Belagavi News In Kannada | News Belgaum

ಕಳಸಾ-ಬಂಡೂರಿ ಕಾಮಗಾರಿ ಆರಂಭಕ್ಕೆ ಸರ್ಕಾರ ಕ್ರಮ ಕೈಗೊಳ್ಳಿ: ಶ್ರೀಕಂಠೇಗೌಡ ಒತ್ತಾಯ

ಬೆಳಗಾವಿ: ಮಹದಾಯಿ ನದಿ ವಿವಾದದ ತೀರ್ಪಿನಂತೆ ಹಂಚಿಕೆಯಾದ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಕಳಸಾ ಮತ್ತು ಬಂಡೂರಿ ನಾಲೆಗಳ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‍ನ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಒತ್ತಾಯಿಸಿದರು.

ವಿಧಾನ ಪರಿಷತ್‍ನಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ಆರಂಭಿಸಿದ ಅವರು, ಮಹದಾಯಿ ಯೋಜನೆ ಅಡ್ಡಲಾಗಿ ಕಳಸಾ ಬಂಡೂರಿ ಯೋಜನೆಗೆ ಎಸ್.ಆರ್.ಬೊಮ್ಮಾಯಿ ಕಾಲದಲ್ಲೇ ಚಿಂತನೆ ನಡೆದಿತ್ತು.

ನೀರಿನ ವಿವಾದ ನ್ಯಾಯಾೀಕರಣದ ಮುಂದೆ ವಿಚಾರಣೆ ನಡೆಯುತ್ತಿರುವುದರಿಂದ ವಿಳಂಬವಾಯಿತು. ಯೋಜನೆ ಜಾರಿಗೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂರಾರು ಕಿಲೋ ಮೀಟರ್ ಪಾದಯಾತ್ರೆ ನಡೆಸಿದರು. ನ್ಯಾಯಾಕರಣ ತೀರ್ಪು ನೀಡಿ ರಾಜ್ಯಕ್ಕೆ 13.5 ಟಿಎಂಸಿ ನೀರು ಹಂಚಿಕೆ ಮಾಡಿದೆ. ಅದರಲ್ಲಿ ಕಳಸಾ ಬಂಡೂರಿ ನಾಲೆಗಳಿಂದ 5 ಟಿಎಂಸಿ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬಹುದು, ಉಳಿದಿದ್ದನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು.

ಗದಗ, ಬಾಗಲಕೋಟೆ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡಗಳಿಗೆ ಕುಡಿಯುವ ನೀರು ಪೂರೈಸುವ ಈ ಯೋಜನೆಗೆ ಯಾವುದೇ ಅಡ್ಡಿ ಇಲ್ಲ. ನ್ಯಾಯಾೀಕರಣದ ತೀರ್ಪಿಗೆ ಅಸೂಚನೆಯು ಜಾರಿಯಾಗಿದೆ. ಸಚಿವ ಸಂಪುಟದಲ್ಲಿ ಯೋಜನೆಗೆ ಅನುಮೋದನೆ ಪಡೆದು ಅನುಷ್ಠಾನ ಮಾಡುವುದಷ್ಟೆ ಬಾಕಿ ಇದೆ.

ಯೋಜನೆ ಆರಂಭದಲ್ಲಿ ಕಳಸಾಕ್ಕೆ 44 ಕೋಟಿ ವೆಚ್ಚ ಅಂದಾಜಿಸಲಾಗಿತ್ತು, ಅದು ಈಗ 400 ಕೋಟಿ ರೂ.ಗೆ ಹೆಚ್ಚಾಗಿದೆ. ಬಂಡೂರಿ ನಾಲೆ ಯೋಜನೆ ವೆಚ್ಚ 40ಕೋಟಿಯಿಂದ 370 ಕೋಟಿ ರೂ.ಗೆ ಏರಿಕೆಯಾಗಿದೆ. ಮಹದಾಯಿಗಾಗಿ ಪಾದಯಾತ್ರೆ ಹಾಗೂ ಇತರ ಹೋರಾಟ ಮಾಡಿದ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿದ್ದಾರೆ.ಅವರ ತಂದೆ ರೂಪಿಸಿದ ಯೋಜನೆಯನ್ನು ಜಾರಿ ಮಾಡುವ ಸವಾಲು ಅವರ ಮುಂದಿದೆ.

ಮಹದಾಯಿಗಾಗಿ ನರಗುಂದ-ನವಲಗುಂದದಲ್ಲಿ ಜನ ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯೋಜನೆಗೆ ಶಂಕುಸ್ಥಾಪನೆ ಮಾಡಿ, ಅವರ ಪ್ರತಿಭಟನೆಯನ್ನು ಕೊನೆಗಾಣಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿದರು. ಕೃಷ್ಣ ನದಿ ವಿವಾದದಲ್ಲಿ ರಾಜ್ಯಕ್ಕೆ 130 ಮತ್ತು 173 ಟಿಎಂಸಿ ನೀರು ಹಂಚಿಕೆಯಾಗಿದೆ. ಒಟ್ಟು 28ಲಕ್ಷ ಎಕರೆಗೆ ನೀರಾವರಿ ಕಲ್ಪಿಸುವ ಬೃಹತ್ ಯೋಜನೆ ಇದಾಗಿದೆ.

ತಾವು ನಿಲುವಳಿ ಸೂಚನೆ ನೀಡಿದಾಗ ಕೃಷ್ಣ, ಕಾವೇರಿ ಮತ್ತು ಮಹದಾಯಿ ಯೋಜನೆಗಳ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಅದಕ್ಕೆ ನ್ಯಾಯ ಕೊಡಬೇಕಿದೆ. ಉತ್ತರ ಕರ್ನಾಟಕ ಭಾಗದ ನದಿ ಯೋಜನೆಗಳ ಬಗ್ಗೆ ಹೆಚ್ಚು ಮಾತನಾಡಿದ್ದೇನೆ. ಮೇಕೆದಾಟು ಬಗ್ಗೆಯೂ ಸರ್ಕಾರದ ಗಮನ ಸೆಳೆಯುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕಾಂಗ್ರೆಸ್‍ನ ಸದಸ್ಯ ಸಿ.ಎಂ.ಇಬ್ರಾಹಿಂ ಅವರು, ಎರಡು ಸದನದಲ್ಲಿ ಮಾತನಾಡಿದ್ದನ್ನು ಸೇರಿಸಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಯೋಜನೆಗಳ ಒತ್ತಾಯ ಮಾಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು. ನಂತರ ಜೆಡಿಎಸ್‍ನ ಸದಸ್ಯ ತಿಪ್ಪೆಸ್ವಾಮಿ ಅವರು ಮಾತನಾಡಿ, ನೀರಾವರಿ ಯೋಜನೆಗಳ ವಿಳಂಬದ ಬಗ್ಗೆ ವಿವರಣೆ ನೀಡಿದರು.//////