Belagavi News In Kannada | News Belgaum

ರುಕ್ಮಿಣಿ ನಗರದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದ ವಸತಿ ಸಚಿವ ವಿ.ಸೋಮಣ್ಣ

ರುಕ್ಮಿಣಿ ನಗರದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದ ವಸತಿ ಸಚಿವ ವಿ.ಸೋಮಣ್ಣ

ಬೆಳಗಾವಿ, ಡಿ.23: ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಅವರು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರುಕ್ಮಿಣಿ ನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದರು.

ಗುರುವಾರ( ಡಿ.23) ಬೆಳಿಗ್ಗೆ 9.30 ಗಂಟೆಗೆ ಬೆಳಗಾವಿ ನಗರದ ರುಕ್ಮಿಣಿ ನಗರದ ವಸತಿ ನಿಲಯಗಳು ಹಾಗೂ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಸಮುದಾಯ ಭವನ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಜೂರಾದ ಮನೆಗಳು ಹಾಗೂ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳನ್ನು ಪರಿಶೀಲಿಸಿದರು ಹಾಗೂ ಅಧಿಕಾರಿಗಳ ಕಾರ್ಯ ಕ್ಷಮತೆಯ ಕುರಿತು ಜನರಲ್ಲಿ ಕೇಳಿದರು.

ವಸತಿ ಗೃಹಗಳ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳ ಕುರಿತು ಮಂಜೂರಾದ ವೆಚ್ಚ ಹಾಗೂ ಖರ್ಚುಗಳ ಕುರಿತು ಅಧಿಕಾರಿಗಳಲ್ಲಿ ಮಾಹಿತಿಯನ್ನು ಕೇಳಿದರು.

ಸೂಕ್ತ ಮಾಹಿತಿಯನ್ನು ಒದಗಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದ ಅವರು, ಶೀಘ್ರ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಅನೀಲ ಬೆನಕೆ, ಮಹೇಶ ಕುಮಠಹಳ್ಳಿ, ಮಹಾಂತೇಶ ದೊಡ್ಡಗೌಡ್ರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.///

ಉದ್ಯೋಗ ಮೇಳ: ಗಡಿ ಭಾಗದ ಯುವಕ, ಯುವತಿಯರಿಗೆ ಉದ್ಯೋಗ ಅವಕಾಶ ನಿರುದ್ಯೋಗ ಸಮಸ್ಯಗೆ ಕಡಿವಾಣ ಹಾಕಲು ಸರ್ಕಾರ ಬದ್ಧ; ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

 

ಬೆಳಗಾವಿ, ಡಿ.23 : ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ಉದ್ಯೋಗ ಮೇಳದಲ್ಲಿ ಸುಮಾರು 2 ರಿಂದ 3 ಸಾವಿರ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ರಾಜ್ಯದ ಜನರ ಭವಿಷ್ಯ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಉದ್ಯಮಬಾಗದಲ್ಲಿನ ಗೊಗಟೆ ತಾಂತ್ರಿಕ ಮಹಾವಿದ್ಯಲಾಯದಲ್ಲಿ ಗುರುವಾರ (ಡಿ.23) ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕೇವಲ ಪುರುಷರು ಮಾತ್ರ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿದ್ದು, ಕಾಲ ಬದಲಾದಂತೆ ಇಂದು ಮಹಿಳೆಯರು ಕೂಡ ಪುರುಷರ ಸರಿಸಮಾನವಾಗಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವದರ ಮೂಲಕ ಆರ್ಥಿಕವಾಗಿ ಸ್ವಾವಲಂಭಿಗಳಾಗುವ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಹೇಳಿದರು.

ಕೌಶಲ್ಯವು ಯಾರ ಸ್ವತ್ತವು ಅಲ್ಲ ಯುವಕ ಯುವತಿಯರಲ್ಲಿ ಅಡಗಿರುವ ಕೌಶಲ್ಯವನ್ನು ಗುರುತಿಸಿ ಅವರ ಕೌಶಲ್ಯಕ್ಕನುಗುಣವಾಗಿ ಉದ್ಯೋಗ ಒದಗಿಸುವದು ಈ ಉದ್ಯೋಗ ಮೇಳದ ಮುಖ್ಯ ಉದ್ದೇಶವಾಗಿದೆ.

ಬೆಳಗಾವಿಯಲ್ಲಿ ಜರಗುತ್ತಿರುವ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದಂತಹ ಪ್ರತಿಷ್ಠಿತ ಕಂಪನಿಗಳು ಈ ಭಾಗದ ಯುವಕ ಯುವತಿಯರಲ್ಲಿನ ಕೌಶಲ್ಯಕ್ಕನುಗುಣವಾದ ಉದ್ಯೋಗ ಒದಗಿಸುತ್ತಿರುವದು ಪ್ರಶಂಸನೀಯವಾದಂತಹ ಕಾರ್ಯವಾಗಿದೆ.

ಕೋವಿಡ್ ಕಾರಣದಿಂದ ಈ ವರೆಗೆ ಯಾವುದೇ ಉದ್ಯೋಗ ಮೇಳ ನಡೆಸಲು ಸಾಧ್ಯವಾಗಿಲ್ಲ ಗ್ರಾಮೀಣ ಅಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ಗ್ರಾಮದ ಹಲವು ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ.
2017 ರಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಾರಂಭಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೌಶಲ್ಯ ತರಬೇತಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದರು.

ಗಡಿ ಜಿಲ್ಲೆಯ ಸ್ಥಳೀಯ ಎಲ್ಲ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸದಾವಕಾಶ ಇದಾಗಿದ್ದು, ಉತ್ತಮ ಸಂಸ್ಥೆಗಳ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಇಲಾಖೆಯ ವತಿಯಿಂದ ಯುವಕರ ಭ್ಯವಿಷ ರೂಪಿಸಲು ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಹೆಚ್ಚು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

 

ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ,ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಅಶ್ವತ್ಥನಾರಾಯಣ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಸರಕಾರವು ದಿಟ್ಟ ಹೆಜ್ಜೆಯನ್ನಿಟ್ಟು ಪ್ರತಿಯೊಬ್ಬರಿಗೂ ಉದ್ಯೋಗ ಅವಕಾಶ ನೀಡಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುಬೇಕು. ರಾಜ್ಯದಲ್ಲಿನ ಏಳು ತಾಂತ್ರಿಕ ವಿಶ್ವವಿದ್ಯಾಲಯಗಳನ್ನು ಐ.ಐ.ಟಿ ರೀತಿ ಮೇಲ್ದರ್ಜೆಗೆರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಅಭಯ ಪಾಟೀಲ ಮಾತನಾಡಿ ಬೆಳಗಾವಿ ರಾಜ್ಯದ ಗಡಿ ಜಿಲ್ಲೆಯಾಗಿದೆ. ಬೆಳಗಾವಿಯು ಕೌಶಲ್ಯಯುತ ನಾಡಾಗಿದ್ದು ಇಲ್ಲಿನ ಯುವಕ ಯುವತಿಯರಿಗೆ ಹೆಚ್ಚಿನ ಉದ್ಯೋಗವಕಾಶಗಳ ಸೃಷ್ಠಿಗಾಗಿ ಹೆಚ್ಚಿನ ಕೈಗಾರಿಕೆಗಳು ಬರುವಂತಾಗಬೇಕು. ಅಲ್ಲದೇ ಕೈಗಾರಿಕೆಗಳ ಸ್ಥಾಪನೆಗಾಗಿ ಬೇಕಾದಂತಹ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವದು ಎಂದು ತಿಳಿಸಿದರು.

ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಇ.ವಿ.ರಮಣರೆಡ್ಡಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಕೆ ಆಯುಕ್ತರಾದ ಶ್ರೀಮತಿ ಕೆ.ಜ್ಯೋತಿ, ಐಟಿಬಿಟಿ ಇಲಾಖೆ ನಿರ್ದೇಶಕರಾದ ಶ್ರೀಮತಿ ಮೀನಾ ನಾಗರಾಜ್, ಕರ್ನಾಟಕ ಕೌಸಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಪಕ ನಿರ್ದೇಶಕ ಅರ್ಶವಿನ ಡಿ.ಗೌಡ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಚೇರಮನ್ ರಾಜೇಂದ್ರ ಬೆಳಗಾಂವಕರ, ಗಣ್ಯರು, ವಿವಿಧ ಉದ್ಯೊಗಾಂಕ್ಷಿಗಳು ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೇಳದಲ್ಲಿ 57 ಕಂಪನಿಗಳು ನೇರವಾಗಿ ಪಾಲ್ಗೊಂಡಿದ್ದು, ಇವುಗಳಿಗೆಲ್ಲ ಪ್ರತ್ಯೇಕ ಕೌಂಟರ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು ಯಾವುದೇ ಗೊಂದಲವಿಲ್ಲದೆ ತಮ್ಮನ್ನು ಸಂದರ್ಶನಕ್ಕೆ ಆಹ್ವಾನಿಸಿರುವ ಕಂಪನಿಗಳ ಕೌಂಟರುಗಳನ್ನು ತಲುಪುತ್ತಿದ್ದರು. ಮೇಳದಲ್ಲಿ ಎಚ್.ಪಿ., ಓಲಾ, ಎಚ್.ಸಿ.ಎಲ್., ವಿಪೆÇ್ರ, ಬೈಜೂಸ್, ನಾರಾಯಣ ಗ್ರೂಪ್, ಟಾಟಾ ಬಿಜಿನೆಸ್ ಹಬ್ ಲಿ., ಟೊಯೊಟಾ ಮುಂತಾದ ಹೆಸರಾಂತ ಕಂಪನಿಗಳು ಭಾಗವಹಿಸಿದ್ದವು. ಇದಲ್ಲದೆ, 14 ಕಂಪನಿಗಳು ವರ್ಚುಯಲ್ ಆಗಿ ಪಾಲ್ಗೊಂಡಿದ್ದವು.////

ಅಪಘಾತದಲ್ಲಿ ಗಾಯಗೊಂಡ ಕ್ಯಾಮೆರಾಮನ್ ಚಿಕಿತ್ಸಾ ವೆಚ್ಚ ಭರಿಸಲಾಗುವುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 

ಬೆಳಗಾವಿ, ಡಿ.23 : ಅಪಘಾತದಲ್ಲಿ ಗಾಯಗೊಂಡು ಬೆಳಗಾವಿ ಕೆಎಲ್‍ಇ ಆಸ್ಪತ್ರೆಯಲ್ಲಿ ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನ್ಯೂಸ್ ಫಸ್ಟ್ ಕ್ಯಾಮರಾಮನ್ ಸಚಿನ ಲಕ್ಷ್ಮಣ ಜಮಖಂಡಿಯವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರಕಾರದಿಂದ ಭರಿಸುವದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದಿಲೀಪ ಕುರುಂದವಾಡಿಯವರ ನೇತೃತ್ವದಲ್ಲಿ ಸಂಘದ ಸದಸ್ಯರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಬೆಳಗಾವಿಯಲ್ಲಿ ಗುರುವಾರದಂದು ಭೇಟಿಯಾಗಿ ಅಪಘಾತದಲ್ಲಿ ಗಾಯಗೊಂಡು ಆರ್ಥಿಕ ಸಂಕಷ್ಟದಲ್ಲಿರುವ ಟಿವಿ ಚಾನಲ್ ಕ್ಯಾಮರಾಮನ್ ಸಚಿನ ಆರೋಗ್ಯಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದರು.

ಸಂಘದ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ಕರೆದು ಕೂಡಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿನ ಜಮಖಂಡಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸಲು ಮಾರ್ಗದರ್ಶನ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ನಿಮಿತ್ಯ ಕಚೇರಿ ಕೆಲಸವನ್ನು ಮುಗಿಸಿಕೊಂಡು ದ್ವಿಚಕ್ರ ವಾಹನದ ಮೇಲೆ ಬರುವಾಗ ಸಚಿನಗೆ ನೀರಾವರಿ ಇಲಾಖೆಯ ಜೀಪ್ ಡಿಕ್ಕಿಯಾಗಿ ತಲೆಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈಗಾಗಲೆ ಕಾಲಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಮೊತ್ತೊಂದು ಬಾರಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿರುವದರಿಂದ ಸಚಿನ್ ವರು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಭೀಮಶಿ ಜಾರಕಿಹೊಳಿಯವರಿಗೆ ಮನವಿ ಮಾಡಿ ಸಹಾಯ ಮಾಡುವಂತೆ ವಿನಂತಿಸಿದ್ದರು.

ಜಿಲ್ಲಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿಯವರ ಸೂಚನೆಯ ಮೇರೆಗೆ ಗುರುವಾರದಂದು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗಾಯಗೊಂಡ ಪತ್ರಕರ್ತನಿಗೆ ಸಹಾಯ ಮಾಡುವಂತೆ ಮನವಿಸಿದ್ದರು. ಪತ್ರಕರ್ತರಾದ ಶ್ರೀಕಾಂತ ಕುಬಕಡ್ಡಿ, ಶ್ರೀಧರ ಕೊಟಾರಗಸ್ತಿ, ಚಂದ್ರಕಾಂತ ಸುಗಂಧಿ, ಸಹದೇವ ಮಾನೆ, ಮಂಜುನಾಥ ಪಾಟೀಲ, ಮಹಾಂತೇಶ ಕುರಬೆಟ್, ಜಿತೇಂದ್ರ ಕಾಂಬಳೆ ಹಾಗೂ ಪತ್ರಕರ್ತರು ಮತ್ತು ಕ್ಯಾಮರಾಮನ್‍ಗಳು ಉಪಸ್ಥಿತರಿದ್ದರು.