Belagavi News In Kannada | News Belgaum

ಅಧಿವೇಶನದಲ್ಲಿ ಉ.ಕ, ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆ ಆಗಿಲ್ಲ: ಈಶ್ವರ ಖಂಡ್ರೆ

ಕಲಬುರಗಿ: ಜನ ವಿರೋಧಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ಕರೆದಿದ್ದರೂ, ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಜನರಿಗೆ ಮಾರಕವಾದ ವಿಧೇಯಕ (ಮತಾಂತರ ನಿಷೇಧ ಮಸೂದೆ) ತಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ‌.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದಲೇ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಏರ್ಪಡಿಸಲಾಗಿತ್ತು. ಆದರೆ ಜನ ವಿರೋಧಿ ಬಿಜೆಪಿ ಸರ್ಕಾರವು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಲಿಲ್ಲ. ಅಧಿವೇಶನ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ನಿರ್ಧಾರ ತಿಳಿಸಿಲ್ಲ. ಸರ್ಕಾರದ ವೈಫಲ್ಯಗಳನ್ನು ಮರೆಮಾಚಿ ಜನರ ಗಮನ‌ವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿ, ಬಿಜೆಪಿಯಲ್ಲಿ ಅಸ್ಥಿರತೆ ಇದೆ. ಅಲ್ಲಿ ಬಹಳಷ್ಟು ಅತೃಪ್ತಿ ಇದೆ. ಮುಖ್ಯಮಂತ್ರಿ ಬದಲಾವಣೆ ಆಗೋದು ಬಿಡೋದು ಅವರ ಪಕ್ಷಕ್ಕೆ‌ ಬಿಟ್ಟ ವಿಚಾರ. ಬಿಜೆಪಿ ಸರ್ಕಾರ ಇದ್ದೂ ಇಲ್ಲದಂತಿದೆ‌. ಆಡಳಿತ ವೈಫಲ್ಯವಾದ ಮೇಲೆ ಇಂತಹ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಜೆಪಿಯವರ ತೀರ್ಮಾನ ಎಂದು ಮಾತನಾಡಿದ್ದಾರೆ./////