Belagavi News In Kannada | News Belgaum

ಕೂಲಿಕಾರರು ಆರೋಗ್ಯದ ರಕ್ಷಣೆಗೆ ಒತ್ತು ನೀಡಿ: ಸಂಗಮೇಶ ರೊಡ್ಡನವರ್

ಮೂಡಲಗಿ : ಎಲ್ಲ ಕೂಲಿಕಾರರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒತ್ತು ನೀಡಬೇಕು ಎಂದು ಮೂಡಲಗಿ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ್ ಹೇಳಿದರು.
ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಮಂಗಳವಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ  ಯೋಜನೆಯಡಿ ಕೂಲಿಕಾರರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡವರಾಗಲಿ, ಶ್ರೀಮಂತರೇ ಆಗಲಿ ಆರೋಗ್ಯವೆಂಬುದು ಎಲ್ಲರಿಗೂ ಮುಖ್ಯ. ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಹಿತದೃಷ್ಟಿಯಿಂದ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದರು.

ಪಿಡಿಓ ಹಣಮಂತ ತಾಳಿಕೋಟಿ ಮಾತನಾಡಿ, ಈಗಿನ ಸಂದರ್ಭದಲ್ಲಿ ಯಾರು ಕೂಡ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರ ಆರೋಗ್ಯದ ಕಾಳಜಿ ವಹಿಸುವುದು ಕೂಡ ನರೇಗಾ ಯೋಜನೆಯ ಭಾಗವಾಗಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷರಾದ ಲಕ್ಷ್ಮಣ ಕತ್ತಿ ಹಾಗೂ ಉಪಾಧ್ಯಕ್ಷೆ ಬೌರವ್ವ ಹೊಸಟ್ಟಿ ಶಿಬಿರಕ್ಕೆ ಚಾಲನೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹೇಶ ಕಂಕಣವಾಡಿ ಹಾಗೂ ಸಿಬ್ಬಂದಿ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಿ, ಔಷಧಿಗಳನ್ನು ವಿತರಿಸಿದರು.

ತಾಂತ್ರಿಕ ಸಂಯೋಜಕ ನಾಗಾರ್ಜುನ ಈಳಗೇರ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ, ಗ್ರಾಪಂ ಸದಸ್ಯರು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ನರೇಗಾ ಕೂಲಿಕಾರರು ಸೇರಿ ಇನ್ನಿತರರು ಹಾಜರಿದ್ದರು.//////