Belagavi News In Kannada | News Belgaum

ಹುಕ್ಕೇರಿ ಪುರಸಭೆಯಲ್ಲಿ ಸುಧಾರಣೆ ಮಂತ್ರ ಪಠಣ..!

ಹುಕ್ಕೇರಿ : ಪಟ್ಟಣದ ಪ್ರಥಮ ಪ್ರಜೆ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ ಅವರೇ ಸಮಯಕ್ಕೆ ಸರಿಯಾಗಿ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹಾಜರಾಗುತ್ತಿದ್ದು ಸಹಜವಾಗಿಯೇ ಇದು ಸಿಬ್ಬಂದಿಯ ಬೇಕಾಬಿಟ್ಟಿ ಹಾಜರಾತಿಗೆ ಪರೋಕ್ಷವಾಗಿ ಕಡಿವಾಣ ಹಾಕಿದೆ.

ಅಧ್ಯಕ್ಷರ ಸಮಯ ಪಾಲನೆ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸಿದ್ದು ಹೀಗಾಗಿ ಸಮಯಕ್ಕೆ ಸರಿಯಾಗಿ ಪುರಸಭೆಗೆ ಬರುತ್ತಿದ್ದಾರೆ. ಪುರಸಭೆಯಲ್ಲಿ 28 ಕಾಯಂ ನೌಕರರಿದ್ದರೆ, 63 ದಿನಗೂಲಿ ನೌಕರರಿದ್ದಾರೆ. ವಾಟರ್‍ಮೆನ್‍ಗಳು, ಕಸಗೂಡಿಸುವವರು ಸೇರಿದಂತೆ 91 ಕ್ಕೂ ಹೆಚ್ಚು ನಗರ ಆಡಳಿತದಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲರಿಗೂ ಪುರಸಭೆ ಅಧ್ಯಕ್ಷರ ಶಿಸ್ತು ಪಾಲನೆ, ಹಾಜರಾತಿ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.

ನಗರದ ಜನತೆ ಫಾರಂ ನಂ.3 ಸೇರಿದಂತೆ ಮ್ಯುಟೇಶನ್ ಇತರೆ ಸಮಸ್ಯೆ ಹೊತ್ತು ಆಗಮಿಸಿದರೆ ಅವರು ನೇರವಾಗಿ ಪುರಸಭೆ ಅಧ್ಯಕ್ಷರ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಸ್ವೀಕರಿಸಿದ ಅರ್ಜಿ, ಅವಧಿ ಎಲ್ಲವನ್ನೂ ಗಮನಿಸಿ ಸಂಬಂಧಿಸಿದ ವಿಭಾಗದವರನ್ನು ಕರೆಸಿ ವಿಚಾರಿಸುವ ಪರಂಪರೆ ಆರಂಭಗೊಂಡಿದೆ.

ಫಾರಂ ನಂ.3ಗೆ ಸಂಬಂಧಿಸಿ ಈ ಹಿಂದೆ ಇದ್ದ ಅವ್ಯವಹಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದ್ದು ವಿನಾಕಾರಣ ಕಡತ ತಿರಸ್ಕøರಿಸುವ ಪ್ರವೃತ್ತಿಗೆ ಬ್ರೇಕ್ ಹಾಕಲಾಗುತ್ತಿದೆ. ಸರ್ಕಾರದ ಸೂಚನೆ ಹಾಗೂ ಸಕಾಲ ಸೇವೆ ನಿಯಮಗಳ ಪ್ರಕಾರ ಎಲ್ಲ ಅರ್ಜಿ ಇತ್ಯರ್ಥಗೊಳಿಸಬೇಕೆಂಬ ನಿಟ್ಟಿನಲ್ಲಿ ಅಧ್ಯಕ್ಷರ ಸೂಚನೆಗಳು ಸಿಬ್ಬಂದಿಯಲ್ಲಿ ಚುರುಕು ಮೂಡಿಸಿದೆ.

ಸಿಬ್ಬಂದಿ ಇದ್ದಲ್ಲಿಗೆ ಅಧ್ಯಕ್ಷ ಹಾಜರ್ :  ಎರಡು ಬಾರಿಗೆ ಪುರಸಭೆ ಸದಸ್ಯರಾಗಿ ಆಯ್ಕೆ ಆಗಿರುವ ಎ.ಕೆ.ಪಾಟೀಲ ಮೊದಲಿನಿಂದಲೂ ಪುರಸಭೆಯ ಎಲ್ಲ ವಿಭಾಗದ ಕಾರ್ಯ ವೈಖರಿ ಬಲ್ಲವರಾಗಿದ್ದರಿಂದ ಅಲ್ಲಿ ಸುಧಾರಣೆ ಮಂತ್ರ ಪಠಿಸಲಾರಂಭಿಸಿದ್ದಾರೆ. ಸಮಸ್ಯೆಗಳು ಅಧ್ಯಕ್ಷರಿಗೆ ತಲುಪಿದಾಗ ಹಲವು ಬಾರಿ ಅರ್ಜಿದಾರರನ್ನು ನೇರವಾಗಿ ಆಯಾ ವಿಭಾಗದ ಸಿಬ್ಬಂದಿ ಇರುವ ಸ್ಥಳಕ್ಕೆ ಕರೆದೊಯ್ದು ಅವರ ಎದುರಿನಲ್ಲೇ ಕುಳಿತು ಚರ್ಚಿಸುತ್ತಿರುವುದರ ಹಿನ್ನಲೆಯಲ್ಲಿ ಆಡಳಿತ ಪಾರದರ್ಶಕ ರೂಪ ತಾಳಿದೆ. ಸಿಬ್ಬಂದಿ ಹೇಳಿದ ಕಾರಣಕ್ಕೆ ಅರ್ಜಿದಾರರು ನೀಡುವ ಪ್ರತ್ಯುತ್ತರ ಸಮೇತ ಅದಕ್ಕೆ ಸ್ಥಳದಲ್ಲೇ ಅಧ್ಯಕ್ಷರು ತಮ್ಮ ಅನುಭವ ಮೂಲಕ ಪರಿಹಾರ ಸೂಚಿಸುತ್ತಿರುವ ಹಿನ್ನಲೆಯಲ್ಲಿ ಆಡಳಿತದಲ್ಲಿ ಬದಲಾವಣೆ ಗಾಳಿ ಬೀಸಿದೆ.

ಕಾರು ಬೇಡ, ಬಿಲ್ ಬೇಡ : ಪಟ್ಟಣದ ಪ್ರಥಮ ಪ್ರಜೆಗೆ ಸುತ್ತಾಟಕ್ಕಾಗಿ ಕಾರು ಪಡೆಯಲು ಅವಕಾಶವಿದೆ. ಪುರಸಭೆಯದ್ದು ಇಲ್ಲವೇ ಬಾಡಿಗೆ ವಾಹನ ತೆಗೆದುಕೊಳ್ಳಬಹುದು. ಆದರೆ, ಸದ್ಯ ಹಾಲಿ ಅಧ್ಯಕ್ಷ ಎ.ಕೆ.ಪಾಟೀಲರು ಇಂಥ ಸೌಲಭ್ಯವನ್ನು ತಿರಸ್ಕರಿಸಿದ್ದಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ಇಲ್ಲವೇ ಅವಶ್ಯ ಬಿದ್ದಾಗ ಅಧಿಕಾರಿಗಳಿಗೆ ಲಭ್ಯ ಇರುವ ಕಾರುಗಳಲ್ಲೇ ತೆರಳಿ ಸಮಸ್ಯೆ ಆಲಿಸುವ ಕಡೆಗೆ ದೃಷ್ಟಿ ನೆಟ್ಟಿದ್ದಾರೆ. ದೂರವಾಣಿ ಬಿಲ್‍ಗಾಗಿ 2 ಸಾವಿರ ರೂ ಸಿಗುತ್ತಿದ್ದರೂ ತಿರಸ್ಕರಿಸಿರುವುದು ಗಮನಾರ್ಹ./////