Belagavi News In Kannada | News Belgaum

ಪ್ರಥಮ ಬಾರಿಗೆ ಬೆಳಗಾವಿ ಸುವರ್ಣಸೌಧದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ *ಉತ್ತರ ಕರ್ನಾಟಕ ಭಾಗದ ದೇವಸ್ಥಾನಗಳ ಅಭಿವೃದ್ದಿ ಕುರಿತ ವ್ಯಾಪಕ ಚರ್ಚೆ

ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ದೊರೆತಿದೆ : ಸಚಿವ ಪ್ರಭು ಚವ್ಹಾಣ್


ಬೆಳಗಾವಿ, ಡಿ.24 :  ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅನುಮತಿ ದೊರೆತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಈ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ್ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪಶುಸಂಗೋಪನೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದಿದ್ದರಿಂದ ಸಮರ್ಪಕವಾಗಿ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಜಿಲ್ಲೆಗೊಂದು ಗೋಶಾಲೆ ಪ್ರಾಣ ಕಲ್ಯಾಣ ಸಹಾಯವಾಣ ಸೇರಿದಂತೆ ಇತ್ತೀಚೆಗೆ ಪರಿಚಯಿಸಿದ ಇಲಾಖೆಯ ಯೋಜನೆಗಳು ಸಿಬ್ಬಂದಿಗಳ ಕೊರತೆಯಿಂದ ಹಿನ್ನಡೆ ಆಗುತ್ತಿತ್ತು.
ಪ್ರತಿಬಾರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಕೊರತೆ ನೀಗಿಸಲು ಮನವಿ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಅಧಿವೇಶನದ ಸಂದರ್ಭದಲ್ಲಿ ವಿಧಾನಪರಿಷತ್ ಹಾಗೂ ವಿಧಾನಸಭೆಯಲ್ಲಿ ಸದಸ್ಯರುಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಸಿಬ್ಬಂದಿಗಳ ಕೊರತೆ ಕುರಿತು ಪ್ರಶ್ನೆ ಹಾಕುವುದು ವಾಡಿಕೆಯಾಗಿತ್ತು.
ಕಳೆದ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ನೇಮಕಾತಿ ಕುರಿತು ಚರ್ಚೆ ನಡೆಸಿದ್ದೆ. ಅಲ್ಲದೆ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಶುಸಂಗೋಪನೆ ಇಲಾಖೆಗೆ ನೇಮಕಾತಿಯಲ್ಲಿ ಇರುವ ತೊಡಕುಗಳ ಕುರಿತು ಮಾತುಕತೆ ನಡೆಸಿದ್ದೆ ಸಚಿವರು ತಿಳಿಸಿದ್ದಾರೆ.
ಪಶುಸಂಗೋಪನೆ ಇಲಾಖೆಯಲ್ಲಿ ಗುರುತರ ಬದಲಾವಣೆ ತರುವ ಸಲುವಾಗಿ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಭಿವೃದ್ಧಿ ಮಾದರಿಗಳನ್ನು ನಮ್ಮಲ್ಲಿಯೂ ಸಹ ಅಳವಡಿಸಿಕೊಳ್ಳಲು ಆಲೋಚಿಸಿದಾಗ ನಮ್ಮಲ್ಲಿನ ಸಿಬ್ಬಂದಿ ಕೊರತೆಯಿಂದ ಪ್ರತಿಬಾರಿ ಸಮಸ್ಯೆ ಎದುರಾಗುತ್ತಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕಾರ ಮಾಡಿಕೊಂಡ ನಂತರ ಪಶುಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಗಳಿಂದ ಎದುರಾಗುತ್ತಿರುವ ಸಮಸ್ಯೆ ಕುರಿತು ಹಲವು ಬಾರಿ ಚರ್ಚೆ ನಡೆಸಲಾಗಿತ್ತು.
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯಿಂದಾಗಿ ಇಲಾಖೆಯ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ವೇಗ ದೊರೆಯಲಿದ್ದು ಪಶುಸಂಗೋಪನೆ ಇಲಾಖೆ ಮತ್ತಷ್ಟು ಚುರುಕಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕೋಟ್
ಪಶುಸಂಗೋಪನೆ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆ ಭರ್ತಿಗೆ ಅನುವತಿ ದೊರೆತಿದ್ದು ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.///

 

ಉತ್ತರ ಕರ್ನಾಟಕ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚನೆಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ


ಪ್ರಥಮ ಬಾರಿಗೆ ಬೆಳಗಾವಿ ಸುವರ್ಣಸೌಧದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ *ಉತ್ತರ ಕರ್ನಾಟಕ ಭಾಗದ ದೇವಸ್ಥಾನಗಳ ಅಭಿವೃದ್ದಿ ಕುರಿತ ವ್ಯಾಪಕ ಚರ್ಚೆ

ಬೆಳಗಾವಿ, ಡಿ.24: ಬೆಳಗಾವಿ ಸುವರ್ಣ ಸೌಧ ಡಿಸೆಂಬರ್ 24: ಪ್ರಪ್ರಥಮ ಬಾರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಉತ್ತರ ಕರ್ನಾಟಕ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚಿಸುವಂತೆ ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಸೂಚನೆ ನೀಡಿದರು.
ಉತ್ತರ ಕರ್ನಾಟಕದ ದೇವಸ್ಥಾನಗಳ ಅಭಿವೃದ್ದಿಯ ಬಗ್ಗೆ ಚರ್ಚಿಸಲು ಪ್ರಪ್ರಥಮ ಬಾರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 3 ನೇ ರಾಜ್ಯ ಧಾರ್ಮಿಕ ಪರಿಷತ್ತಿನ 15 ನೇ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಉತ್ತರ ಕರ್ನಾಟಕ ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ದಿ:
ಬೆಳಗಾವಿ ಜಿಲ್ಲೆಯಲ್ಲಿರುವ ಪ್ರಮುಖ ಎ ದರ್ಜೆಯ ದೇವಸ್ಥಾನ ಸವದತ್ತಿಯ ರೇಣುಕಾ ಯಲ್ಲಮ್ಮ. ಈ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ಭಕ್ತರುಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ದಿಯ ಕುರಿತು ವಿಶೇಷ ಚರ್ಚೆ ನಡೆಸಲಾಯಿತು. ಈಗಾಗಲೇ 3.58 ಕೋಟಿ ವೆಚ್ಚದಲ್ಲಿ ಬಳಿಗಾರ ಕಟ್ಟೆ ರಸ್ತೆಯ ಅಭಿವೃದ್ದಿ ಕಾರ್ಯದ ಬಗ್ಗೆ ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನದ ಬಿಡುಗಡೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು. ದೇವಾಲಯದ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುವಂತೆ ಸೂಚಿಸಿದ ಸಚಿವರು, ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ಸಂಸ್ಕರಣಾ ಯೋಜನೆಯ ಡಿಪಿಆರ್ ನ್ನು ಶೀಘ್ರವಾಗಿ ಸಿದ್ದಗೊಳಿಸಿ ಅನುಷ್ಠಾನಗೊಳಿಸಲು ಆದೇಶಿದರು.
ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ಸಿ ದರ್ಜೆಯ ದೇವಸ್ಥಾನಗಳ ದತ್ತು:
ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲೊಂದಾಗಿರುವ ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕಡಿಮೆ ಆದಾಯವಿರುವ ದೇವಸ್ಥಾನಗಳನ್ನು ದತ್ತು ತಗೆದುಕೊಳ್ಳುವಂತೆ ಸೂಚನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರಿಂದ ಕಡಿಮೆ ಆದಾಯವಿರುವ ದೇವಸ್ಥಾನಗಳ ಸೂಕ್ತ ನಿರ್ವಹಣೆ ಸಾಧ್ಯವಾಗಲಿದ್ದು, ಈ ಬಗ್ಗೆ ದತ್ತು ತಗೆದುಕೊಳ್ಳಬೇಕಾದ ಸಿ ದರ್ಜೆಯ ದೇವಸ್ಥಾನಗಳ ಪಟ್ಟಿಯನ್ನು ತಯಾರಿಸಿ ಪ್ರಾಧಿಕಾರಕ್ಕೆ ಕಳುಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾನ್ಯ ಸಂಗ್ರಹಣ ನಿಧಿ ವಂತಿಗೆ ಸಂಗ್ರಹಕ್ಕೆ ಆದ್ಯತೆ:
ರಾಜ್ಯದ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಿಂದ ಸಾಮಾನ್ಯ ಸಂಗ್ರಹಣ ನಿಧಿಗೆ ಪ್ರತಿವರ್ಷ ಶೇಕಡಾ 10 ರಷ್ಟು ವಂತಿಗೆಯನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಕಡಿಮೆ ಆದಾಯವಿರುವ ದೇವಸ್ಥಾನಗಳ ಅಭಿವೃದ್ದಿಗೆ ಬಳಸಲಾಗುತ್ತದೆ. ಈ ನಿಧಿಗೆ ವಂತಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕಾಗಿದೆ. ಪ್ರತಿವರ್ಷ ದೇವಸ್ಥಾನದ ಲೆಕ್ಕಪತ್ರ ಪರಿಶೀಲನೆಯಾಗಿ ಜೂನ್ ತಿಂಗಳ ಒಳಗಾಗಿ ಆಯುಕ್ತರಿಗೆ ಆಡಿಟ್ ವರದಿ ನೀಡದಿದ್ದಲ್ಲಿ ಆಯಾ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.
ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ವಂತಿಗೆ ಸಂಗ್ರಹ:
ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯದ ವಾರ್ಷಿಕ ಆದಾಯದಿಂದ ಸಾಮಾನ್ಯ ಸಂಗ್ರಹಣಾ ನಿಧಿಗೆ ವಂತಿಗೆಯನ್ನು ನೀಡಲಾಗುತ್ತಿಲ್ಲ. ಈ ದೇವಸ್ಥಾನದಿಂದಲೂ ವಂತಿಗೆ ಯನ್ನು ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಮದುರ್ಗದ ಗೊಡಚಿ ವೀರಭದ್ರ ದೇವಸ್ಥಾನ, ಬೆಳಗಾವಿಯ ಪಂಥಬಾಳೇಕುಂದ್ರಿ ಶ್ರೀ ದತ್ತ ದೇವಸ್ಥಾನ, ಶ್ರೀ ಪರಮಾರ್ಥನಿಕೇತನ ಹರಿಮಂದಿರ, ರಾಯಭಾಗದ ಶ್ರೀ ಮಹಾಕಾಳಿ (ಮಾಯಕ್ಕ) ದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳ ಅಭಿವೃದ್ದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಮುಜರಾಯಿ ಆಯುಕ್ತರಾದ ಶ್ರೀಮತಿ ರೋಹಿಣ ಸಿಂಧೂರಿ, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.///

ಐ.ಟಿ.ಐ ಟ್ರೇಡ್ ಗಳನ್ನು ವ್ಯಾಸಂಗ ಮಾಡಿರುವ ಆಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿಗಾಗಿ ಅರ್ಜಿ ಆಹ್ವಾನ ತಾಂತ್ರಿಕ ತರಬೇತಿ ಸಂಸ್ಥೆ, ಹಿಂದೂಸ್ಥಾನ ಏರೋನಾಟಿಕ್ಸ್ ಲಿ. ಬೆಂಗಳೂರು ಇವರು ಅಪ್ರೆಂಟೈಸ್ ಶಿಪ್ ಕಾಯ್ದೆ 1961 ರ ಅಡಿಯಲ್ಲಿ “ಐ.ಟಿ.ಐ ಟ್ರೇಡ್ ಗಳನ್ನು ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲಾತಿಗಳು :
ಎಸ್.ಎಸ,ಎಲ್.ಸಿ ಅಂಕಪಟ್ಟಿಯ ಪ್ರತಿ, ಐ.ಟಿ.ಐ ಅಂಕಪಟ್ಟುಗಳ ಸ್ವದೃಢೀಕರಣ ಪ್ರತಿಗಳು, ಎನ್.ಟಿ.ಸಿ ಪ್ರಮಾಣ ಪತ್ರದ ಪ್ರತಿ, ಜಾತಿ/ಅಂಗವಿಕಲ/ಸಶಸ್ತ್ರ ಸಿಬ್ಬಂದಿ ಪ್ರಮಾಣ ಪತ್ರ, ಆಧಾರ ಕಾರ್ಡ ಹಾಗೂ ಪ್ಯಾನ್ ಕಾರ್ಡ ನ ಪ್ರತಿ, ಎನ್.ಸಿ.ವಿ.ಟಿ ಪೋರ್ಟಲ್ ನೊಂದಣ ಪ್ರತಿ ಲಗತ್ತಿಸಿಬೇಕು.
ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಠಡಿ ಸಂಖ್ಯೆ ಟಿಪಿ2 ಮತ್ತು ಟಿಪಿ3 ತಳಮಹಡಿ, ಸುವರ್ಣ ವಿಧಾನ ಸೌಧ ಇಲ್ಲಿ ಖುದ್ದಾಗಿ ಹಾಜರಾಗಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.///

 

ಡಿಸೆಂಬರ್ 27 ರಂದು ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಮತ್ತು ಉಪಚುನಾವಣೆ
ಡಿ 25ರಿಂದ ಬಹಿರಂಗ ಪ್ರಚಾರ ನಿಷೇಧ

ಬೆಳಗಾವಿ, ಡಿ.24: ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯಂತೆ ಬೆಳಗಾವಿ ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ದಿನಾಂಕ ನಿಗದಿಪಡಿಸಲಾಗಿದ್ದು, ಡಿಸೆಂಬರ್ 27 ರಂದು ಮುಂಜಾನೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆ ಗಳಿಗೆ ಸಂಬಂಧಿಸಿದಂತೆ ಮತದಾನದ ದಿನಾಂಕ ಮತ್ತು ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಗಳ ಒಳಗೆ ಅಂದರೆ ಡಿಸೆಂಬರ್ 25 ರಿಂದ ಬೆಳಿಗ್ಗೆ 7 ಗಂಟೆಯ ಒಳಗೆ ಬಹಿರಂಗ ಪ್ರಚಾರವನ್ನು ನಿಲ್ಲಿಸಬೇಕು.
ಸದರಿ ನಿಯಮದ ಕುರಿತು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಬಹಿರಂಗ ಪ್ರಚಾರ ಮಾಡಬಾರದು.
ಚುನಾವಣೆಯನ್ನು ನ್ಯಾಯಸಮ್ಮತವಾಗಿ ಯಾವುದೇ ಲೋಪದೋಷ ವಿಲ್ಲದೆ ಯಾವುದೇ ನ್ಯೂನ್ಯತೆ ಬಾರದಂತೆ ನಡೆಸಲು ಎಲ್ಲಾ ಅಗತ್ಯ ಸಹಕಾರ ನೀಡುವಂತೆ ಕೋರಲಾಗಿದೆ.
ಚುನಾವಣೆ ನಡೆಯುವ ವಾರ್ಡಿನ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಸಾರ್ವಜನಿಕ ಉದ್ದಿಮೆಗಳು ವ್ಯವಾರಿಕ ಸಂಸ್ಥೆಗಳು ಖಾಸಗಿ ಕಂಪನಿಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಡಿಸೆಂಬರ್ 27 ರಂದು ವೇತನ ಸಹಿತ ಸಾರ್ವತ್ರಿಕ ರಜೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///