Belagavi News In Kannada | News Belgaum

ಇಂದು ಬೆಳಗಾವಿ ವಿಧಾನಸೌಧದಲ್ಲಿ ನಡೆದ ಚರ್ಚೆಗಳ ಸುದ್ದಿ

ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ
ಗ್ರಾಮೀಣ ಪ್ರದೇಶ:18,71,691 ವಸತಿ ರಹಿತರು,7,19,190 ನಿವೇಶನ ರಹಿತರು!


ಬೆಳಗಾವಿ ಸುವರ್ಣಸೌಧ,ಡಿ.22: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 2018ರಲ್ಲಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಸಮೀಕ್ಷೆಯಲ್ಲಿ 18,71,691 ವಸತಿರಹಿತರು ಹಾಗೂ 7,19,190 ನಿವೇಶನರಹಿತರಿರುವ ಮಾಹಿತಿ ಲಭ್ಯವಾಗಿದೆ.

ಅದೇ ರೀತಿ ನಗರದಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೈಗೊಂಡ ಸಮೀಕ್ಷೆ ಅನುಸಾರ 1,41,5,121 ಮನೆಗಳಿಗೆ ಬೇಡಿಕೆ ಇರುವುದು ಕಂಡುಬಂದಿದೆ. ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 89219 ವಸತಿ ರಹಿತರು ಹಾಗೂ 4347 ನಿವೇಶನರಹಿತರು ಕಂಡುಬಂದಿದ್ದಾರೆ. ನಗರ ಪ್ರದೇಶದಲ್ಲಿ ಇದೇ ಜಿಲ್ಲೆಯಲ್ಲಿ 21409 ವಸತಿ ರಹಿತರು ಮತ್ತು 25533 ನಿವೇಶನರಹಿತರಿದ್ದಾರೆ ಎಂಬ ಮಾಹಿತಿಯನ್ನು ವಸತಿ ಸಚಿವ ವಿ.ಸೋಮಣ್ಣ ಅವರು ವಿಧಾನಪರಿಷತ್‍ನಲ್ಲಿ ಬಿಚ್ಚಿಟ್ಟರು.
ಸದಸ್ಯ ವಿಜಯಸಿಂಗ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಸಾಲಿಗೆ ವಿವಿಧ ವಸತಿ ಯೋಜನೆಗಳಡಿ 5ಲಕ್ಷ ಹೊಸ ಮನೆಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶಕ್ಕೆ 4ಲಕ್ಷ ಮತ್ತು ನಗರ ಪ್ರದೇಶಕ್ಕೆ 1ಲಕ್ಷ ಮನೆಗಳ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅರ್ಹ ಫಲಾನುಭವಿಗಳ ಆಯ್ಕೆಗೆ ಸೂಚನೆ ನೀಡಲಾಗಿದ್ದು, ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಂದರೇ 2018-19ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ವಸತಿ ಯೋಜನೆಗಳಡಿ 18875 ಮನೆಗಳನ್ನು ಮಂಜೂರು ಮಾಡಿದ್ದು, ಈ ಪೈಕಿ 16057 ಫಲಾನುಭವಿಗಳನ್ನು ಆಯ್ಕೆಗೊಳಿಸಿ ಕಾಮಗಾರಿ ಆದೇಶಪತ್ರ ನೀಡಲಾಗಿದೆ ಎಂದರು.///

ಕಡಿಮೆ ದರ ನಮೂದಿಸಿ ಅರ್ಹರಾದ ಗುತ್ತಿಗೆದಾರರಿಂದ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್
ಗುತ್ತಿಗೆ ಕಾಮಗಾರಿಗಳಲ್ಲಿ 50ಲಕ್ಷ ರೂ.ಮೀಸಲಾತಿ ಸಮರ್ಪಕ ಜಾರಿ:
-ಸಚಿವ ಸಿ.ಸಿ.ಪಾಟೀಲ್

ಬೆಳಗಾವಿ ಸುವರ್ಣಸೌಧ,ಡಿ.22 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಲೋಕೋಪಯೋಗಿ ಗುತ್ತಿಗೆ ಕಾಮಗಾರಿಗಳಲ್ಲಿ ಕಲ್ಪಿಸಲಾಗಿರುವ 50ಲಕ್ಷ ರೂ.ಗಳ ಮೀಸಲಾತಿಯು ರ್ಯಾಂಡಮೈಸೆಶನ್ ಮೂಲಕ ಸಮರ್ಪಕವಾಗಿ ಜಾರಿಯಲ್ಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಪರಿಷತ್‍ನಲ್ಲಿ ಸದಸ್ಯ ಆರ್.ಬಿ.ತಿಮ್ಮಾಪುರ ಅವರ ಪ್ರಶ್ನೆಗೆ ಉತ್ತರಿಸಿದರು.
ಇದಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಯಾವುದೇ ರೀತಿಯ ದೂರುಗಳು ಸ್ವಿಕೃತವಾಗಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಪಾಟೀಲ್ ಅವರು ರೂ.50ಲಕ್ಷದಿಂದವರೆಗಿನ ಟೆಂಡರ್ ಮೀಸಲಾತಿಯನ್ನು ರೂ.1 ಕೋಟಿವರೆಗೆ ವಿಸ್ತರಿಸುವ ಪ್ರಸ್ತಾವನೆ ಸರಕಾರದ ಮುಂದಿರುವುದಿಲ್ಲ ಎಂದು ಅವರು ತಿಳಿಸಿದರು.
*ಕಡಿಮೆ ದರ ನಮೂದಿಸಿ ಅರ್ಹರಾದ ಗುತ್ತಿಗೆದಾರರಿಂದ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್:ತಾಂತ್ರಿಕವಾಗಿ ಅರ್ಹಗೊಂಡು ಅತಿಕಡಿಮೆ ದರಗಳನ್ನು ನಮೂಸಿದ ಗುತ್ತಿಗೆದಾರರಿಂದ ದರಪಟ್ಟಿ ದರಗಳಿಗಿಂತ ಕಡಿಮೆಯಿರುವ ಮೊತ್ತಕ್ಕೆ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಪಡೆದುಕೊಂಡು ಗುತ್ತಿಗೆ ಕರಾರನ್ನು ಮಾಡಿಕೊಳ್ಳಲಾಗುತ್ತದೆ ಎಂದು ಸಚಿವ ಪಾಟೀಲ್ ಅವರು ಎನ್.ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.
ಈ ಗುತ್ತಿಗೆದಾರರು ವಿಶಿಷ್ಟ ವಿವರಣೆಯ ಹಾಗೂ ಗುತ್ತಿಗೆ ಕರಾರಿನ ನಿಯಮಾವಳಿಯಂತೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಮೊತ್ತವನ್ನು ಗುತ್ತಿಗೆದಾರರಿಗೆ ಹಿಂತುರಿಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕೆಲವು ಪ್ರಕರಣಗಳಲ್ಲಿ ಗುತ್ತಿಗೆದಾರರು ಶೇ.30ರವರೆಗೂ ಕಡಿಮೆ ಬಿಡ್ ಮಾಡಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಲೋಕೋಪಯೋಗಿ ಇಲಾಖೆಯಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಗುಣನಿಯಂತ್ರಣ ಮಾನದಂಡಗಳಿಗನುಸಾರವಾಗಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಿ ಕಾಮಗಾರಿಯನ್ನು ಸಮರ್ಪಕವಾಗಿ ಉತ್ತಮ ಗುಣಮಟ್ಟದೊಂದಿಗೆ ನಿರ್ವಹಿಸಲಾಗುತ್ತದೆ. ಇದಕ್ಕಾಗಿ ಇಲಾಖೆಯಲ್ಲಿ ಮುಖ್ಯ ಎಂಜನಿಯರ್ ವೃಂದದ ಅಧಿಕಾರಿಯ ನೇತೃತ್ವದಲ್ಲಿ ಗುಣನಿಯಂತ್ರಣ ವಲಯ ಸ್ಥಾಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
*ಚಾಮುಂಡಿ ಬೆಟ್ಟದಲ್ಲಿ ರಸ್ತೆ ಮತ್ತು ಭೂಕುಸಿತ; ರೂ.996ಲಕ್ಷಗಳ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾಮಗಾರಿ: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇತ್ತೀಚೆಗೆ ಮೂರು ಭಾರಿ ರಸ್ತೆ ಮತ್ತು ಭೂಕುಸಿತವಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಭೂ ಕುಸಿತ ಸಂಬಂಧ ಪರಿಶೀಲಿಸಲು ತಜ್ಞರ ಸಮಿತಿ ನೇಮಕ ಮಾಡಿರುವುದಿಲ್ಲ.ಅದಾಗ್ಯೂ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಿಂದ ಪರಿಶೀಲಿಸಿ ವರದಿ ಪಡೆಯಲಾಗಿದೆ ಎಂದರು.
ಭೂ ಕುಸಿತ ತಡೆಗಟ್ಟಲು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ವರದಿಯಂತೆ ರೇಇನ್ಪೋರ್ಸಡ್ ಅರ್ಥ್ ಸ್ಟೀಪೆನೆಡ್ ಸ್ಲೋಪ್ ಸ್ಟಚರ್ಸ್ ವಾಲ್ ನಿರ್ಮಾಣ ಮಾಡುವಂತೆ ಶಿಫಾರಸ್ಸು ಮಾಡಿದ್ದು, ಅದರಂತೆ ರಸ್ತೆ ದುರಸ್ತಿಗೊಳಿಸಲು ರೂ.996ಲಕ್ಷಗಳ ತಗಲಬಹುದೆಂದು ಅಂದಾಜಿಸಲಾಗಿದೆ. ಅದರನ್ವಯ ಪ್ರಸ್ತಾವನೆ ತಯಾರಿಸಿದ್ದು,ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಕ್ರಮವಹಿಸಲಾಗುವುದು ಎಂದರು.
ಭಾರಿ ಮಳೆಯಿಂದ ಹಾಳಾದ ರಸ್ತೆ ಮತ್ತು ಸೇತುವೆಗಳ ದುರಸ್ತಿಗಾಗಿ ರೂ.310 ಕೋಟಿ ಹಂಚಿಕೆ ಮಾಡಲಾಗಿದೆ ಎಂದರು.///

ಆಯುಷ್ ವಿವಿ ವಿಧೇಯಕ ಸೇರಿ 08 ವಿಧೇಯಕಗಳಿಗೆ
ವಿಧಾನ ಪರಿಷತ್‍ನಲ್ಲಿ ಅಂಗೀಕಾರ

Éಳಗಾವಿ ಸುವರ್ಣಸೌಧ,ಡಿ.22  : ವಿಧಾನಪರಿಷತ್‍ನಲ್ಲಿ ಬುಧವಾರ ಎಂಟು ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ.
ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ವಿಧೇಯಕಗಳನ್ನು ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಅವರು ಸಭೆಯ ಮುಂದಿಟ್ಟರು.
ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು(ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ವಿಧೇಯಕ, ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ,ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ, ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ಎರಡನೇ ತಿದ್ದುಪಡಿ)ವಿಧೇಯಕ, ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ವಿಧೇಯಕಗಳ ಕುರಿತು ಸದನದಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಸದಸ್ಯರು ಹಾಗೂ ಸಚಿವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಮಂಡಿಸಲಾದ ಎಂಟು ವಿಧೇಯಕಗಳಿಗೆ ಸದನವು ಅಂಗೀಕರಿಸಿತು.///

 

ಕಿರುಕುಳ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
6.64ಲಕ್ಷ ಹೆಕ್ಟೇರ್ ಜಮೀನು ಕಂದಾಯ ಇಲಾಖೆಗೆ ವಾಪಸ್:ಸಚಿವ ಅಶೋಕ

ಬೆಳಗಾವಿ ಸುವರ್ಣಸೌಧ,ಡಿ.22  : ರಾಜ್ಯದಲ್ಲಿ 10.12ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು,ಅದರಲ್ಲಿ 6.64ಲಕ್ಷ ಹೆಕ್ಟೇರ್ ಜಮೀನನ್ನು ಕಂದಾಯ ಇಲಾಖೆಗೆ ವಾಪಸ್ ನೀಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದ್ದು ಶೀಘ್ರ ಅದನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಅವರು ತಿಳಿಸಿದರು.
ವಿಧಾನಪರಿಷತ್‍ನಲ್ಲಿ ಸದಸ್ಯ ಪ್ರತಾಪ್‍ಚಂದ್ರಶೆಟ್ಟಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಡೀಮ್ಡ್ ಫಾರೆಸ್ಟ್ ಎಂಬುದೇ ಅವೈಜ್ಞಾನಿಕ. ಸರಕಾರಿ ಜಮೀನು ಯಾವ್ಯಾವ ಮತ್ತು ಎಲ್ಲೆಲ್ಲಿ ಇದೆಯೋ ಅದನ್ನೆಲ್ಲಾ ಅರಣ್ಯ ಇಲಾಖೆಯದ್ದು ಅಂತ ಜಿಲ್ಲಾಧಿಕಾರಿಗಳು ಬರೆದುಹೋಗಿದ್ದೇ ದೊಡ್ಡ ಸಮಸ್ಯೆಯಾಗಿದೆ. 10.12ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್‍ನಲ್ಲಿ ರೈತರು ವ್ಯವಸಾಯ ಮಾಡ್ತಾ ಇದ್ದಾರೆ;ಅದನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ಆಗ್ತಿಲ್ಲ. ಕಳೆದ ಆರೆಳು ತಿಂಗಳಿಂದ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಭೆ ನಡೆಸಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು 6.64ಲಕ್ಷ ಹೆಕ್ಟೇರ್ ಜಮೀನು ಪ್ರದೇಶವನ್ನು ವಾಪಸ್ ನೀಡಲು ಒಪ್ಪಿಕೊಂಡಿದ್ದಾರೆ.ಅದನ್ನು ಪಡೆದುಕೊಂಡು ವ್ಯವಸಾಯ ಮಾಡುತ್ತಿರುವವರಿಗೆ ಮತ್ತು ಮನೆಕಟ್ಟಿಕೊಂಡವರಿಗೆ ನೀಡಲಾಗುವುದು ಎಂದು ಅವರು ವಿವರಿಸಿದರು.
ವ್ಯವಸಾಯ ಮಾಡುತ್ತಿರುವವರಿಗೆ ಮತ್ತು ಮನೆಕಟ್ಟಿಕೊಂಡವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ದೂರುಗಳು ಎಲ್ಲಿಯೂ ಕೇಳಿಬಂದಿಲ್ಲ;ಆದ್ರೂ ಆ ರೀತಿ ಕೇಳಿಬಂದಲ್ಲಿ ಕಿರುಕುಳ ನೀಡದಂತೆ ಕಟ್ಟುನಿಟ್ಟಿನ ಸೂಚನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿರುವ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಭೌತಿಕ ಸ್ಥಳ ಪರಿಶೀಲಿಸಿ ಸಿದ್ದಪಡಿಸಿ ವರದಿಯಂತೆ ಉಡುಪಿ ಜಿಲ್ಲೆಯಲ್ಲಿ 68,794.76 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಇದ್ದು, ಈ ಪೈಕಿ 34,918.20 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ವಿರಹಿತಗೊಳಿಸಲು ಜಿಲ್ಲಾ ಸಮಿತಿಯಿಂದ ರಾಜ್ಯ ಸಮಿತಿಗೆ ವರದಿ ಸಲ್ಲಿಸಲಾಗಿದೆ ಎಂದು ವಿವರಿಸಿದ ಸಚಿವ ಅಶೋಕ ಅವರು ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿ ಸೇರಿರುವ ಜಮೀನುಗಳ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣವು ಇತ್ಯರ್ಥವಾದ ನಂತರ ನಿಯಮಾನುಸಾರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.///

ಕೊಡಗು ಜಿಲ್ಲೆ ಪಹಣಿಯಲ್ಲಿ ಬಹುವಾರ್ಷಿಕ ಬೆಳೆ ನಮೂದಿಸಲು ಕ್ರಮ

ಬೆಳಗಾವಿ ಸುವರ್ಣಸೌಧ,ಡಿ.22: ಕೊಡಗು ಜಿಲ್ಲೆಯಲ್ಲಿ ಆರ್‍ಟಿಸಿಯ ಬೆಳೆಕಾಲಂನಲ್ಲಿ ಬಹುವಾರ್ಷಿಕ ವಾಣಿಜ್ಯ ಬೆಳೆಗಳನ್ನು ನಮೂದಿಸಲು ಕ್ರಮಕೈಗೊಳ್ಳಲಾಗುವುದು. ಈ ಸಮಸ್ಯೆ ಗಮನಕ್ಕಿದ್ದು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯೆ ವೀಣಾ ಅಚ್ಚಯ್ಯ ಅವರು ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಮತ್ತು ಕೊಡಗು ಜಿಲ್ಲೆಯಲ್ಲಿ ವಿಶೇಷವೆಂದು ಪರಿಗಣಿಸಿ ಪಹಣಿಯ ಬೆಳೆಕಾಲಂನಲ್ಲಿ ಬಹುವಾರ್ಷಿಕ ವಾಣಿಜ್ಯ ಬೆಳೆಗಳನ್ನು ನಮೂದಿಸಲು ಕ್ರಮವಹಿಸಲಾಗುವುದು ಎಂದರು.
ಸದಸ್ಯೆ ವೀಣಾ ಅವರು ಕೊಡಗು ಜಿಲ್ಲೆಯಲ್ಲಿ ಪಹಣಿಯಲ್ಲಿ ಬೆಳೆಕಾಲಂನಲ್ಲಿ ಬಹುವಾರ್ಷಿಕ ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ಕರಿಮೆಣಸುಗಳು ವರ್ಷದ 365 ದಿನವೂ ನಮೂದಾಗಿರುವ ಬದಲು 3 ತಿಂಗಳು ಅಥವಾ 06 ತಿಂಗಳಿಗೊಮ್ಮೆ ಪ್ರಸ್ತುತ ನಮೂದಿಸಲಾಗುತ್ತಿರುವುದರಿಂದ ಬೆಳೆಗಾರರಿಗೆ ಸಾಲಸೌಲಭ್ಯ ಸೇರಿದಂತೆ ಇನ್ನೀತರ ಸೌಲಭ್ಯಗಳನ್ನು ಪಡೆದುಕೊಳ್ಳಲು ತೊಂದರೆಯಾಗುತ್ತಿದೆ ಎಂದು ಸದನದಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಸಚಿವರು ಉತ್ತರಿಸಿದರು.///

ಕೈಲಾಸ-ಮಾನಸ ಸರೋವರ ಯಾತ್ರಾರ್ಥಿಗಳ ಸಹಾಯಧನ ಹೆಚ್ಚಳಕ್ಕೆ ಕ್ರಮ
ದಾನಿಗಳ ನೆರವಿನಿಂದ ಸಿ ವರ್ಗದ ದೇವಸ್ಥಾನಗಳ ಅಭಿವೃದ್ಧಿ: ಸಚಿವೆ ಜೊಲ್ಲೆ

ಬೆಳಗಾವಿ ಸುವರ್ಣಸೌಧ,ಡಿ.22  : ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಿ ವರ್ಗದ ದೇವಸ್ಥಾನಗಳನ್ನು ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸಲಾಗುವುದು ಎಂದು ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯೆ ಡಾ.ತೇಜಸ್ವಿನಿಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ವಾರ್ಷಿಕ ವರಮಾನದ ಆಧಾರದ ಮೇರೆಗೆ ಎ,ಬಿ,ಸಿ ವರ್ಗದ ದೇವಸ್ಥಾನಗಳೆಂದು ಗುರುತಿಸಲಾಗಿದ್ದು, ರಾಜ್ಯದಲ್ಲಿ ಕಡಿಮೆ ವಾರ್ಷಿಕ ವರಮಾನ ಇರುವ ದೇವಸ್ಥಾನಗಳ ಸಂಖ್ಯೆಯೇ 34219 ಇವೆ. ಈ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ದಾನಿಗಳ ನೆರವು ಸಹ ಕೋರಲಾಗಿದೆ. ದಾನಿಗಳು ಮುಂದೆ ಬಂದಲ್ಲಿ ಅವರಿಗೆ ನಿಯಾಮನುಸಾರ ಅನುಮತಿ ನೀಡಲಾಗುವುದು. ಅವಶ್ಯಕತೆ ಕಂಡುಬಂದಂತಹ ಅಧಿಸೂಚಿತ ದೇವಸ್ಥಾನಗಳಿಗೆ ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದಲೂ ಸಹ ಧನ ಸಹಾಯ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಪ್ರಸ್ತುತ ಸರಕಾರದಿಂದ ವಾರ್ಷಿಕ ರೂ.48 ಸಾವಿರ ರೂ.ಗಳನ್ನು ತಸ್ತೀಕ್/ವರ್ಷಾಶನವನ್ನು ದೇವಾಲಯಗಳಲ್ಲಿ ಪ್ರತಿನಿತ್ಯ ಪೂಜೆ ಕೈಂಕರ್ಯಗಳನ್ನು ನೆರವೇರಿಸುವುದಕ್ಕೆ ಒದಗಿಸಲಾಗುತ್ತಿದ್ದು, ಇದನ್ನು ಹೆಚ್ಚಿಸುವುದಕ್ಕೆ ಉದ್ದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯದಿಂದ ಹಿಮಾಲಯದ ಗಿರಿ ಶಿಖರಗಳಲ್ಲಿರುವ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ.30 ಸಾವಿರಗಳಂತೆ ಸರಕಾರದ ಸಹಾಯಧನ ವಿತರಿಸಲಾಗುತ್ತಿದ್ದು,ಅದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚಿಸಲು ಕ್ರಮವಹಿಸಲಾಗುವುದು. ಕಾóಶಿಯಾತ್ರೆ ಕೈಗೊಳ್ಳಲು ಸಹಾಯಧನ ನೀಡುವುದರ ಬಗ್ಗೆ ಪ್ರಸ್ತಾವನೆ ಇರುವುದಿಲ್ಲ ಎಂದು ಸ್ಪಷ್ಡಪಡಿಸಿದ ಸಚಿವೆ ಜೊಲ್ಲೆ ಅವರು ಕಾಶಿಗೆ ವಿಶೇಷ ರೈಲು ಓಡಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.///

ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ
ವಸತಿ ಯೋಜನೆಗಳಿಗಾಗಿ 530 ಎಕರೆ ಜಮೀನು ನೀಡಿಕೆ:ಸಚಿವ ಅಶೋಕ

ಬೆಳಗಾವಿ ಸುವರ್ಣಸೌಧ,ಡಿ.22  : ವಸತಿ ಯೋಜನೆಗಳಿಗಾಗಿ 530 ಎಕರೆ ಜಾಗವನ್ನು ವಸತಿ ಇಲಾಖೆಗೆ ಕಂದಾಯ ಇಲಾಖೆ ವತಿಯಿಂದ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ತಿಳಿಸಿದರು.

ಪರಿಷತ್‍ನಲ್ಲಿ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಒಟ್ಟು 14,27,195 ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದ್ದು,ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಅದರಂತೆ ಎಲ್ಲ ಜಿಲ್ಲಾಧಿಕಾರಿಗಳು ಕಾಲಬದ್ಧ ಕ್ರಿಯಾಯೋಜನೆ ಸಿದ್ದಪಡಿಸಿಕೊಂಡಿದ್ದು,ಒತ್ತುವರಿ ಆಗಿರುವ ಸರಕಾರಿ ಜಮೀನುಗಳನ್ನ ತೆರವುಗೊಳಿಸಲು ಕ್ರಮವಹಿಸುತ್ತಿದ್ದಾರೆ ಎಂದು ವಿವರಿಸಿದ ಅವರು ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ;ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ 1939672-21.09 ಎಕರೆ/ಗುಂಟೆ ಗೋಮಾಳ ಜಮೀನು ಇರುವುದನ್ನು ಸದನಕ್ಕೆ ತಿಳಿಸಿದರು.///