Belagavi News In Kannada | News Belgaum

ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆರ್.ಪಿ.ಚೌಗಲಾ ಆಯ್ಕೆ

ಹುಕ್ಕೇರಿ : ಹುಕ್ಕೇರಿಗೆ ಹೊಸದಾಗಿ ನ್ಯಾಯಾಲಯದ ಕಟ್ಟಡ ಮಂಜೂರಾಗಿದ್ದು ಶೀಘ್ರವೇ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ವಕೀಲರ ಸಂಘದ ನೂತನ ಅಧ್ಯಕ್ಷ ಆರ್.ಪಿ.ಚೌಗಲಾ ಹೇಳಿದರು.

ಇಲ್ಲಿನ ನ್ಯಾಯಾಲಯದಲ್ಲಿ ಗುರುವಾರ ಹುಕ್ಕೇರಿ ವಕೀಲರ ಸಂಘಕ್ಕೆ 2021-2024ರ ಅವಧಿಗೆ ನಡೆದ ಚುನಾವಣೆಯಲ್ಲಿ ತಮ್ಮ ಪೆನಲ್‍ನ ಎಲ್ಲ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿದ ಬಳಿಕ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾಯವಾದಿಗಳ ಬಹುದಿನಗಳ ಬೇಡಿಕೆಯಾದ ಹೊಸ ನ್ಯಾಯಾಲಯದ ಕಟ್ಟಡ ಮಂಜೂರಾಗಿದ್ದು ಶೀಘ್ರವೇ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ರಾಜ್ಯ ವಕೀಲರ ಪರಿಷತ್ ಹಾಗೂ ಸರ್ಕಾರದಿಂದ ನ್ಯಾಯವಾದಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಬರುವ ದಿನಗಳಲ್ಲಿ ನ್ಯಾಯವಾದಿಗಳಿಗೆ ಅನುಕೂಲವಾಗುವ ಹೊಸ ಹೊಸ ಯೋಜನೆಗಳ ಸಾಕಾರಕ್ಕೆ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಹಿರಿಯ ನ್ಯಾಯವಾದಿ ಟಿ.ಎಸ್.ಸೊಡ್ಡನ್ನವರ ಮಾತನಾಡಿ, ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಈ ಹಿಂದಿನ ಕಹಿ ಘಟನೆಗಳನ್ನು ಮರೆತು ಸೌಹಾರ್ದ ವಾತಾವರಣ ನಿರ್ಮಿಸಬೇಕು. ರಾಜ್ಯದಲ್ಲಿಯೇ ಮಾದರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂದರು.

ನ್ಯಾಯವಾದಿಗಳಾದ ಕೆ.ಎಲ್.ಜಿನರಾಳಿ, ಉಮೇಶ ಪಾಟೀಲ, ಅನೀಸ್ ವಂಟಮೂರಿ, ಪ್ರಕಾಶ ಪಾಟೀಲ, ಕೆ.ಪಿ.ಶಿರಗಾಂವಕರ, ಬಿ.ಕೆ.ಮಗೆನ್ನವರ, ಆರ್.ಬಿ.ಘಂಟಿ, ಎ.ಡಿ.ನಾಡಗೌಡ, ಎಚ್.ಎಲ್.ಪಾಟೀಲ, ಐ.ಬಿ.ಅಮ್ಮಣಗಿ, ವಿನಯಗೌಡ ಪಾಟೀಲ, ಬಿ.ಎಂ.ಜಿನರಾಳಿ ಮತ್ತಿತರರು ಉಪಸ್ಥಿತರಿದ್ದರು.

ಚೌಗಲಾ ಪೆನಲ್‍ಗೆ ಭರ್ಜರಿ ಜಯ :ಹುಕ್ಕೇರಿ ನ್ಯಾಯವಾದಿಗಳ ಸಂಘಕ್ಕೆ 2021-24 ರ ಅವಧಿಗೆ ನಡೆದ ಚುನಾವಣೆಯಲ್ಲಿ ಆರ್.ಪಿ.ಚೌಗಲಾ ಪೆನಲ್‍ಗೆ ಭರ್ಜರಿ ಜಯ ದೊರಕಿದೆ.

ಇಲ್ಲಿನ ನ್ಯಾಯಾಲಯದಲ್ಲಿ ಗುರುವಾರ ನಡೆದ ಮತದಾನದಲ್ಲಿ ಚೌಗಲಾ ಪೆನಲ್‍ನ ಐವರು ಅಭ್ಯರ್ಥಿಗಳು ಜಯ ಗಳಿಸಿದ್ದು ಕುರಬೇಟ ಪೆನಲ್‍ನ ಎಲ್ಲಾ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಅಧ್ಯಕ್ಷರಾಗಿ ಆರ್.ಪಿ.ಚೌಗಲಾ, ಉಪಾಧ್ಯಕ್ಷರಾಗಿ ಎನ್.ಐ.ದೇಮನ್ನವರ, ಕಾರ್ಯದರ್ಶಿಯಾಗಿ ಎಂ.ಕೆ.ಪಾಟೀಲ, ಸಹಕಾರ್ಯದರ್ಶಿಯಾಗಿ ಭೀಮಸೇನ ಬಾಗಿ, ಖಜಾಂಚಿಯಾಗಿ ಎ.ಬಿ.ತೊದಲ ಆಯ್ಕೆಯಾಗಿದ್ದಾರೆ.

ಮಹಿಳಾ ಪ್ರತಿನಿಧಿ ಕ್ಷೇತ್ರದಿಂದ ಆಶಾ ಸಿಂಗಾಡಿ ಅವರು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಐ.ಕೆ.ಹೂಲಿಕಟ್ಟಿ, ಕೆ.ಎಂ.ಬುಗಡಿಕಟ್ಟಿ, ಎಸ್.ಎಸ್.ಚೌಗಲಾ ಕಾರ್ಯನಿರ್ವಹಿಸಿದರು. ಒಟ್ಟು 152 ಮತಗಳ ಪೈಕಿ 149 ಮತಗಳು ಚಲಾವಣೆಯಾದವು.//////