Belagavi News In Kannada | News Belgaum

100ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಗೆ ಸಿದ್ಧತೆ

ಬೆಂಗಳೂರು: ಮೇಲ್ಮನೆ ಚುನಾವಣೆ ನಡೆದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಹೋರಾಟದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. 58 ನಗರ ಸ್ಥಳೀಯ ಸಂಸ್ಥೆಗಳು, 57 ಗ್ರಾಪಂಗಳ ಸಾರ್ವತ್ರಿಕ ಚುನಾವಣೆಯ ಮತದಾನ ಸೋಮವಾರ ನಡೆಯಲಿದ್ದು, ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.
ಜತೆಗೆ ಕೊಳ್ಳೆಗಾಲ, ಹರಿಹರ, ದಾಂಡೇಲಿ, ಗೌರಿಬಿದನೂರು, ಜಮಖಂಡಿ ನಗರಸಭೆಗಳು, ಮೂಡಲಗಿ, ಸೇಡಂ, ಹಾನಗಲ್ ಪುರಸಭೆಗಳು ಹಾಗೂ ಚಡಚಣ ಪಟ್ಟಣ ಪಂಚಾಯಿತಿಗೂ ಉಪಚುನಾವಣೆ ನಡೆಯಲಿದೆ. ಅಲ್ಲದೆ, ಗ್ರಾಪಂಗಳ 386 ಸ್ಥಾನಗಳಿಗೂ ಸೋಮವಾರ ಮತದಾನ ನಡೆಯಲಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ರಾಜ್ಯ ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳೆ ಚುನಾವಣಾ ಸಿಬ್ಬಂದಿ ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳಲಿದ್ದಾರೆ.
58 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಐದು ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ 1185 ವಾರ್ಡ್‍ಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 4961 ನಾಮಪತ್ರಗಳು ಸಲ್ಲಿಕೆಯಾಗಿದ್ದು, 1352 ಕಾಂಗ್ರೆಸ್, 1396 ಬಿಜೆಪಿ, 306 ಜೆಡಿಎಸ್, 1728 ಪಕ್ಷೇತರರು ಸೇರಿದಂತೆ ಒಟ್ಟು 4961 ನಾಮಪತ್ರಗಳು ಸಲ್ಲಿಕೆಯಾಗಿವೆ.
ಅಗತ್ಯಬಿದ್ದರೆ ಮರುಮತದಾನ ಡಿ.29ರಂದು ನಡೆಯಲಿದೆ. ಡಿ.30ರಂದು ಆಯಾ ತಾಲ್ಲೂಕು ಕೇಂದ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ರಾಜಕೀಯ ಪಕ್ಷಗಳಿಗೆ ಈ ಚುನಾವಣೆಯು ಸವಾಲಾಗಿ ಪರಿಣಮಿಸಿದ್ದು, ಹೆಚ್ಚು ಸ್ಥಾನ ಗಳಿಸಲು ಶತಾಯ-ಗತಾಯ ಹೋರಾಟವನ್ನು ಸ್ಥಳೀಯ ಮಟ್ಟದಲ್ಲಿ ನಡೆಸಿದೆ.
ಮೇಲ್ಮನೆ ಚುನಾವಣೆಯಂತೆ ಈ ಚುನಾವಣೆಯನ್ನೂ ಪ್ರತಿಷ್ಠೆಯಾಗಿ ರಾಜಕೀಯ ಪಕ್ಷಗಳು ಪರಿಗಣಿಸಿವೆ. ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಈ ಚುನಾವಣೆಯನ್ನು ದಿಕ್ಸೂಚಿ ಎಂದೇ ಪರಿಗಣಿಸಲಾಗಿದೆ. ಹೀಗಾಗಿ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ನಾನಾ ರೀತಿಯ ತಂತ್ರ-ಪ್ರತಿತಂತ್ರಗಳನ್ನು ರೂಪಿಸಿ ಮತದಾರರನ್ನು ಓಲೈಸುವ ಯತ್ನದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿವೆ.//////