Belagavi News In Kannada | News Belgaum

“ಗ್ರಂಥಾಲಯಗಳು ಜ್ಞಾನದೇಗುಲಗಳು”- ಡಾ|| ಸತೀಶಕುಮಾರ ಹೊಸಮನಿ

“ಗ್ರಂಥಾಲಯಗಳು ಜ್ಞಾನದೇಗುಲಗಳು”- ಡಾ|| ಸತೀಶಕುಮಾರ ಹೊಸಮನಿ  ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ನೋಂದಣಿ ಅಭೀಯಾನ ಹಾಗೂ ಓದುಗರೊಂದಿಗೆ ಸಂವಾದ ಕಾರ್ಯಕ್ರಮ
ಗ್ರಂಥಾಲಯಗಳು ಜ್ಞಾನದ ದೇಗುಲಗಳು, ಅದರಲ್ಲಿಯೂ ಸಾರ್ವಜನಿಕ ಗ್ರಂಥಾಲಯಗಳು ಶ್ರೀ ಸಾಮಾನ್ಯನ ವಿಶ್ವವಿದ್ಯಾಲಯಗಳು, ಓದುಗರು ಇವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ|| ಸತೀಶಕುಮಾರ ಹೊಸಮನಿ ಅವರು ಹೇಳಿದರು.

 

ಅವರು ಇತ್ತೀಚಿಗೆ ನಗರ ಕೇಂದ್ರ ಗ್ರಂಥಾಲಯದಲ್ಲಿ ಓದುಗರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತ, “ಡಿಜಿಟಲ್ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ” ಇದು ಒಂದು ಕ್ರಾಂತಿಕಾರಿ ಬದಲಾವಣೆ, ಬರಿ ಒಂದೂವರೆ ವರ್ಷದಲ್ಲಿ 2 ಕೋಟಿ 12 ಲಕ್ಷ ಜನ ಓದುಗರು ನೋಂದಣಿಯ ಇ-ಕಂಟೇಟ್‍ಗಳ ಉಪಯೋಗವನ್ನು ಪಡೆಯುತ್ತಿದ್ದಾರೆ.

 

ಇದರಲ್ಲಿರುವ ಮಾಹಿತಿ ಕಣಜವನ್ನು ತಾವೇಲ್ಲರೂ ಬಳಸಿಕೊಂಡು ಯಶಸ್ವಿಯಾಗಬೇಕೆಂದು ಅವರು ಕರೆ ನೀಡಿದರು.
ಡಿಜಿಟಲ್ ಕರ್ನಾಟಕ ಸಾರ್ವಜನಿಕ ಗ್ರಂಥಾಲಯದ ಆಪ್‍ನ್ನು ಸಾರ್ವಜನಿಕರು ಬಳಸಿಕೊಂಡು, ಉಚಿತವಾಗಿ ನೋಂದಣಿಯಾಗಿ ಇದರಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು, ಕಥೆ, ಕಾದಂಬರಿ, ಮಕ್ಕಳ ಓದುವಿಕೆಯ ವಿಶೇಷ ಪುಸ್ತಕಗಳು, ವಿಡಿಯೋಗಳು ಇವುಗಳ ಪ್ರಯೋಜನ ಪಡೆಯಬೇಕೆಂದು ಕರೆನೀಡಿದರು. ಈ ಪೋರ್ಟಲ್ ದೇಶದಲ್ಲಿಯೇ ಅತ್ಯಂತ ಪ್ರಸಿದ್ದ ಮತ್ತು ಉತ್ತಮವಾದದ್ದಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಉಪನಿರ್ದೇಶಕರಾದ ರಾಮಯ್ಯ ಅವರು ಮಾತನಾಡುತ್ತ, ಅಂಗೈಯಲ್ಲಿ ಸಾರ್ವಜನಿಕ ಗ್ರಂಥಾಲಯ ಬಂದಿರುತ್ತದೆ. ಸಾರ್ವಜನಿಕರು ಹೆಚ್ಚೆಚ್ಚು ಇದರ ಪ್ರಯೋಜನ ಪಡೆಯಬೇಕೆಂದು ಅವರು ಕರೆ ನೀಡಿದರು. ನಗರ ಮತ್ತು ಜಿಲ್ಲೆಯ ಗ್ರಾಮ ಪಂಚಾಯತಿ ಗ್ರಂಥಾಲಯಗಳು ಓದುಗ ಸ್ನೇಹಿವಾಗಿದ್ದು, ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ನಿರ್ದೇಶಕರು ನಗರದ ಮಹಾಂತೇಶನಗರ, ರಾಮತೀರ್ಥನಗರ, ಕಣಬರ್ಗಿ, ಮಾರುತಿಗಲ್ಲಿ, ಕೋನವಾಳಗಲ್ಲಿ, ಶಹಾಪೂರ, ಹಿಂದವಾಡಿ, ಮಜಗಾಂವ, ಮಚ್ಛೆ ಮತ್ತು ಪೀರನವಾಡಿ ಶಾಖೆ ಮತ್ತು ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಓದುಗರೊಂದಿಗೆ ಸಂವಾದ ನಡೆಸಿದರು. ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಮೆಚ್ಚುಗೆ ಸೂಚಿಸಿ, ಸಲಹೆ ಸೂಚನೆಗಳನ್ನು ನೀಡಿದರು. ಅದೇ ರೀತಿ ಖಾನಾಪೂರ ತಾಲೂಕಿನ ಹಲಸಿ, ಬೀಡಿ, ನಂದಗಡ ಗ್ರಾಮ ಪಂಚಾಯತ ಗ್ರಂಥಾಲಯಗಳು ಮತ್ತು ಖಾನಾಪೂರ ತಾಲೂಕಾ ಗ್ರಂಥಾಲಯಗಳಿಗೂ ಭೇಟಿ ನೀಡಿ ಖುಷಿ ವ್ಯಕ್ತಪಡಿಸಿದರು. ಅದರಲ್ಲೂ ಬೀಡಿ ಮತ್ತು ನಂದಗಡ ಗ್ರಾಮ ಪಂಚಾಯತಿಯ ಅತ್ಯಾಧುನಿಕ ಸೌಕರ್ಯಗಳು, ಕಟ್ಟಡ ಹೊರಾಂಗಣ ಓದುವ ಸ್ಥಳ ಮತ್ತು ಡಿಜಿಟಲ್ ಗ್ರಂಥಾಲಯಗಳ ಸೌಲಭ್ಯವನ್ನು ನೋಡಿ ಬಹಳ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು.

ಪುಟಾಣಿ ಮಕ್ಕಳೊಡನೆ ಮಾತುಕತೆ ನಡೆಸಿ ಅವರ ಹವ್ಯಾಸ ಮತ್ತು ವಿದ್ಯಾಭ್ಯಾಸ ಬಗ್ಗೆ ಕೇಳುತ್ತ ನೀವೆಲ್ಲರೂ ಉತ್ತಮವಾಗಿ ಓದಿ, ಇಲ್ಲಿರುವ ಪುಸ್ತಕ ಮತ್ತು ಕಂಪ್ಯೂಟರ್‍ಗಳ ಪ್ರಯೋಜನ ಪಡೆಯಬೇಕು, ಮತ್ತು ಸಿಬ್ಬಂದಿಗಳು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಅಭೂತಪೂರ್ವ ಬದಲಾವಣೆ ತಂದು ಡಿಜಿಟಲ್ ಕ್ರಾಂತಿಯನ್ನು ಮಾಡಿರುವ ಡಾ|| ಸತೀಶಕುಮಾರ ಹೊಸಮನಿಯವರ ಗ್ರಂಥಾಲಯಗಳ ಭೇಟಿಯಿಂದ ಜಿಲ್ಲೆಯ ಓದುಗರು, ಅದರಲ್ಲೂ ವಿದ್ಯಾರ್ಥಿಗಳು, ಪುಟಾಣಿಗಳ ಮತ್ತು ಅಧಿಕಾರಿ, ಸಿಬ್ಬಂದಿಗಳು ಪುಳಕಿತರಾಗಿದ್ದಾರೆ ಎಂದರೆ ಅತಿಶೀಯೋಕ್ತಿಯಾಗಲಾರದು.

ಅವರೊಂದಿಗೆ ಅಧಿಕ್ಷಕರಾದ ಶ್ರೀ.ಎ.ಎ.ಕಾಂಬಳೆ, ಪ್ರಕಾಶ ಇಚಲಕರಂಜಿ, ಅಂಬೇಕರ, ಹಣ್ಣಿಕೇರಿ, ಸುಮೀತ ಕಾವಳೆ, ಜೋಡಳ್ಳಿ, ನೀಲಮ್ಮಾ ಪಟ್ಟೇದ್, ಅಣ್ಣಪೂರ್ಣ ನಾವಿ, ಶೋಭಾ ಸವದಿ, ಪುಷ್ಪಾ ಮುದರೇಡ್ಡಿ, ಜಯಶ್ರೀ ಮತ್ತಿತರರು ಹಾಜರಿದ್ದರು.