Belagavi News In Kannada | News Belgaum

ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ ಮಾಡಿರುವದನ್ನು ಪ್ರತಿಭಟಿಸಿ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಶೇಡಬಾಳ:: : ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ ಮಾಡಿರುವದನ್ನು ಪ್ರತಿಭಟಿಸಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯ ಕಾಗವಾಡ ಸಮೀಪ ಮಹಾರಾಷ್ಟ್ರದ ಗಡಿಯೊಳಗೆ ಮಿರಜ ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕೆಲವು ಗಂಟೆಗಳ ಕಾಲ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.


ಬುಧವಾರ ದಿ 22 ರಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಮಿರಜ ನಗರಗಳ ಶಿವಸೇನಾ ಕಾರ್ಯಕರ್ತರು ಗಡಿಗೆ ಬಂದು ತಮ್ಮ ಪ್ರತಿಭಟನೆಯನ್ನು ಕೈಗೊಂಡಿದ್ದರು. ಮೊದಲೇ ಗೊತ್ತಿದ್ದ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೋಲಿಸ್‍ರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಯಾವುದೇ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

ಮಹಾರಾಷ್ಟ್ರದ ಹದ್ದಿಯಲ್ಲಿ ಮಿರಜ ಶಿವಸೇನಾ ಅಧ್ಯಕ್ಷ ಚಂದ್ರಕಾಂತ ಮೈಗುರ, ವಿಶಾಲಸಿಂಗ್ ರಜಪೂತ, ಕಿರಣಸಿಂಗ್ ರಜಪೂತ ಮೊದಲಾದವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕರ್ನಾಟಕ ಧ್ವಜಕ್ಕೆ ಬೆಂಕಿ ಹಚ್ಚಿ ಕರ್ನಾಟಕ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಮಾತನಾಡಿದರು.

ಚಂದ್ರಕಾಂತ ಮೈಗುರ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಹಿಂದುತ್ವ ರಕ್ಷಣೆಗಾಗಿ ಹೋರಾಡಿದ ಮಹಾನ್ ರಾಷ್ಟ್ರ ಪುರಷರಾಗಿದ್ದಾರೆ. ಅಂತಹ ರಾಷ್ಟ್ರ ಪುರುಷನಿಗೆ ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಅವಮಾನ ಎಸಗಿರುವುದು ಖಂಡನೀಯವಾಗಿದೆ ಎಂದು ಆರೋಪಿಸಿದರು. ಈ ಪ್ರತಿಭಟನೆಯಲ್ಲಿ ಮಿರಜ ಶಿವಸೇನಾ ಅಧ್ಯಕ್ಷ ಚಂದ್ರಕಾಂತ ಮೈಗುರ, ವಿಶಾಲಸಿಂಗ್ ರಜಪೂತ, ಕಿರಣಸಿಂಗ್ ರಜಪೂತ, ಸುಜಾತಾ ಇಂಗಳೆ, ರುಕ್ಮಿಣಿ ಅಂಬಿಗೇರ ಸೇರಿದಂತೆ ಅನೇಕ ಶಿವಸೇನಾ ಕಾರ್ಯಕರ್ತರು ಇದ್ದರು.

ಮಹಾರಾಷ್ಟ್ರದ ಗಡಿಯಲ್ಲಿ ಶಿವಸೇನಾ ಪುಂಡರು ಪ್ರತಿಭಟನೆ ಕೈಗೊಳ್ಳುತ್ತಿದ್ದಂತೆ ಮುಯ್ಯಿಗೆ ಮುಯ್ಯಿ, ಉತ್ತರಕ್ಕೆ ಪ್ರತ್ತ್ಯೂತ್ತರ ಎನ್ನುವಂತೆ ಇತ್ತ ಕರ್ನಾಟಕದ ಹದ್ದಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು. ಶಿವಸೇನಾ ಪುಂಡರು ಕರ್ನಾಟಕದ ಗಡಿ ಪ್ರವೇಶಿಸಿದರೇ ತಕ್ಕ ಉತ್ತರ ನೀಡುವುದಾಗಿ ಕರವೇ ಕಾರ್ಯಕರ್ತರು ಹೇಳಿದರು.

 

ಈ ವೇಳೆ ಕಾಗವಾಡ ತಾಲೂಕಾಧ್ಯಕ್ಷ ಸಿದ್ದು ವಡೇಯರ, ಶಿವಾನಂದ ನವನ್ಯಾಳ, ಗಣೇಶ ಕೋಳೆಕರ, ಪಾರುಕ ಅಲಾಸ್ಕರ, ಅಮೀತ ಗಣೆ, ದಯಾನಂದ ಕೊಳಲಗಿ, ಮಹಾಂತೇಶ ಬಡಿಗೇರ, ಮುಜಬ ಮುಲ್ಲಾ, ಅಜಯ ಪಾಟೀಲ, ದಾದಾ ಮಗದುಮ, ರೋಹಣ ಅರವಾಡೆ, ಮುಜಬ ಜಮಾದಾರ, ಸಂದೇಶ ಅಲಾಸೆ, ಸೌರಭ ಕೋಳಿ, ಸೊಯಭ ಮುಲ್ಲಾ ಸೇರಿದಂತೆ ಅನೇಕರು ಇದ್ದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಕಾಗವಾಡ ಗಡಿಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೋಲಿಸ್‍ರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿ ಅಹಿತಕರ ಘಟನೆಯಾಗದಂತೆ ಎಚ್ಚರಿಕೆ ವಹಿಸಿದರು.
ಕರ್ನಾಟಕ ಅಥಣಿ ಡಿವಾಯ್‍ಎಸ್‍ಪಿ ಗೀರೀಶ ಹಾಗೂ ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್‍ಐ ಬಿ.ಎಂ.ರಬಕವಿ ಕರ್ನಾಟಕದ ಪಾಸಿಂಗ್ ಹೊಂದಿದ ವಾಹನಗಳನ್ನು ಮಹಾರಾಷ್ಟ್ರಕ್ಕೆ ಹೋಗದಂತೆ ತಡೆದು ಮರಳಿ ಕರ್ನಾಟಕಕ್ಕೆ ಕಳುಹಿಸಿದ ಘಟನೆ ಜರುಗಿತು.

 

ಅದೇ ರೀತಿ ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ಕರ್ನಾಟಕ ಪ್ರವೇಶಿಸದಂತೆ ಪೋಲಿಸ್‍ರು ಎಚ್ಚರಿಕೆ ವಹಿಸಿದರು. ಒಟ್ಟಿನಲ್ಲಿ ಈ ಘಟನೆಯಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ಪ್ರಯಾಣೀಕರು ಸಾಕಷ್ಟು ತೊಂದರೆ ಅನುಭವಿಸಿ ಎರಡು ಸರ್ಕಾರಗಳಿಗೆ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು.

 

ಕರ್ನಾಟಕ ಅಥಣಿ ಡಿವಾಯ್‍ಎಸ್‍ಪಿ ಗೀರೀಶ ಹಾಗೂ ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್‍ಐ ಎಂ.ಬಿ. ರಬಕವಿ ಹಾಗೂ ಸಿಬ್ಬಂದಿ ವರ್ಗದವರು ಕರ್ನಾಟಕ ಗಡಿಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಅದರಂತೆ ಮಹಾರಾಷ್ಟ್ರದ ಮಿರಜ ನಗರ ಸಿಪಿಆಯ್ ರಾಜೇಂದ್ರ ಸಾವಂತ, ಮಿರಜ ಗ್ರಾಮೀಣ ಪಿಎಸ್‍ಐ ಚಂದ್ರಕಾಂತ ಬೇದ್ರೆ ಹಾಗೂ ಸಿಬ್ಬಂದಿ ವರ್ಗದವರು ಮಹಾರಾಷ್ಟ್ರದ ಗಡಿಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.