ್ನು ಮುಖ್ಯಮಂತ್ರಿ ಮಾಡಲು ಪಕ್ಷದಲ್ಲಿ ಹಠ ಹಿಡಿದಿದ್ದರು.

 

ಹೆಚ್.ಡಿ. ರೇವಣ್ಣ ಮತ್ತು ವಿ. ಸೋಮಣ್ಣ ನೇತೃತ್ವದಲ್ಲಿ ಸುಮಾರು 87 ಜನ ಶಾಸಕರ ಸಹಿ ಸಂಗ್ರಹ ಮಾಡಿಸಿದ್ದರು. ತಮ್ಮ ಹಿತೈಷಿಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡುತ್ತಿದ್ದರು. ಅವರು ಸ್ಥಾಪಿಸಿದ ಡಿ. ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ಸ್ಥಾಪಕ ನಿದೇಶಕನನ್ನಾಗಿ ನೇಮಿಸಿಕೊಂಡಿದ್ದರು. ನಿರ್ದೇಶಕರಾದವರು ಸತತವಾಗಿ ಮೂರು ಸಭೆಗಳಿಗೆ ಗೈರು ಹಾಜರಾದರೆ ಅವರನ್ನು ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಲು ಅವರು ಬೈಲಾ ನಿಯಮವಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಮೂರು ಸಭೆಗಳಿಗೆ ಗೈರಾದ ಪರಿಣಾಮವಾಗಿ ಆ ಸ್ಥಾನದಿಂದ ತೆಗೆದು ಹಾಕಿ ನೇರವಾಗಿ ವಿಷಯ ತಿಳಿಸಿದರು. ಅಂತಹ ದಕ್ಷತೆ, ನೇರ ನುಡಿ ಅವರದಾಗಿತ್ತು.

 

ಕೋಲಾರದಲ್ಲಿ ನ್ಯಾಯವಾದಿ ಸಿ.ಎಸ್. ದ್ವಾರಕನಾಥ್ ಅವರ ಮೂಲಕ ಮೊದಲ ಅಹಿಂದ ಸಮಾವೇಶ ಸಂಘಟಿಸಿದ್ದರು. ನಂತರ 2005 ರ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ನಾವು ಆಯೋಜಿಸಿದ್ದ ಅಹಿಂದ ಸಮಾವೇಶದಲ್ಲಿ ಸ್ವತಃ ಅವರು ಪಾಲ್ಗೊಂಡು ನೈತಿಕ ಬೆಂಬಲ ಸೂಚಿಸಿದರು. ಆಗ ವಿಧಾನಪರಿಷತ್ ಸದಸ್ಯರಾಗಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ಭಾಗವಹಿಸಿದ್ದರು. ನಾನು ಮುಖ್ಯಮಂತ್ರಿಯಾಗಬೇಕಾದರೆ ಕಾಂಗ್ರೆಸ್ ಪಕ್ಷ ಸೇರಬೇಕೆಂಬ ಸಲಹೆ ನೀಡಿದ್ದರು. ಸಾಮಾಜಿಕ ನ್ಯಾಯ, ಬಡವರು, ರೈತರ ಪರ ಕಳಕಳಿ ಹೊಂದಿದ್ದ ಜಾಲಪ್ಪನವರಂತಹ ನಾಯಕರು ಇಂದಿನ ರಾಜಕಾರಣದಲ್ಲಿ ವಿರಳ ಎಂದರು.

ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಆರ್ ಎಲ್ ಜಾಲಪ್ಪ ಒರಟು ಮನುಷ್ಯನಾದರೂ ಹೃದಯವಂತರಾಗಿದ್ದರು. ಕೃಷಿ ಮಾರುಕಟ್ಟೆಯಲ್ಲಿ ರೈತರು ಪಾವತಿಸಬೇಕಾಗಿದ್ದ ಶೇ.2ರ ತೆರಿಗೆಯನ್ನು ವರ್ತಕರಿಂದಲೇ ಸಂಗ್ರಹಿಸುವ ಬದಲಾವಣೆ ಜಾರಿಗೊಳಿಸಿದರು. ವ್ಯಾಪಾರಿಗಳ ವಲಯದಿಂದ ಎಷ್ಟೇ ವಿರೋಧ ಬಂದರೂ ಮಣಿಯಲಿಲ್ಲ. ಸಹಕಾರ ಚಳುವಳಿ ಮತ್ತು ರಂಗದಲ್ಲಿ ಸದಸ್ಯರು ಬಹಳ ದೀರ್ಘಕಾಲ ಇರಲು ಬಿಡುತ್ತಿರಲಿಲ್ಲ ಇದಕ್ಕಾಗಿ ಕಠಿಣ ಕಾನೂನುಗಳನ್ನು ತಂದರು. ಗೃಹ ಸಚಿವರಾಗಿದ್ದ ವೇಳೆಯಲ್ಲಿ ರಾತ್ರಿ ಹೊತ್ತು ಸ್ವತಃ ಗಸ್ತು ತಿರುಗಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಪೊಲೀಸರಲ್ಲಿ ಜಾಗೃತಿ ಮೂಡಿಸಿದರು. ಬಹಳ ಅಧ್ಯಯನಶೀಲರಾಗಿದ್ದ ಜಾಲಪ್ಪನವರು ಸ್ವತಃ ಕೃಷಿಕರಾಗಿ ಭೂಮಿಗೆ ಇಳಿದು ಅದ್ಭುತವಾಗಿ ತೆಂಗು ಬಾಳೆ ಮತ್ತಿತರ ಬೆಳೆಗಳನ್ನು ಬೆಳೆದಿದ್ದರು.

 

ಸಿದ್ದಗಂಗಾ ಶ್ರೀಗಳ ಪರಮ ಭಕ್ತರಾಗಿದ್ದರು. ರಶೀದ್ ಕೊಲೆ ಪ್ರಕರಣದಲ್ಲಿ ಅವರ ವಿರುದ್ಧ ಅನಗತ್ಯ ಆರೋಪಗಳು ಕೇಳಿ ಬಂದಾಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪ್ರಕರಣವನ್ನು ಏಕಾಏಕಿ ಸಿಬಿಐಗೆ ವಹಿಸಿದರು. ಇದರಿಂದ ಮನ ನೊಂದ ಜಾಲಪ್ಪನವರು ತಕ್ಷಣ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರಕರಣದ ವಿಚಾರಣೆಗಾಗಿ ಕೊಯಿಮತ್ತೂರು ನ್ಯಾಯಾಲಯಕ್ಕೆ ತೆರಳುವ ಸಂದರ್ಭದಲ್ಲಿ ನೂರಾರು ಜನ ಅವರ ಬೆಂಬಲಿಗರು ಬಸ್ಸು, ವಾಹನಗಳಲ್ಲಿ ತೆರಳಿ ನೈತಿಕ ಬೆಂಬಲ ಸೂಚಿಸುತ್ತಿದ್ದರು ಎಂದು ಸ್ಮರಿಸಿದರು.

ಸದಸ್ಯರಾದ ಡಾ. ಜಿ. ಪರಮೇಶ್ವರ, ಕುಮಾರ ಬಂಗಾರಪ್ಪ, ಜಿ.ಟಿ. ದೇವೆಗೌಡ, ವೆಂಕಟರಮಣಯ್ಯ, ಅರಸಿಕೆರೆ ಶಿವಲಿಂಗೇಗೌಡ ಅವರು ಆರ್. ಎಲ್. ಜಾಲಪ್ಪನವರ ಗುಣಗಾನ ಮಾಡಿದರು. ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.