Belagavi News In Kannada | News Belgaum

ಗ್ರಾಮೀಣ ಜನರಿಗೆ ಆರೋಗ್ಯ ಶಿಬಿರ ಸಹಕಾರಿ: ಎಸ್.ಎಸ್. ದೇಸಾಯಿ

ಗೋಕಾಕ:  ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಗ್ರಾಮಗಳಲ್ಲಿ ಆಯೋಜಿಸುವ ಇಂತಹ ಶಿಬಿರಗಳ ಪ್ರಯೋಜನವನ್ನು ಪ್ರತಿಯೊಬ್ಬ ಕೂಲಿಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಗೋಕಾಕ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಎಸ್.ಎಸ್. ದೇಸಾಯಿ ಹೇಳಿದರು.

ತಾಲೂಕಿನ ಮಿಡಕನಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೇಶಪ್ಪನಟ್ಟಿ ಗ್ರಾಮದಲ್ಲಿ  ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಐಇಸಿ ಚಟುವಟಿಕೆಯಡಿ  ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.

ಉಚಿತ ಆರೋಗ್ಯ ಶಿಬಿರ ಬಡಜನರ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ. ಕೆಲವೊಂದು ಕಾಯಿಲೆಗಳು ಮಾನವನಿಗೆ ಮಾರಕವಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ಸಣ್ಣ ಜ್ವರವನ್ನು ಕೂಡ ನಿರ್ಲಕ್ಷ್ಯ ಮಾಡಬಾರದು. ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.

ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಎಸ್.ಸಿ.  ಹಿರೇಮಠ ಮತ್ತು ಎಸ್.ವೈ. ವಾಲಿ  ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು. ಪಿಡಿಓ ಅಲ್ಲಾಭಕ್ಷ ಮಾವುತ್, ತಾಲೂಕು ಐಇಸಿ ಸಂಯೋಜಕ ಶಂಕರ ಗುಜನಟ್ಟಿ, ಬಿಎಪ್ ಟಿ, ಕಾಯಕ ಬಂಧುಗಳು,  ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ನರೇಗಾ ಕೂಲಿಕಾರರು ಸೇರಿದಂತೆ ಗ್ರಾಮದ ನೂರಾರು ಜನರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಇದೇ ಸಂದರ್ಭದಲ್ಲಿ ಅನೇಕರಿಗೆ ಕೋವಿಡ್ ಲಸಿಕೆಯನ್ನು ಕೂಡ ನೀಡಲಾಯಿತು.//////