Belagavi News In Kannada | News Belgaum

ಸಮಾಜದಲ್ಲಿ ನ್ಯಾಯವಾದಿಗಳ ಪಾತ್ರ ಮಹತ್ವದ್ದು : ಎ.ಕೆ.ಪಾಟೀಲ

ಹುಕ್ಕೇರಿ : ಉತ್ತಮ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿನ ನ್ಯಾಯಾಲಯದ ಇ-ಗ್ರಂಥಾಲಯ ಸಭಾಭವನದಲ್ಲಿ ಸೋಮವಾರ ಪುರಸಭೆ ಏರ್ಪಡಿಸಿದ್ದ ಹುಕ್ಕೇರಿ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಕೀಲ ವೃತ್ತಿಯಲ್ಲಿ ಸದಾ ತಾಳ್ಮೆ, ಸಂಯಮ ರೂಢಿಸಿಕೊಂಡು ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಾಗರಿಕ ಸಮಾಜದ ಒಳಿತಿಗೆ ದುಡಿಯಬೇಕು. ವೈದ್ಯರಿಗೆ ಹಾಗೂ ವಕೀಲರಿಗೆ ನಿವೃತ್ತಿ ಎನ್ನುವುದಿಲ್ಲ. ನೂತನ ಪದಾಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಿದೆ. ವಕೀಲರು ಸಮಾಜಮುಖಿ ಚಿಂತನೆಗಳಿಗೆ ಪೂರಕ ವಾತಾವರಣ ನಿರ್ಮಿಸುವತ್ತ ಚಿತ್ತ ಹರಿಸಬೇಕು. ಉನ್ನತ ಪರಂಪರೆ ಇರುವ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರ್ಯ ನಿರಂತರವಾಗಬೇಕು ಎಂದು ಅವರು ಹೇಳಿದರು.

ವಕೀಲರ ಸಂಘದ ನೂತನ ಅಧ್ಯಕ್ಷ ಆರ್.ಪಿ.ಚೌಗಲಾ, ಉಪಾಧ್ಯಕ್ಷ ಎನ್.ಐ.ದೇಮನ್ನವರ, ಕಾರ್ಯದರ್ಶಿ ಎಂ.ಕೆ.ಪಾಟೀಲ, ಸಹಕಾರ್ಯದರ್ಶಿ ಭೀಮಸೇನ ಬಾಗಿ, ಖಜಾಂಚಿ ಎ.ಬಿ.ತೊದಲ ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ಸದಾಶಿವ ಕರೆಪ್ಪಗೋಳ, ಚಂದು ಮುತ್ನಾಳೆ, ನ್ಯಾಯವಾದಿಗಳಾದ ಡಿ.ಕೆ.ಅವರಗೋಳ, ಕೆ.ಎಲ್.ಜಿನರಾಳಿ, ಉಮೇಶ ಪಾಟೀಲ, ಕೆ.ಪಿ.ಶಿರಗಾಂವಕರ, ಎಚ್.ಎಲ್.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.//////