Belagavi News In Kannada | News Belgaum

ಉ.ಕ ಭಾಗದ ಸಮಸ್ಯೆಗಳಿಗೆ ಸಿಗಲಿಲ್ಲ ಪರಿಹಾರ

 

ಬೆಳಗಾವಿ: ಕಳೆದ ಎರಡೂ ವರ್ಷಗಳ ನಂತರ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲ ಅಧಿವೇಶನ ಕೇವಲ 10 ದಿನಗಳಿಗೆ ಮಾತ್ರ ಸೀಮಿತವಾಗಿದ್ದು, ಮತ್ತೆ ಉತ್ತರ ಕರ್ನಾಟಕ ಭಾಗದ ಜನತೆಗೆ ತಣ್ಣೀರು ಎರಚುವ ಕೆಲಸವಾಯಿತು.

ಉತ್ತರ ಕರ್ನಾಟಕ ಭಾಗದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದರೂ ಮಾತ್ರ ಹೋರಾಟಗಾರರ ಸಮಸ್ಯೆಗಳಿಗೆ ಮುಕ್ತಿ ದೊರೆಯಲ್ಲಿಲ್ಲ.

 

ಡಿ. 13 ರಿಂದ ಬೆಳಗಾವಿಯಲ್ಲಿಆರಂಭವಾಗಿದ್ದ ಚಳಿಗಾಲ ವಿಧಾನ ಮಂಡಲ ಅಧಿವೇಶನಕ್ಕೆ ಡಿ. 24ರಂದು ತೆರೆ  ಬಿದಿತ್ತು. ಅಧಿವೇಶನಕ್ಕೆ 8 ಶಾಸಕರು ಗೈರಾಗಿದ್ದರು. ಶೇ. 75 ರಷ್ಟು ಶಾಸಕರು ಕಲಾಪಕ್ಕೆ ಹಾಜರಾಗಿದ್ದು, 5 ಸಾವಿರಕ್ಕೂ ಹೆಚ್ಚು ಜನ ಕಲಾಪ  ವೀಕ್ಷಣೆ ಮಾಡಿದರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸೋಣ ಎಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು,  ಅಧಿವೇಶ ನಡೆಯುವ ಮುಂಚೆಯೇ ಬೆಳಗಾವಿಯಲ್ಲಿ ನಡೆಸಿದ ಸಭೆಯಲ್ಲಿ ಹೇಳಿಕೆ ನೀಡಿದ್ದರು. ಆದರೆ ಹೇಳಿಕೆ ಮಾತ್ರ ಹೇಳಿಕೆಯಾಗಿಯೇ ಉಳಿಯಿತು.

 

ಇನ್ನೂ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ಮಾತ್ರ ನೇಮಕ ಮಾಡಿರುವುದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಮಂಡಳಿ ಸದಸ್ಯರ ನೇಮಕ ಮಾಡಿಲ್ಲ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ನೀಡುವುದಾಗಿ ಸಿಎಂ ಘೋಷಿಸಿದ್ದರು. ಈಗ 378 ಕೋಟಿ ಮಾತ್ರ ಹಣ ಬಿಡುಗಡೆ ಮಾಡಿ ಆದೇಶಿಸಿದ್ದಾರೆ.

ಸರ್ಕಾರದ ಸಾಧನೆ ಮತಾಂತರ ವಿಧೇಯಕ ಪಾಸ್ ಮಾಡಿದ್ದಷ್ಟೇ. ಸದನದಲ್ಲಿ ಐವರು ಮಂತ್ರಿಗಳೂ ಇರಲಿಲ್ಲ. ಬಿಲ್ ಪಾಸ್ ಮಾಡುವಾಗಷ್ಟೇ ಎಲ್ಲರೂ ಇದ್ದರು. ನೂರು ದಿನ ಕಲಾಪ ನಡೆಸುವಂತೆ ಹೇಳಿದ್ದೇವೆ. ಪ್ರತಿಪಕ್ಷ ನಾಯಕರ ಮಾತಿಗೆ ಸಮಯ ಸಿಗಲಿಲ್ಲ. ಪ್ರತಿಭಟನೆ ಮಾಡಿ ಸಮಯ ಕೇಳುವಂತಾಯಿತು. ಇನ್ನೊಂದು ವಾರ ಸದನ ವಿಸ್ತರಿಸಬೇಕಿತ್ತು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೂಡ ಅಸಮಾಧಾನ ತೋಡಿಕೊಂಡರು.

ನಾವು ಅಂತಾರಾಷ್ಟ್ರೀಯ ವಿಮಾನ, ರಾಷ್ಟ್ರೀಯ ಹೆದ್ದಾರಿ ಕೇಳುತ್ತಿಲ್ಲ. ಹಸಿವು, ಬಡತನ, ಆರೋಗ್ಯ, ಶಿಕ್ಷಣ ವಸತಿಯನ್ನು ಕೇಳುತ್ತಿದ್ದೇವೆ. ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಬೇಕಿದೆ. ತುತ್ತು ಅನ್ನಕ್ಕಾಗಿ 8 ತಿಂಗಳು ವಲಸೆ ಹೋದರೆ 4 ತಿಂಗಳು ಮನೆಯಲ್ಲಿರುತ್ತಾರೆ, ಕರೋನಾದಿಂದ ಸತ್ತ ಗಂಡನ ಶವ ತರಲು ತಾಳಿ ಮಾರಿದರೂ ಸಾಧ್ಯವಾಗಲಿಲ್ಲಎಂದು ತಮ್ಮ ಕ್ಷೇತ್ರದ ಜನತೆಯ ತೊಂದರೆ ಬಗ್ಗೆ ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ವಿಧಾನ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನಸಭೆ ಕಲಾಪಕ್ಕೆ ಬೆರಳೆಣಿಕೆಯಷ್ಟು ಶಾಸಕರು ಭಾಗವಹಿಸಿದ್ದರು. ಕೆಲವೊಂದಿಷ್ಟು ಸದಸ್ಯರು ರಜೆ ಪಡೆದುಕೊಂಡಿದ್ದರೆ, ಇನ್ನೊಂದಿಷ್ಟು ಶಾಸಕರು ಕಲಾಪದಿಂದ ದೂರ ಉಳಿದಿದ್ದರು.

 

10ನೇ ದಿನದ ಕಲಾಪದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಶಾಸಕರು ಪಟ್ಟು ಹಿಡಿದರು. ನಂತರ ಸ್ಪೀಕರ್ ಅನುಮತಿ ನೀಡಿದರೂ ಅನೇಕ ಶಾಸಕರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಇದರಿಂದ ಅನೇಕ ಉತ್ತರ ಕರ್ನಾಟಕದ ಶಾಸಕರು ಆಕ್ರೋಶ ವ್ಯಕ್ತ ಪಡಿಸಿ, ನಿಮಗೆ ಉತ್ತರ ಕರ್ನಾಟಕ ಅಭಿವೃದ್ಧಿ ಬೇಕಿಲ್ಲ ಎಂದು ಸರ್ಕಾರದ ವಿರುದ್ಧ ಸದನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸದನದ ಒಳಗೂ, ಹೊರಗೂ ಹೋರಾಟ ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕರು, ಗುತ್ತಿಗೆದಾರರ ಸಂಘ ಆರೋಪಿಸಿರುವ 40 ಪರ್ಸೆಂಟ್ ಕಮೀಷನ್ ಹಗರಣ ಮುಂದಿಕೊಂಡು ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ನಲ್ಲಿ ಸಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು. ಪ್ರತಿಭಟನೆಯಲ್ಲಿಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸೇರಿದಂತೆ ಕಾಂಗ್ರೆಸ್‍ನ ಎಲ್ಲ ಪ್ರಮುಖ ನಾಯಕರು, ಶಾಸಕರುಗಳು ಭಾಗವಹಿಸಿದ್ದರು.

 

ರಾಜ್ಯ ಬಿಜೆಪಿ ಸರ್ಕಾರದ ಭಷ್ಟಾಚಾರ ಖಂಡಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಸಾಥ್ ನೀಡಿ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಭಾಗದ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರೂ ಯಾವುದೇ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿಲ್ಲ. ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲ ಅಧಿವೇಶನದಲ್ಲಿ ಬರಿ ಪ್ರತಿಭಟನೆ, ಗದ್ದಲ ನಡೆದವು. ಉತ್ತರ ಕರ್ನಾಟಕದ ಕನಸಿನ ಯೋಜನೆಯಾದ ಕೃಷ್ಣಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಗೆ ಸ್ಪಷ್ಟ ನಿರ್ಧಾರ ಸಿಗಲಿಲ್ಲಎಂ  ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತ ಪಡಿಸಿದರು.

ಸುವರ್ಣಸೌಧದಲ್ಲಿ ಚರ್ಚೆ ಮಾಡುವುದಿದ್ದರೆ ಮಾತ್ರ ಅಧಿವೇಶನ ಕರೆಯಿರಿ. ಜಾತ್ರೆ ಮಾಡಲು ಈ ರೀತಿ ಅಧಿವೇಶನ ಕರೆಯಬೇಡಿ. ತುಂಬಾ ನೋವಿನಿಂದ ಅಧಿವೇಶನ ಮುಗಿಸಿಕೊಂಡು ಹೋಗುತ್ತಿದ್ದೇವೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಸರ್ಕಾರದ ವಿರುದ್ಧ ಕಿಡಿ ಕಾರಿದರು.

 

ಒಟ್ಟಾರೆಯಾಗಿ ವಿಧಾನ ಸಭೆಯಲ್ಲಿಅಂಗೀಕಾರಗೊಂಡ  ಮತಾಂತರ ನಿಷೇಧ ಕಾಯ್ದೆ, ವಿಪಕ್ಷಗಳಿಗೆ ಮಣಿದ ಸರ್ಕಾರ ವಿಧಾನ ಪರಿಷತ್ ನಲ್ಲಿ ಬಹುಮತ ಇಲ್ಲದ ಕಾರಣ ಮತಾಂತರ ನಿಷೇಧ ಕಾಯ್ದೆಅಂಗೀಕಾರಗೊಳ್ಳಲಿಲ್ಲ.  ಮುಂದಿನ ಅಧಿವೇಶನ ದಲ್ಲಿಮತಾಂತರ ನಿಷೇಧ ಕಾಯ್ದೆಅಂಗೀಕಾರಗೊಳಿಸುವುದಾಗಿ ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ತಿಳಿಸಿದರು.