Belagavi News In Kannada | News Belgaum

ಜ. 1 ರಂದು ಹುಕ್ಕೇರಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ

ಹುಕ್ಕೇರಿ: ಭೀಮಾ ಕೋರೆಗಾಂವ್ ವಿಜಯೋತ್ಸವ ನೆನಪಿನ ಪ್ರಯುಕ್ತ ಹುಕ್ಕೇರಿಯಲ್ಲಿ ಬರುವ ಜ.1 ರಂದು ಜಿಲ್ಲಾ ಮಟ್ಟದ ಬೃಹತ್ ಸಾಹಸ-ಸಾಧನೆ ಸಮಾವೇಶ ಏರ್ಪಡಿಸಲು ತೀರ್ಮಾನಿಸಲಾಯಿತು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಡಾ.ಅಂಬೇಡ್ಕರ ಜನಜಾಗೃತಿ ವೇದಿಕೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,  ಬಹುತೇಕ ಮುಖಂಡರು, ಹುಕ್ಕೇರಿಯಲ್ಲಿ ಅಂದು ನಡೆಯುವ ಸಮಾವೇಶ ಐತಿಹಾಸಿಕವಾಗಿ ದಾಖಲೆಗೆ ಕಾರಣವಾಗಲಿದೆ ಎಂದರು.

ಅಂದು ಬೆಳಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ಥಂಭದ ಭವ್ಯ ಮೆರವಣಿಗೆ ಜರುಗಲಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಸಮಾವೇಶವನ್ನು ರತನ್‍ರಾಜ್ ಅಂಬೇಡ್ಕರ ಉದ್ಘಾಟಿಸಲಿದ್ದು ಸಚಿವ ಉಮೇಶ ಕತ್ತಿ ಅಧ್ಯಕ್ಷತೆ ವಹಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತಿತರರು ಉಪಸ್ಥಿತರಿರಲಿದ್ದು ನೂತನ ಎಂಎಲ್‍ಸಿಗಳಾದ ಚನ್ನರಾಜ್ ಹಟ್ಟಿಹೊಳಿ, ಲಖನ್ ಜಾರಕಿಹೊಳಿ ಸೇರಿದಂತೆ ವಿವಿಧ ಹೋರಾಟಗಾರರನ್ನು ಸನ್ಮಾನಿಸಲಾಗುವುದು. ಬಳಿಕ ವಿಚಾರ ಸಂಕೀರಣ ನಡೆಯಲಿದೆ.
ಮುಖಂಡ ಮಲ್ಲಿಕಾರ್ಜುನ ರಾಶಿಂಗೆ ಮಾತನಾಡಿ, ಶೋಷಿತರು ಶೋಷಕ ಶಕ್ತಿಗಳ ವಿರುದ್ಧ ಸಾರಿದ ಯುದ್ಧ ಕೋರೆಗಾಂವ್. ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು 30 ಸಾವಿರ ಸೈನಿಕರನ್ನು ಕೇವಲ 500 ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ ಇದಾಗಿದೆ. ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ಯುದ್ಧವೆಂದೇ ಪ್ರಸಿದ್ಧಿಯಾಗಿದೆ. 1818 ರಲ್ಲಿ ನಡೆದ ಕೆಚ್ಚೆದೆಯ ಹೋರಾಟ, ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಈ ಘಟನೆ ಕುರಿತು ಜನರಲ್ಲಿ ಅರಿವು ಮೂಡಿಸಲು ಸಾಹಸ-ಸಾಧನೆ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲಾ ಅಧ್ಯಕ್ಷ ಉಮೇಶ ಭೀಮಗೋಳ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಆನಂದ ಕೆಳಗಡೆ, ದಿಲೀಪ ಹೊಸಮನಿ, ಕೆಂಪಣ್ಣಾ ಶಿರಹಟ್ಟಿ, ಪಿಂಟು ಸೂರ್ಯವಂಶಿ, ಕೆ.ವೆಂಕಟೇಶ, ಶ್ರೀನಿವಾಸ ವ್ಯಾಪಾರಿ, ಮಂಜುನಾಥ ಪಡದಾರ, ಪ್ರಕಾಶ ಕೋಳಿ, ಮಂಜು ಮರಡಿ, ರಾಜು ಮೋಥಾ, ಮಲ್ಲಪ್ಪ ಕುರಣಿ, ಲಗಮಣ್ಣಾ ಕಣಗಲಿ, ಜಿತೇಂದ್ರ ಮರಡಿ, ಲಕ್ಷ್ಮಣ ಹೂಲಿ, ಶಶಿಕಾಂತ ಮೇತ್ರಿ, ವಿಶ್ವನಾಥ ಕರಡಿ, ಬಸವರಾಜ ಕೋಳಿ, ಸೋಮು ಜೀವನ್ನವರ, ಸುಧೀರ ಹುಕ್ಕೇರಿ, ಉಮೇಶ ಮಾಳಗೆ, ಗಂಗಾರಾಮ ಹುಕ್ಕೇರಿ, ಸಂಜು ಜೀವನ್ನವರ, ಆಕಾಶ ಕೇರಿಮನಿ, ಅನಿಲ ಖಾತೇದಾರ, ಪ್ರದೀಪ ಕಾಮಾನಿ, ಬಾಹುಸಾಹೇಬ ಪಾಂಡ್ರೆ ಮತ್ತಿತರರು ಉಪಸ್ಥಿತರಿದ್ದರು.//////