Belagavi News In Kannada | News Belgaum

ರಾಣಿ ಚೆನ್ನಮ್ಮ ವಿವಿ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ ಸತ್ವಯುತ ಸಂಶೋಧನೆಗೆ ವಿಶ್ವವಿದ್ಯಾಲಯಗಳು ವೇದಿಕೆಯಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಣಿ ಚೆನ್ನಮ್ಮ ವಿವಿ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ
ಸತ್ವಯುತ ಸಂಶೋಧನೆಗೆ ವಿಶ್ವವಿದ್ಯಾಲಯಗಳು ವೇದಿಕೆಯಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಬೆಳಗಾವಿ, ಡಿ.22 : ವಿಶ್ವವಿದ್ಯಾಲಯಗಳು ವಿದ್ಯಾರ್ಜನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಇದು ಜ್ಞಾನದ ಶತಮಾನವಾಗಿದೆ. ಜಗತ್ತಿನ ಶಕ್ತಿಯು ಜ್ಞಾನದ ಕಡೆಗೆ ವಾಲುತ್ತಿದೆ. ವಿಶ್ವವಿದ್ಯಾಲಯಗಳು ಇದನ್ನು ಅರಿತುಕೊಂಡು ಶಿಕ್ಷಣ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.
ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದ ಹೊಸ ನಿವೇಶನದಲ್ಲಿ 126 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡಗಳ ನಿರ್ಮಾಣಕ್ಕೆ ಬುಧವಾರ (ಡಿ.22) ಭೂಮಿಪೂಜೆ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎರಡನೇ ಹಂತದ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿವಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಬದ್ಧತೆ ಸಿಪಾಯಿಯಿಂದ ಹಿಡಿದು ಕುಲಪತಿಗಳವರೆಗೆ ಎಲ್ಲರಿಗೂ ಇರಬೇಕು. ವಿವಿಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಎಲ್ಲ ಕ್ಷೇತ್ರದಲ್ಲಿ ಸಾಧನೆಗೈಯಬೇಕು.
ಹೊಸ ಪ್ರಯೋಗಗಳು ವಿಶ್ವವಿದ್ಯಾಲಯದಲ್ಲಿ ಆಗಬೇಕು. ಊಹೆಗೂ ನಿಲುಕದಂತಹ ತಾಂತ್ರಿಕ ಮತ್ತು ವೈಜ್ಞಾನಿಕ ಬದಲಾವಣೆಗಳಾಗುತ್ತಿವೆ. ಇದಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯ ಬದಲಾಗುವ ಮೂಲಕ ಆವಿಷ್ಕಾರದ ಕೇಂದ್ರವಾಗಬೇಕು.
ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆ ತರಬೇಕಾದರೆ ಅದು ವಿಶ್ವವಿದ್ಯಾಲಯದ ಮೂಲಕ ಮಾತ್ ಸಾಧ್ಯವಿದೆ. ಈ ಹೊಣೆಗಾರಿಕೆಯನ್ನು ಅರಿತುಕೊಂಡು ವಿಶ್ವವಿದ್ಯಾಲಯದಲ್ಲಿ ಆವಿಷ್ಕಾರಗಳನ್ನು ಕೈಗೊಳ್ಳಬೇಕು.
ಸತ್ವಯುತ ಸಂಶೋಧನೆಗೆ ಸಿಎಂ ಸಲಹೆ:
ಯುವಸಮುದಾಯಕ್ಕೆ ಜ್ಞಾನ ಹಾಗೂ ಆತ್ಮವಿಶ್ವಾಸದ ಬಲ ನೀಡಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಪ್ರಾಧ್ಯಾಪಕರು ವಿಶ್ವವಿದ್ಯಾಲಯಗಳ ಕ್ಲಾಸ್ ರೂಮ್ ಗಳಿಂದ ಹೊರಬಂದು ತಮ್ಮ ಸಂಶೋಧನೆಯನ್ನು ಒರೆಗೆ ಹಚ್ಚಬೇಕು. ಸತ್ವಯುತವಾದ ಸಂಶೋಧನೆ ಎಂದಿಗೂ ಉಳಿದುಕೊಳ್ಳುತ್ತದೆ. ಆದ್ದರಿಂದ ಸತ್ವಯುತ ಹಾಗೂ ಜನೋಪಯೋಗಿ ಸಂಶೋಧನೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣದಲ್ಲಿ ಸಮರ್ಥ ನಾಯಕತ್ವ ಅತೀ ಮುಖ್ಯವಾಗಿದೆ. ವಿಶ್ವವಿದ್ಯಾಲಯದ ಕುಲಪತಿಗಳು ಇಂತಹ ನಾಯಕತ್ವ ವಹಿಸಿಕೊಂಡು ಮುನ್ನಡೆಯಬೇಕು. ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಸರಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.
ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಪಿ.ಎಚ್‍ಡಿ ಗಳ ವಿಶ್ಲೇಷಣೆ ಆಗಬೇಕು. ಅವುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಕೂಡ ಅಧ್ಯಯನ ನಡೆಸಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ರಾಚವಿ ಆದರ್ಶ ವಿವಿ ಆಗಲಿ; ಸಿಎಂ ಆಶಯ:
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಆದರ್ಶ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.
ರಸ್ತೆ, ನೀರು ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ. ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು.
ವಿವಿಯ ಪ್ರತಿ ಕೊಠಡಿಯು ಡಿಜಿಟಲೀಕರಣ ಆಗಬೇಕು. ತಾರ್ಕಿಕ ಚಿಂತನೆಯನ್ನು ಬೆಳೆಸಿಕೊಂಡು ಪ್ರಶ್ನೆಗಳನ್ನು ಕೇಳುವ ಧೈರ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿವಿ ಸ್ಥಾಪನೆಯಿಂದ ಕುಡಿಯುವ ನೀರಿನ ಯೋಜನೆಗೆ ಸ್ವಲ್ಪಮಟ್ಟಿಗೆ ತೊಂದರೆಯಾಗಿದೆ. ಆದ್ದರಿಂದ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.
ಉತ್ಕೃಷ್ಟ ಶಿಕ್ಷಣ ಒದಗಿಸಲು ಸರಕಾರ ಬದ್ಧ:
ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಡಾ.ಅಶ್ವತ್ಥನಾರಾಯಣ ಸಿ.ಎನ್., ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸುವ ಉದ್ಧೇಶದಿಂದ ವಿಶ್ವವಿದ್ಯಾಲಯಕ್ಕೆ ಭೂಮಿ ಒದಗಿಸಲಾಗಿದೆ ಎಂದರು.
ಉತ್ತಮ ಶಿಕ್ಷಣ, ಕೌಶಲ್ಯ , ತಂತ್ರಜ್ಞಾನವನ್ನು ಒದಗಿಸುವ ಮೂಲಕ ಯುವ ಸಮುದಾಯವನ್ನು ಸ್ವಾವಲಂಬಿ ಮತ್ತು ಉತ್ತಮ ಬದುಕು ಕಟ್ಟಿಕೊಳ್ಳಲು ಸರಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ.ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಸರಕಾರ ಎಲ್ಲಾ ಸೌಲಭ್ಯ ಒದಗಿಸಲಿದೆ. ಈ ಭಾಗದ ಸವಾಲು ಮತ್ತು ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ನಿವಾರಣೆಗಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕು ಎಂಬ ನಿರೀಕ್ಷೆಯನ್ನು ಸರಕಾರ ಹೊಂದಿದೆ ಎಂದು ತಿಳಿಸಿದರು.
ಸದ್ಯಕ್ಕೆ ಎಂಟು ಸಾವಿರ ಪೈಕಿ ಈಗಾಗಲೇ ಎರಡು ಸಾವಿರ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದೆ. ಉಳಿದ ಆರು ಸಾವಿರ ಕ್ಲಾಸ್ ಗಳನ್ನು ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡಲಾಗುವುದು.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಸಬಲೀಕರಣ, ಸ್ವಾಯತ್ತತೆಯನ್ನು ಒದಗಿಸುವ ಮೂಲಕ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಉತ್ಕೃಷ್ಟ ಮತ್ತು ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಸೂಪರ್ ಥರ್ಟಿ ಯೋಜನೆ ಮೂಲಕ ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆಯನ್ನು ನೀಡಿದರು.
ಸಮಗ್ರ, ಸದೃಢ ಕರ್ನಾಟಕ ಕಟ್ಟಲು ಶಿಕ್ಷಣವೇ ಬುನಾದಿಯಾಗಿದೆ. ಆದ್ದರಿಂದ ಶಿಕ್ಷಣ ಮತ್ತು ಎಲ್ಲರಿಗೂ ಉದ್ಯೋಗ ನೀಡುವ ಪ್ರಯತ್ನವನ್ನು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಮಾಡುತ್ತಿದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಜರಾಯಿ, ಹಜ್ ಹಾಗೂ ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಮತ್ತು ತಂತ್ರಜ್ಞಾನಾಧಾರಿತ ಶಿಕ್ಷಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಮನವಿ:
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಸುವರ್ಣ ವಿಧಾನಸೌಧ, ವಿಟಿಯು ಹಾಗೂ ಆರ್ಸಿ.ಯು. ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕಳಶಪ್ರಾಯವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಬೆಳಗಾವಿ ಅಭಿವೃದ್ಧಿಗೆ ಪೂರಕವಾಗಿರುವ ಗ್ರಾಮೀಣ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇದನ್ನು ನಿವಾರಿಸಲು ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 300 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಮಂಜೂರು ಮಾಡಿಸಲಾಗಿದೆ. ಕೆರೆ ತುಂಬಿಸುವ ಯೋಜನೆ ಮುಂದುವರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಹಿರೇಬಾಗೇವಾಡಿ ಗ್ರಾಮದ ಕಸ ವಿಲೇವಾರಿಗೆ ಹತ್ತು ಎಕರೆ ಜಮೀನು ಒದಗಿಸಲು ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಎಂ.ರಾಮಚಂದ್ರಗೌಡ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇಡಿ ಬಳಿ 126 ಎಕರೆ ವಿಶಾಲವಾದ ಜಾಗೆ ದೊರೆತಿದೆ ಎಂದು ತಿಳಿಸಿದರು.
ವಿವಿ ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳಿಗೆ ಉತ್ಕೃಷ್ಟವಾದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇದಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ವಿಧಾನಪರಿಷತ್ ಸದಸ್ಯರಾದ ಅರುಣ ಶಹಾಪುರ, ಡಾ.ತಳವಾರ ಸಾಬಣ್ಣ, ಹನಮಂತ ನಿರಾಣಿ, ಸಿಂಡಿಕೇಟ್ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿನಾಯಕ ಮೋರೆ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಕುಲಪತಿ ಪೆÇ್ರ.ಬಸವರಾಜ ಪದ್ಮಶಾಲಿ ವಂದಿಸಿದರು.///

‘ಯೂನಿವರ್ಸಿಟಿ ಆಫ್ ಎಮಿನೆನ್ಸ್’ ದರ್ಜೆಗೆ 6 ವಿವಿ: ಅಶ್ವತ್ಥನಾರಾಯಣ ರಾಣಿ ಚೆನ್ನಮ್ಮ ವಿವಿ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಭೂಮಿಪೂಜೆ

ಬೆಳಗಾವಿ, ಡಿ.22 : ರಾಜ್ಯದ ಆಯ್ದ 6 ಸರಕಾರಿ ವಿಶ್ವವಿದ್ಯಾಲಯಗಳನ್ನು ‘ಯೂನಿವರ್ಸಿಟಿ ಆಫ್ ಎಮಿನೆನ್ಸ್’ ಮಟ್ಟಕ್ಕೆ ಸುಧಾರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲ್ಲಿನ ಹಿರೇಬಾಗೇವಾಡಿಯಲ್ಲಿ ಮೈದಾಳಲಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ಸಿನ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, ರಾಣಿ ಚೆನ್ನಮ್ಮ ವಿ.ವಿ.ಯಿಂದಾಗಿ ಬೆಳಗಾವಿ, ಬಾಗಲಕೋಟೆ ಮತ್ತು ಚಿಕ್ಕೋಡಿ ಭಾಗಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗಲಿದ್ದು, ಈ ವಿಶ್ವವಿದ್ಯಾಲಯವು ಕಿತ್ತೂರು ರಾಣಿ ಚೆನ್ನಮ್ಮನಂತೆಯೇ ಈ ಭಾಗಕ್ಕೆ ನಾಯಕತ್ವವನ್ನು ಒದಗಿಸಬೇಕು ಎಂದು ಆಶಿಸಿದರು.
ಸರಕಾರವು ಶಿಕ್ಷಣ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಗ್ರ ಬದಲಾವಣೆಯನ್ನು ತರಲು ಸಂಕಲ್ಪ ಮಾಡಿದ್ದು, ಈಗಾಗಲೇ 2,500 ತರಗತಿಗಳನ್ನು ಸ್ಮಾರ್ಟ್ ಕ್ಲಾಸ್ ರೂಂಗಳನ್ನಾಗಿ ಮಾಡಲಾಗಿದೆ. ಉಳಿದಿರುವ 6 ಸಾವಿರ ತರಗತಿಗಳನ್ನು ಕೂಡ ಇನ್ನು ಕೆಲವೇ ತಿಂಗಳುಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಮೂಲಕ ನಿರಂತರ ಕಲಿಕೆಯನ್ನು ತಮ್ಮದನ್ನಾಗಿಸಿಕೊಳ್ಳುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.
ಇಷ್ಟೇ ಅಲ್ಲದೆ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಂತೆ, ರಾಜ್ಯದಲ್ಲಿ 7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಣ ರಂಗದ ಸುಧಾರಣೆಗಾಗಿ ಸರಕಾರವು ಹಲವು ಅತ್ಯುಪಯುಕ್ತ ಕ್ರಮಗಳನ್ನು ಕೈಗೊಂಡಿವೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಕಿತ್ತೂರು ಕರ್ನಾಟಕ ಭಾಗದ ಮುಂಚೂಣಿ ಸಂಸ್ಥೆಯಾಗಿ ಬೆಳೆಯಬೇಕು. ಜತೆಗೆ ಸ್ಥಳಿಯ ಪರಿಸರಸ ಬೆಳವಣಿಗೆ, ಅಭಿವೃದ್ಧಿ ಮತ್ತು ಸುಧಾರಣೆಗೆ ಅಗತ್ಯವಾಗಿರುವ ಕಾರ್ಯಕ್ರಮ ಹಾಗೂ ಪರಿಕಲ್ಪನೆಗಳೊಂದಿಗೆ ಮುಂದಡಿ ಇಡಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎಂಎಲ್ಸಿ ಅರುಣ್ ಶಹಾಪುರ, ಕುಲಪತಿ ರಾಮಚಂದ್ರ ಗೌಡ ಮುಂತಾದವರು ಭಾಗವಹಿಸಿದ್ದರು. ///

ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗಕ್ಕಾಗಿ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಬೆಳಗಾವಿ, ಡಿ.22 : 2021-22 ನೇ ಸಾಲಿಗೆ ಕೇಂದ್ರ ಸರ್ಕಾರದ ನ್ಯಾಷನಲ್ ಇ-ಸ್ಕಾಲರ್ ಶಿಫ್ ಯೋಜನೆಯಡಿ ಪ್ರೀಮ್ಯಾಟ್ರಿಕ್ ಮತ್ತು ಪೋಸ್ಟ ಮ್ಯಾಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗ ಮಾಡಲು ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.
ಪ್ರಿಮ್ಯಾಟ್ರಿಕ್, ಪೋಸ್ಟ ಮ್ಯಾಟ್ರಿಕ್ ಮತ್ತು ಟಾಪ್ ಕ್ಲಾಸ್ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿರುತ್ತದೆ.
E-Scholarship portal ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಬೆಳಗಾವಿ ಜೆಲ್ಲೆಯ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಮುಲಕ ಈ ಯೋಜನೆಯ ವೆಬ್ ಸೈಟ್ www.scholarship.gov.in ನಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ www.disabilityaffairs.gov.in ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಪರಿಶಿಷ್ಟ ಪಂಗಡದ ಗ್ರಾಮೀಣ ಕುಶಕರ್ಮಿ ಸಹಾಯಧನ : ಅರ್ಜಿ ಆಹ್ವಾನ

ಬೆಳಗಾವಿ, ಡಿ.22 : 2021-22 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಸಾಮಾನ್ಯ ,ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗ್ರಾಮೀಣ ಭಾಗದ ಕುಶಲಕರ್ಮಿ ಆಭ್ಯರ್ಥಿಗಳಿಗೆ ಶೇ. 60 ರಷ್ಟು ಸಹಾಯಧನ ಅಡಿ ಸಾಲಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಆಭ್ಯರ್ಥಿಗಳು ಜನೇವರಿ 7 ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಪರಿಶಿಷ್ಟ ಪಂಗಡದ ಆಭ್ಯರ್ಥಿಗಳು ತಮ್ಮ ವೃತ್ತಿಯನ್ನು ವೃದ್ದಿಗೊಳಿಸಿ ಅನುಕೂಲವಾಗುವಂತೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಭ್ಯರ್ಥಿಯು ಗ್ರಾಮೀಣ ಭಾಗದವರಾಗಿರಬೇಕು ಮತ್ತು ಕುಶಲಕರ್ಮಿಯಾಗಿದ್ದು, 18-45 ವಯೋಮೀತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು:
ಆಧಾರ ಕಾರ್ಡ, ಗ್ರಾಮ ಸಭೆಯ ಆಯ್ಕೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಸೇರಿದಂತೆ ಯೋಜನಾ ವರದಿಯನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಸಣ್ಣ ಕೈಗಾರಿಕಾ ಘಟಕಗಳು ಬ್ಯಾಂಕಿನ ಸಾಲ ಪಡೆದು ಉದ್ಯೋಗ ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಬೆಳಗಾವಿ, ಡಿ.22 : 2021-22 ನೇ ಸಾಲಿನ ವಿಶೇಷ ಘಟಕ ಗಿರಿಜನ ಉಪಯೋಜನೆಯಡಿ ಗುಡಿ ಮತ್ತು ಅತೀ ಸಣ್ಣ ಕೈಗಾರಿಕಾ ಘಟಕಗಳು ಹಣಕಾಸು ಸಂಸ್ಥೆಯು ಬ್ಯಾಂಕಿನ ಸಾಲ ಪಡೆದು ಉದ್ಯೋಗ ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಗುಡಿ ಮತ್ತು ಅತೀ ಸಣ್ಣ ಕೈಗಾರಿಕಾ ಘಟಕಗಳು ಸ್ಥಾಪಿಸಲು ಶೇ 60% ಸಹಾಯಧನ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಆಭ್ಯರ್ಥಿಗಳು ಜನೇವರಿ 10 ರ ಒಳಗಾಗಿ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ರಾಷ್ಟ್ರೀಕೃತ ಬ್ಯಾಂಕ ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಸಂಯುಕ್ತ ಸಾಲ ರೂ. 10.00 ಲಕ್ಷ ಸಾಲ ಪಡೆದು ಸ್ಥಾಪಿಸಿದಲ್ಲಿ ಶೇ. 60% ರಷ್ಟು ಸ್ಥಿರ ಬಂಡವಾಳದ ಹೂಡಿಕೆಯ ಮೇಲೆ ಸಹಾಯಧನ ಗರಿಷ್ಠ 5.00 ಲಕ್ಷಗಳವರೆಗೆ ಮಂಜೂರಾತಿ ನೀಡುವ ಅವಕಾಶ ಇರುವುದು ಹಾಗೂ ಶೇ. 10% ರಂತೆ ಪ್ರವರ್ತಕರು ವಂತಿಗೆಯನ್ನು ಭರಿಸುವುದು,ಘಟಕವನ್ನು ಪ್ರಾರಂಭಿಸುವ ಉದ್ದಿಮೆದಾರರು ಕನಿಷ್ಠ 18 ವರ್ಷ ವಯೋಮಾನ ಪೂರೈಸಿರಬೇಕು, ಹೊಸ ಘಟಕಗಳಿಗೆ ಮಾತ್ರ ಈ ಯೋಜನೆಯಡಿ ಸಹಾಯಧನ ದೊರಕುವುದು, 2020-25 ನೇ ಸಾಲಿನ ಕೈಗಾರಿಕಾ ನೀತಿಯನ್ವಯ ಕೈಗಾರಿಕಾ ಅಥವಾ ಸೇವಾ ಚಟುವಟಿಕೆಯಡಿ ಕೈಗಾರಿಕೆ ಸ್ಥಾಪಿಸುವುದು. ಸೇವಾ ಘಟಕಗಳಲ್ಲಿ ಟೇಲರಿಂಗ್ ಹಾಗೂ ರೆಡಿಮೆಡ್ ಗಾರ್ಮೆಂಟ್ಸ, ಝೆರಾಕ್ಸ, ಡಿಟಿಪಿ, ಫೊಟೋ ಗ್ರಾಫಿ, ವ್ಹಿಡಿಯೋ ಗ್ರಾಫಿ, ಬ್ಯೂಟಿಫಾಲರ್, ಸೆಂಟರಿಂಗ್ ಪ್ಲೇಟ, ಕಾಂಕ್ರಿಟ್ ಮಿಕ್ಸರ್, ಪೆಂಡಾಲ ಡೆಕಾರೇಶನ್, ಇಲೆಕ್ಟ್ರೀಕಲ್ ಡೆಕಾರೇಶನ್, ಲ್ಯಾಬೋರಟರಿಗಳು ಮುಂತಾದ ಚಟುವಟಿಕೆಗಳು ಈ ಯೋಜನೆಯಡಿಯಲ್ಲಿ ಸಾಲ ಹಾಗೂ ಸಹಾಯಧನ ಪಡೆಯಲು ಅರ್ಹತೆಯನ್ನು ಹೊಂದಿರುವುದಿಲ್ಲ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಈ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯ ದೂರವಾಣಿ ಸಂಖ್ಯೆ : 0831-2440187 ಅಥವಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ನೂತನ ಅಗ್ನಿಶಾಮಕ ದಳದ ಕಟ್ಟಡದ ಉದ್ಘಾಟನೆ

ಬೆಳಗಾವಿ, ಡಿ.22 : ಅಗ್ನಿ ಅವಘಡ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ, ಸಂತ್ರಸ್ತರು ಹಾಗೂ ಅಮೂಲ್ಯ ಆಸ್ತಪಾಸ್ತಿಗಳನ್ನು ಸಂರಕ್ಷಣೆಗೆ ಧಾವಿಸುವ ಸಿಬ್ಬಂದಿಗಳಿಗೆ ಅತ್ಯುತ್ತಮ ತರಬೇತಿ ನೀಡಲಾಗಿದೆ. ನಮ್ಮ ಸಿಬ್ಬಂದಿಗಳು, ಆಯಾ ಅಗ್ನಿಶಾಮಕ ಠಾಣೆ ವ್ಯಾಪ್ತಿಯಲ್ಲಿ, ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ, ಪ್ರಕೃತಿ ವಿಕೋಪದ ಹಾಗೂ ಇನ್ನಿತರ ತುರ್ತು ಸನ್ನಿವೇಶಗಳನ್ನು ಎದುರಿಸಲು ತರಭೇತಿ ನೀಡುವಂಥ ಕಾರ್ಯವೂ ನಡೆಸಲಿದ್ದಾರೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಡಿಸೆಂಬರ್ 22 ಬುಧವಾರ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಅಗ್ನಿಶಾಮಕ ದಳದ ನೂತನ ಕಟ್ಟಡದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ನಮ್ಮ ಸರಕಾರ ಜನತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದ್ದು, ಕಳೆದ ಮೂರೂವರೆ ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸದೆ ಎಂದರು.
ಪ್ರಸ್ತುತ ವಿಧಾನಸಭೆಯಲ್ಲಿ ಮಂಡಿಸಿರುವ ಮತಾಂತರ ವಿರೋಧಿ ಕಾಯಿದೆಯ ಮಹತ್ವವನ್ನು ವಿವರಿಸಿ, ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಗಳನ್ನೂ ಉಳಿಸಿಕೊಂಡು ಹೋಗಲು, ಇಂತಹ ಮಸೂದೆಯ ಅಗತ್ಯವಿದೆ ಎಂದು ಹೇಳಿ, ” ನಮ್ಮ ಪ್ರಯತ್ನಕ್ಕೆ ನಿಮ್ಮಪೆÇ್ರೀತ್ಸಾಹವೂ ಅಗತ್ಯ” ಎಂದೂ ಹೇಳಿದರು.
ಶಾಸಕರಾದ, ದುರ್ಯೋಧನ ಐಹೊಳೆ ಮತ್ತು ಕುಡಚಿ ಶಾಸಕ ರಾಜೀವ್, ಹಾಗೂ ರಾಜ್ಯ ಅಗ್ನಿ ಶಾಮಕ ದಳ ಮುಖ್ಯಸ್ಥ ಅಮರ್ ಕುಮಾರ್ ಪಾಂಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.///

ಮುಖ್ಯಮಂತ್ರಿ ಪರಿಹಾರ ನಿಧಿಗೆ ವಂತಿಗೆ ಸಲ್ಲಿಕೆ

ಬೆಳಗಾವಿ, ಡಿ.22  : ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ವಿಶೇಷ ಶಾಲೆಗಳನ್ನು ನಡೆಸುತ್ತಿರುವ ವಿವಿಧ ಸ್ವಯಂ ಸಂಸ್ಥೆಯವರು ಕೋರೋನಾ ಪೀಡಿತರ ಸಹಾಯಾರ್ಥವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂಪಾಯಿ ವಂತಿಗೆಯನ್ನು ಸಲ್ಲಿಸಿದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಆಚಾರ ಹಾಲಪ್ಪ ಅವರ ಮೂಲಕ ವಂತಿಗೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ವಿ ಮುನಿರಾಜು, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಸೇರಿದಂತೆ ವಿವಿಧ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕೊರೊನಾ ಪೀಡಿತರ ಸಹಾಯಾರ್ಥವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ಲಕ್ಷ ರೂಪಾಯಿ ವಂತಿಗೆ ಸಲ್ಲಿಸಿದ ವಿವಿಧ ಸ್ವಯಂ ಸಂಸ್ಥೆಗಳ ಪದಾಧಿಕಾರಿಗಳಿಗೆ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ವಿ ಮುನಿರಾಜು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.///