Belagavi News In Kannada | News Belgaum

ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ : ಸಾಧು ಕೋಕಿಲಾರಿಗೆ ವಿಶೇಷ ಜವಾಬ್ದಾರಿ

ಬೆಂಗಳೂರು : ಕಾಂಗ್ರೆಸ್​ನ ಬೃಹತ್​ ಮೇಕೆದಾಟು ಪಾದಯಾತ್ರೆಗೆ ದಿನಗಣನೆ ಶುರುವಾಗಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಘರ್ಜಿಸೋಕೆ ಕೈ ಕಲಿಗಳು ಸಜ್ಜಾಗ್ತಿದ್ದಾರೆ. ಪಾದಯಾತ್ರೆಯ ಹೊಣೆ ಹೊತ್ತಿರುವ ಡಿಕೆ ಶಿವಕುಮಾರ್​ ಅವರು, ಪಾದಯಾತ್ರೆಯ ರೂಪುರೇಷೆಯನ್ನ ಚರ್ಚಿಸಿ ಅಂತಿಮಗೊಳಿಸಲು ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್​ನ ಬೃಹತ್​ ಪಾದಯಾತ್ರೆಗೆ ಕೇವಲ 14 ದಿನ ಬಾಕಿ.ವರ್ಷಾರಂಭಕ್ಕೆ ಕೈ ಕಟ್ಟಾಳುಗಳು ಸರ್ಕಾರದ ವಿರುದ್ಧ ಕಹಳೆ ಮೊಳಗಿಸಲು ಸಜ್ಜಾಗ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿಗೊಳಿಸಿ ಅಂತಾ ಜನವರಿ 9ನೇ ತಾರೀಖು ಕೈ ನಾಯಕರು ಬೆಂಗಳೂರಿನತ್ತ ಹೆಜ್ಜೆ ಹಾಕಲಿದ್ದಾರೆ.

ಪಾದಯಾತ್ರೆಯ ಹೊಣೆ ಹೊತ್ತಿರುವ ಡಿಕೆಶಿ ಸೋಮವಾರ ಪೂರ್ವಭಾವಿ ಸಭೆ ಕರೆದಿದ್ದಾರೆ. ಪಕ್ಷದ ಪ್ರಮುಖ 70 ಮಂದಿಯನ್ನ ಕರೆದಿರುವ ಡಿಕೆಶಿ ಪಾದಯಾತ್ರೆಯ ರೂಪುರೇಷೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರನ್ನೂ ಕರೆತರೋಕೆ ಹೊರಟಿದೆ.

 

ಪಾದಯಾತ್ರೆಯಲ್ಲಿ ಸೆಲೆಬ್ರಿಟಿಗಳು ಕೂಡ ಹೆಜ್ಜೆ ಹಾಕಲಿದ್ದು, ಸಿನಿ ತಾರೆಯರನ್ನ ಕರೆತರುವ ಜವಾಬ್ದಾರಿಯನ್ನ ಸಾಧು ಕೋಕಿಲಾರಿಗೆ ವಹಿಸಲಾಗಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರಾಗಿದ್ದ ಸಾಧು ಕೋಕಿಲಾಗೆ ಇದೀಗ ಸೆಲೆಬ್ರಿಟಿಗಳನ್ನ ಕರೆತರುವ ಜವಾಬ್ದಾರಿ ನೀಡಲಾಗಿದೆ. ಕೈ ನಾಯಕರು ಮೇಕೆದಾಟು ಪಾದಯಾತ್ರೆ ಮೂಲಕ ಪಕ್ಷವನ್ನ ಮತ್ತಷ್ಟು ಬಲ ಪಡಿಸುವ ಗುರಿ ಹೊಂದಿದ್ದಾರೆ. ಅಲ್ಲದೆ ಬೃಹತ್​ ಪಾದಯಾತ್ರೆ ಮೂಲಕ ರಾಜ್ಯದ ಜನತೆಗೆ ಮತ್ತಷ್ಟು ಹತ್ತಿರವಾಗಲು ಸಜ್ಜಾಗುತ್ತಿದ್ದಾರೆ./////